ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮರಗಿಡಗಳು ಪರಿಸರದ ಜೀವಕೋಶಗಳಿದ್ದಂತೆ ಎಂದು ಡಿವೈಎಸ್ಪಿ ಬಾಬು ಅಂಜನಪ್ಪ ಹೇಳಿದರು.ಜಯ ಕರ್ನಾಟಕ ಜಿಲ್ಲಾ ಸಂಘಟನೆ, ಜಿಲ್ಲಾ ಮಹಿಳಾ ಘಟಕದ ವತಿಯಿಂದ ಮಹಿಳಾ ಠಾಣೆ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡಗಳನ್ನು ನೆಟ್ಟು ಮಾತನಾಡಿದ ಅವರು, ಪರಿಸರ ನಮ್ಮ ಜೀವ ರಕ್ಷಕವಿದ್ದಂತೆ. ಮನುಷ್ಯನ ಅತಿಯಾದ ಆಸೆಗೆ ಇಂದು ಪರಿಸರ ವಿನಾಶದತ್ತ ಸಾಗಿದೆ. ಹೀಗೆ ಮುಂದುವರೆದರೆ ಮುಂದೊಂದು ದಿನ ಜಗತ್ತಿಗೇ ಅಪಾಯದ ಸ್ಥಿತಿ ಬಂದೊದಗುತ್ತದೆ. ಪರಿಸರ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಜಿಲ್ಲಾ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ, ಪರಿಸರದ ಉಳಿವಿಗಾಗಿ ಸಂಘ, ಸಂಸ್ಥೆಗಳು ಕೂಡ ಕೆಲಸ ಮಾಡಬೇಕಾಗಿದೆ. ಶಾಲಾ, ಕಾಲೇಜುಗಳಲ್ಲಿ ಪರಿಸರವನ್ನು ಉಳಿಸಬೇಕಾಗಿದೆ. ಮುಖ್ಯವಾಗಿ ಯುವ ಜನಾಂಗಕ್ಕೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.ಜಿಲ್ಲಾ ಜಯ ಕರ್ನಾಟಕ ಸಂಘಟನೆ ಮಹಿಳಾ ಘಟಕದ ಅಧ್ಯಕ್ಷೆ ನಾಜೀಮಾ ಮಾತನಾಡಿ, ಯಾರ ನೆರವೂ ಇಲ್ಲದೇ ಮಾಡಬಹುದಾದ ಕೆಲಸ ಎಂದರೆ ಗಿಡಗಳನ್ನು ನೆಡುವುದು ಮಾತ್ರ. ಪರಿಸರದ ಉಳಿವು ಇಂದು ಅಗತ್ಯವಾಗಿದೆ. ಪರಿಸರ ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ನೀರಿನ ಬಾಟಲಿಯಂತೆ ಆಮ್ಲಜನಕದ ಬಾಟಲಿ ಯನ್ನೂ ಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಭರತ್ ಕುಮಾರ್, ಸತ್ಯನಾರಾಯಣ್, ಪೊಲೀಸ್ ಸಬ್ ಇನ್ ಸ್ಪೆಕ್ಟರ್ ವಗ್ಗಣ್ಣನವರ್, ಎಸ್ಐ ರಮೇಶ್, ವಿಜಯ ಕುಮಾರ್, ಅಧಿಕಾರಿಗಳಾದ ರಮೇಶ್, ಗೌರಿ, ಸುಪ್ರಿಯಾ, ಆಶಾ, ರವಿಕುಮಾರ್, ಸತೀಶ್, ಜಯಂತಿ, ಮಿರಾಂಡ, ರಾಘವೇಂದ್ರ, ಹರೀಶ್ ಹಾಗೂ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳಿದ್ದರು.