ಕನ್ನಡಪ್ರಭ ವಾರ್ತೆ ಬೇಲೂರುವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಳಸಿನಕೆರೆ ರಸ್ತೆ ಸಮೀಪದ ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ಹಸಿರು ಭೂಮಿ ಪ್ರತಿಷ್ಠಾನ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಹಾಸನ ಜಿಲ್ಲೆಯಲ್ಲಿ ಸುಮಾರು ಐದು ಲಕ್ಷ ಗಿಡಗಳನ್ನು ನೆಡುವ ಗುರಿಯೊಂದಿಗೆ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಿರುವ ಜಿಲ್ಲಾಡಳಿತದ ಕ್ರಮವನ್ನು ಅವರು ಶ್ಲಾಘಿಸಿದರು. ಪರಿಸರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ನಿರಂತರವಾಗಿ ಪರಿಸರ ಸಂರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಸರ ದಿನದ ಶುಭಾಶಯಗಳನ್ನು ಹಂಚಿಕೊಳ್ಳುವುದಕ್ಕಿಂತ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರದ ಬಗ್ಗೆ ಕಾಳಜಿ ತೋರಬೇಕು. ವಾಹನಗಳು ಹಾಗೂ ಕೈಗಾರಿಕೆಗಳಿಂದ ಹೆಚ್ಚುತ್ತಿರುವ ಮಾಲಿನ್ಯವನ್ನು ತಗ್ಗಿಸಲು ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸುವುದು ಅಗತ್ಯ. ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು. ಕಾಡು ಪ್ರದೇಶಗಳು ಕಡಿಮೆಯಾಗುತ್ತಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು, ಪ್ರಕೃತಿಯನ್ನು ಉಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯದರ್ಶಿ ನೂರ್ ಅಹಮದ್ ಮಾತನಾಡಿ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ವಿಶೇಷ ದಿನಗಳನ್ನು ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಸಂಸ್ಕೃತಿ ಬೆಳೆಸಬೇಕು , ನೆಟ್ಟ ಗಿಡಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಎಂ.ಎನ್. ಮಂಜುನಾಥ್ , ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷೆ ಸೌಭಾಗ್ಯ ಆಂಟೋನಿ, ಪುರಸಭೆ ಸದಸ್ಯೆ ಸೌಮ್ಯ ಸುಬ್ರಹ್ಮಣ್ಯ, ಲಾವಣ್ಯ, ವಿಶ್ವ, ಸಂಪತ್, ಜಯಸೂರ್ಯ ಉಪಸ್ಥಿತರಿದ್ದರು.