ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತೆ ಸ್ಕಂದಗಿರಿ ಹಾಗೂ ಕೈವಾರ ಬೆಟ್ಟದಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಆರು ತಿಂಗಳ ಬಳಿಕ ಮತ್ತೆ ಶುರು । ಶುಲ್ಕ ಹೆಚ್ಚಳಕ್ಕೆ ಚಾರಣಿಗರಿಂದ ತೀವ್ರ ಆಕ್ಷೇಪ । ಮೂಲ ಸೌಕರ್ಯ ಇಲ್ಲದಿರುವಾಗ ದುಬಾರಿ ಬೆಲೆ ಏಕೆ

ದಯಾಸಾಗರ್ ಎನ್.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿನ ಕಳವಾರ ಗ್ರಾಮದ ಬಳಿ ಇರುವ ಸ್ಕಂದಗಿರಿ ಬೆಟ್ಟ ಹಾಗೂ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಬೆಟ್ಟದಲ್ಲಿ ಬರೋಬ್ಬರಿ ಆರು ತಿಂಗಳ ಬಳಿಕ ಇದೀಗ ಚಾರಣಕ್ಕೆ ಅರಣ್ಯ ಇಲಾಖೆ ಹಸಿರು ನಿಶಾನೆ ನೀಡಿದೆ. ಹಾಗಾಗಿ ಪ್ರಕೃತಿ ಹಾಗೂ ಚಾರಣ ಪ್ರಿಯರು ಮತ್ತೆ ಸ್ಕಂದಗಿರಿಯತ್ತ ಮುಖ ಮಾಡಿದ್ದಾರೆ.

ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆಯಿಂದ ಜನರು ಸ್ಕಂದಗಿರಿತ್ತ ಮುಖ ಮಾಡುತ್ತಿದ್ದರು. ಆದರೆ ಕೊಡಗು ಹಾಗೂ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ನಡೆದ ಕೆಲವು ಅಹಿತಕರ ಘಟನೆಯಿಂದ ರಾಜ್ಯ ಸರ್ಕಾರ ಕಳೆದ ಆರು ತಿಂಗಳುಗಳಿಂದ ರಾಜ್ಯದಲ್ಲಿರುವ ಎಲ್ಲಾ ಚಾರಣ ತಾಣಗಳಲ್ಲಿ ಚಾರಣಕ್ಕೆ ನಿರ್ಬಂಧಿಸಲಾಗಿತ್ತು. ಆದರೆ ಈಗ ಅರಣ್ಯ ಪ್ರದೇಶದ ಸುರಕ್ಷತೆ ಹಾಗೂ ಚಾರಣ ನಿರ್ವಹಣೆಗೆ ಸಂಬಂಧಿಸಿದಂತೆ ಎಸ್‌ಒಪಿ ರೂಪಿಸಿ ಅನುಷ್ಠಾನಗೊಳಿಸಿದ ಹಿನ್ನಲೆ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತೆ ಸ್ಕಂದಗಿರಿ ಹಾಗೂ ಕೈವಾರ ಬೆಟ್ಟದಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಇನ್ನೂ ಸ್ಕಂದಗಿರಿ ಹಾಗೂ ಕೈವಾರ ಬೆಟ್ಟದಲ್ಲಿ ಚಾರಣಕ್ಕೆ ಅವಕಾಶ ಸಿಕ್ಕಿದ್ದೆ ತಡ, ಚಾರಣಿಗರು ಆಗಮಿಸಿದ್ದು, ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಬೇಕು, ಬೆಟ್ಟದ ತುದಿಯಿಂದ ಸುತ್ತಲಿನ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಬೇಕು ಎಂಬ ಆಸೆಯಿಂದ ಚಾರಣಿಗರು ಸ್ಕಂದಗಿರಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಚಾರಣಿಗರ ಸ್ವರ್ಗಲೋಕ ಎಂದೆ ಖ್ಯಾತಿಯಾಗಿರುವ ಸ್ಕಂದಗಿರಿ ಬೆಟ್ಟ ಸಮುದ್ರ ಮಟ್ಟದಿಂದ 1,350 ಮೀಟರ್‌ಗಳ ಎತ್ತರದಲ್ಲಿದೆ. ಇನ್ನೂ ರಾಜಧಾನಿ ಬೆಂಗಳೂರಿನಿಂದ ಕೇವಲ 66 ಕಿಲೋ ಮೀಟರ್ ದೂರ ಇರುವ ಕಾರಣ ರಾಜ್ಯದ ಸಾಕಷ್ಟು ಚಾರಣಿಗರು ಸೇರಿದಂತೆ ಐಟಿ ಬಿಟಿಯ ಟೆಕ್ಕಿಗಳು ವಾರಾಂತ್ಯ ಬಂದ್ರೆ ಸಾಕು ತಮ್ಮ ದೇಹ ಮತ್ತು ಮನಸ್ಸಿಗೆ ಮುದ ನೀಡಲು ಸ್ಕಂದಗಿರಿಯತ್ತ ಮುಖ ಮಾಡ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕರ್ನಾಟಕ ಇಕೊ ಟೂರಿಸಂ ಬೋರ್ಡ್‌ನವರು ಮನಸ್ಸೊ ಇಚ್ಚೆ ಪ್ರವೇಶ ಶುಲ್ಕ ಏರಿಕೆ ಮಾಡಿ ಚಾರಣಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ವ್ಯಕ್ತಿಗೆ 250 ರು. ಪ್ರವೇಶ ಶುಲ್ಕ ಹಾಗೂ ಶನಿವಾರ, ಭಾನುವಾರ ಚಾರಣ ಕೈಗೊಳ್ಳುವವರಿಗೆ 500 ರು. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಆದರೆ ಚಾರಣ ಹಣವಿದ್ದವರಿಗೆ ಮಾತ್ರ ಎನ್ನುವಂತಾಗಿದೆ.

