ಕೊಯಿರಾ ಸರ್ಕಾರಿ ಶಾಲಾ ಆವರಣದಲ್ಲಿ ಮರಗಳು ಮಾಯ

| Published : Feb 10 2024, 01:46 AM IST

ಸಾರಾಂಶ

ಕುಂದಾಣ: ಹೋಬಳಿಯ ಕೊಯಿರಾ ಸರ್ಕಾರಿ ಶಾಲಾ ಆವರಣದಲ್ಲಿದ್ದ 35 ವರ್ಷಗಳಷ್ಟು ಹಳೆಯ ಮರಗಳು ಏಕಾಏಕಿ ಕಾಣೆಯಾಗಿದ್ದು, ಮರ ಕಡಿದವರ ವಿರುದ್ಧ ಪರಿಸರವಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಂದಾಣ: ಹೋಬಳಿಯ ಕೊಯಿರಾ ಸರ್ಕಾರಿ ಶಾಲಾ ಆವರಣದಲ್ಲಿದ್ದ 35 ವರ್ಷಗಳಷ್ಟು ಹಳೆಯ ಮರಗಳು ಏಕಾಏಕಿ ಕಾಣೆಯಾಗಿದ್ದು, ಮರ ಕಡಿದವರ ವಿರುದ್ಧ ಪರಿಸರವಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ 12 ವರ್ಷಗಳಿಂದ ಈ ಶಾಲೆಯಲ್ಲಿ ಯಾವುದೇ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿಲ್ಲ. ಇಲ್ಲಿದ್ದ ಶಾಲೆಯನ್ನು ಗ್ರಾಮದಿಂದ ಅರ್ಧ ಕಿ.ಮೀ. ದೂರಕ್ಕೆ ಸ್ಥಳಾಂತರಿಸಿದ್ದು, ಈ ಸ್ಥಳವನ್ನು ಶಿಕ್ಷಣ ಇಲಾಖೆಯ ಸುಪರ್ದಿಗೆ ಒಪ್ಪಿಸಲಾಗಿದೆ. ಇಲ್ಲಿದ್ದ ಬೆಲೆ ಬಾಳುವ ಸಿಲ್ವರ್ ಮರಗಳನ್ನು ಕಿಡಿಗೇಡಿಗಳು ಕತ್ತರಿಸಿ, ಟಿಂಬರ್‌ಗಳಿಗೆ ಮಾರಾಟ ಮಾಡಿದ್ದಾರೆ ಎಂಬ ದೂರುಗಳು ಕೇಳಿ ಬಂದಿದೆ.

ಮರಗಳು ಕಾಣೆಯಾಗಿರುವ ಕುರಿತು ಗ್ರಾಮದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವುದರಿಂದ ಮರ ಕಡಿದಿರುವವರು ಪ್ರಭಾವಿ ಮುಖಂಡರಾಗಿದ್ದು ಅವರನ್ನು ರಕ್ಷಿಸಲು ಶಾಲಾ ಅಭಿವೃದ್ಧಿ ಮಂಡಳಿಯೂ ಮುಂದಾಗಿದೆ. ಇಲ್ಲಿದ್ದ ಮರಗಳನ್ನು ಕಡಿಯಲು ನಾವೇ ಅನುಮತಿಸಿದ್ದೇವೆ ಎಂದು ಎಸ್‌ಡಿಎಂಸಿ ಸದಸ್ಯರು ತಿಳಿಸುತ್ತಿದ್ದಾರೆ. ಆದರೆ, ಈಗಾಗಲೇ ಇಲ್ಲಿದ್ದ ಶಾಲೆಯೂ 12 ವರ್ಷಗಳ ಮುನ್ನವೇ ಸ್ಥಳಾಂತರವಾಗಿದ್ದು ಹೊಸ ಶಾಲೆಗೆ ಮಾತ್ರ ಎಸ್‌ಡಿಎಂಸಿ ಸಂಬಂಧಪಡುತ್ತದೆ. ಹಳೆಯ ಶಾಲೆ ಶಿಕ್ಷಣ ಇಲಾಖೆಯ ಸುಪರ್ದಿಯಲ್ಲಿದೆ. ತಪ್ಪಿತಸ್ಥರನ್ನು ಕಾಪಾಡಲು ತಂತ್ರ ನಡೆಸುತ್ತಿದ್ದಾರೆ. ನಾವು ವಿದ್ಯಾರ್ಥಿಯಾಗಿದ್ದಾಗ ಇಲ್ಲಿ ಮರಗಳನ್ನು ನೆಡಲಾಗಿತ್ತು ಎಂದು ಹಳೆಯ ವಿದ್ಯಾರ್ಥಿಗಳು ಆಕ್ರೋಶಿತಗೊಂಡಿದ್ದಾರೆ. ಕೊಯಿರಾ ಗ್ರಾಮದಲ್ಲಿರುವ ಹಳೆಯ ಶಾಲೆಯೂ ಬಂಡೆ ಕಲ್ಲಿನಿಂದ ನಿರ್ಮಾಣವಾಗಿದ್ದು, ತಪ್ಪಿತಸ್ಥರನ್ನು ಕಾಪಾಡಲು ಶಾಲಾ ಶಿಕ್ಷಕ ವೃಂದ ಸೇರಿದಂತೆ ಸ್ಥಳೀಯರ ಮುಖಂಡರು ಸಭೆ ನಡೆಸಿ, ಮರ ಕಡಿದವರಿಂದ ಎಸ್‌ಡಿಎಂಸಿಗೆ 15 ಸಾವಿರ ರು. ಪಾವತಿ ಮಾಡಿಸಿದ್ದಾರೆ. ಈ ವಿಚಾರವೂ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಯಾರಿಗೂ ತಿಳಿಯದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಬಾಕ್ಸ್ ..............