ಸ್ಕಂದಗಿರಿ ಬೆಟ್ಟಕ್ಕೆ ಚಾರಣಕ್ಕೆ ಯಾವುದೇ ಮೆಟ್ಟಿಲಾಗಲಿ, ಟಾರ್ ರಸ್ತೆಯಾಗಲಿ, ಕೇಬಲ್ ಕಾರ್‌ಗಳಾಗಲಿ ಮತ್ತು ಇಕೊ ವಾಹನಗಳಾಗಲಿ ಇಲ್ಲ. ಪ್ರಕೃತಿ ದತ್ತವಾದ ಕಾಡಿನ ಮಾರ್ಗವೇ ಗತಿ. ವಿಶ್ರಾಂತಿಗೆ ಕೊಠಡಿಗಳು, ಹಾದಿ ತಪ್ಪಿದರೆ ಅಥವಾ ಕಾಡು ಪ್ರಾಣಿಗಳಿಂದ ರಕ್ಷಿಸಲು ಭದ್ರತಾ ಸಿಬ್ಬಂದಿ ಮತ್ತು ಕನಿಷ್ಟ ಕುಡಿಯುವ ನೀರು ಸೇರಿದಂತೆ ಯಾವುದೆ ಮೂಲಭೂತ ಸೌಕರ್ಯಗಳು ಇಲ್ಲವೆ ಇಲ್ಲ. ನಿರ್ವಹಣೆಗೆ ಹಣ ಖರ್ಚು ಮಾಡಬೇಕಾದ ಯಾವ ಅನಿವಾರ್ಯತೆಯೂ ಇಲ್ಲ. ಆದರೂ ಸಹಾ ಕರ್ನಾಟಕ ಇಕೊ ಟೂರಿಸಂ ಬೋರ್ಡ್ ಶನಿವಾರ ಭಾನುವಾರ ಎರಡು ದಿನಗಳ ಕಾಲ ಬರುವ ಚಾರಣಿಗರಿಗೆ ಅದ್ಯಾವ ಆಧಾರದ ಮತ್ತು ನಿಯಮಗಳ ಮೇಲೆ 250 ರು. ಇದ್ದ ಪ್ರವೇಶ ಶುಲ್ಕವನ್ನು ಇದ್ದಕ್ಕಿದ್ದ ಹಾಗೆ 607 ರು.ಗೆ ಏರಿಕೆ ಮಾಡಿದೆ ಗೊತ್ತಿಲ್ಲ.