ಎಸ್‌ಡಿಎಂಸಿ ಎಡವಟ್ಟು

ಶಾಲಾ ಅಭಿವೃದ್ಧಿ ಮಂಡಳಿ ಸ್ಥಳೀಯ ಮುಖಂಡರನ್ನು ಕಾಪಾಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ತನ್ನ ವ್ಯಾಪ್ತಿಗೆ ಬರದ ಹಳೆಯ ಶಾಲಾ ಕಟ್ಟಡಕ್ಕೆ ಸಂಬಂಧಿಸಿದಂತೆ ಕಳೆದ ಆಗಸ್ಟ್‌ನಲ್ಲಿ ಅಲ್ಲಿರುವ ಕಟ್ಟಡ, ಮರ ತೆರವು ಮಾಡಬೇಕೆಂದು ಸಭಾ ನಡಾವಳಿ ದಾಖಲೆ ಸೃಷ್ಟಿಸಿದೆ. ಆದರೆ ಈ ಕುರಿತು ಯಾವುದೇ ಟೆಂಡರ್ ಪ್ರಕ್ರಿಯೆಗಳು ನಡೆದಿಲ್ಲ. ಏಕಾಏಕಿ ಮರ ಕಡಿದಿರುವುದರಿಂದ ಅದಕ್ಕೆ ದಂಡವಾಗಿ 15 ಸಾವಿರ ಎಸ್‌ಡಿಎಂಸಿಗೆ ಪಾವತಿಯಾಗಿದೆ. ಇವರೇ ಅನುಮತಿ ಕೊಟ್ಟು, ಅವರಿಗೆ ದಂಡ ಪಾವತಿ ಮಾಡಿರುವುದು ಎಷ್ಟು ಸಮಂಜಸ ಎಂಬುದು ಪರಿಸರವಾದಿಗಳು ಪ್ರಶ್ನಿಸಿದ್ದಾರೆ.

ಕೋಟ್..........

ಹಳೆಯ ಶಾಲಾ ಕಟ್ಟಡದಲ್ಲಿ ಮರ ಕಟಾವು ಮಾಡಲು ಎಸ್‌ಡಿಎಂಸಿ ಒಪ್ಪಿಗೆಯಂತೆ ಕಟಾವು ಮಾಡಲಾಗಿದೆ. ಮರ ಕಟಾವು ಮಾಡಿದವರು 15 ಸಾವಿರ ರು. ಹಣ ಪಾವತಿಸಿದ್ದಾರೆ. -ಮುಖ್ಯ ಶಿಕ್ಷಕ, ಕೊಯಿರಾ ಪ್ರಾಥಮಿಕ ಶಾಲೆ

ಕೋಟ್...........

ಸರ್ಕಾರದ ಚರಾಸ್ತಿ ಮತ್ತು ಸಿರಾಸ್ತಿಯನ್ನು ಹರಾಜು ಮೂಲಕವೇ ಮಾರಾಟ ಮಾಡಬೇಕಾಗುತ್ತದೆ. ೩೫ ವರ್ಷಗಳಿಂದ ಇದ್ದ ಮರವನ್ನು ಯಾವುದೇ ಕಾನೂನು ಪಾಲಿಸದೆ ಕಡಿಯಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. -ಚಿಕ್ಕೇಗೌಡ, ಪರಿಸರವಾದಿ, ಕೊಯಿರಾ

ಕೋಟ್...........

ಮರ ಕಟಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸ್ಥಳೀಯ ಇಲಾಖೆಯ ಗಮನಕ್ಕೆ ತಂದು ವರದಿ ನೀಡಲಾಗಿದೆ. ಯಾವುದೇ ರೀತಿಯ ಕಾನೂನು ತೊಡಕುಗಳಿದ್ದರೆ, ಮೇಲಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. - ಕೃಷ್ಣರಾಮ್, ಸಿಆರ್‌ಪಿ, ಕೊಯಿರ ಕ್ಲಸ್ಟರ್