ಅದರಲ್ಲಿ 500 ರು. ಪ್ರವೇಶ ಶುಲ್ಕ, ಟಿಕೆಟ್ ಬುಕಿಂಗ್‌ಗೆ ಆನ್ ಲೈನ್ ವ್ಯವಸ್ಥೆ ಮಾಡಿದ್ದಕ್ಕೆ 14 ರು. 50 ಪೈಸೆ, ಜಿಎಸ್‌ಟಿ ಶೇ. 18 ಪರ್ಸೆಂಟ್ ಅಂತ 607 ರು.ಗಳ ಕೊಳ್ಳೆ ಹೊಡಿತಿದೆ. ಇದರಿಂದ ಮಧ್ಯಮ, ಕೆಳ ಮಧ್ಯಮ ವರ್ಗದವರು ದುಬಾರಿ ಹಣ ನೀಡಿ ಚಾರಣ ಮಾಡೋದು ಕನಸಿನ ಮಾತಾಗಿದೆ ಎಂದು ಚಾರಣಕ್ಕೆ ಬಂದಿದ್ದ ಚಿತ್ರದುರ್ಗದ ಮಹೇಶ್ ಮತ್ತು ಸಂಗಡಿಗರು, ಬೆಂಗಳೂರಿನ ಸ್ವಾತಿ ಹಾಗೂ ಅವರ ಜೊತೆ ಬಂದಿದ್ದವರು ಮತ್ತು ಇತರ ಚಾರಣಿಗರು ಅಸಮಧಾನ ವ್ಯಕ್ತಪಡಿಸಿ ಕರ್ನಾಟಕ ಇಕೊ ಟೂರಿಸಂ ಬೋರ್ಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂದಿಗಿರಿಧಾಮಕ್ಕೆ ಬರೊ ಪ್ರವಾಸಿಗರು, ಸ್ವಲ್ಪ ತಡವಾಗಿ ಬಂದರೆ ನಂದಿಗಿರಿಧಾಮಕ್ಕೆ ವಾಹನಗಳ ಪ್ರವೇಶಕ್ಕೆ ಅವಕಾಶ ಸಿಗದೆ ಇದ್ದಾಗ ಪರ್ಯಾಯವಾಗಿ ಸ್ಕಂದಗಿರಿಯತ್ತ ಮುಖ ಮಾಡ್ತಾರೆ. ಈಶಾ ಕೇಂದ್ರಕ್ಕೆ ಬಂದವರೂ ಸಹಾ ಆಗಮಿಸಿ, ಸ್ಕಂದಗಿರಿಯಲ್ಲಿ ಸಿಗುವ ಪ್ರಕೃತಿಯ ರಮ್ಯ ಸೊಬಗು, ಗಿರಿಯ ಮೇಲೆ ನಡೆಯುವಾಗ ಬೆಳ್ಳಿ ಮೊಡಗಳಲ್ಲಿ ಪಯಣಸಿದ ಅನುಭವ, ಸೂರ್ಯೋದಯದ ವಿಹಂಗಮ ನೋಟ ನೋಡಿ ಅಸ್ವಾದಿಸ ಬಯಸುತ್ತಾರೆ, ಆದರೆ ಬರೊ ಚಾರಣಿಗರಿಗೆ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸದ ಕರ್ನಾಟಕ ಇಕೊ ಟೂರಿಸಂ ಬೋರ್ಡ, ಮನಸ್ಸೊ ಇಚ್ಚೆ ಪ್ರವೇಶ ಶುಲ್ಕ ನಿಗದಿ ಮಾಡಿ ಚಾರಣಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಟ್ಟದ ಕಡೆಗೆ ಹೋಗುವ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಪರಿಸರ ಸ್ನೇಹಿ ವಾಹನಗಳಾಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಇಲ್ಲ. ಕನಿಷ್ಠ ಪಕ್ಷ ಪರಿಸರ ಪ್ರವಾಸೋದ್ಯಮ ಇಲಾಖೆ ಭದ್ರತೆ ಮತ್ತು ಶೌಚಾಲಯಗಳ ವ್ಯವಸ್ಥೆಯನ್ನಾದರೂ ಕಲ್ಪಿಸಬೇಕು ಎಂದು ಚಾರಣಿಗರೊಬ್ಬರು ಆಗ್ರಹಿಸಿದ್ದಾರೆ.

ಹೊಸ ಶುಲ್ಕದಿಂದ ಕುಟುಂಬಗಳಿಗೆ ಚಾರಣ ದುಬಾರಿಯಾಗಲಿದೆ. ನಾಲ್ವರು ಕುಟುಂಬ ಸದಸ್ಯರು ತಲಾ 500 ಮತ್ತು 107 ಹೆಚ್ಚುವರಿ ಶುಲ್ಕ ಸೇರಿ 607 ರು. ಪಾವತಿಸಿದರೆ ಒಟ್ಟು 2,428 ರು. ಆಗುತ್ತದೆ. ಗುಂಪು ಟಿಕೆಟ್‌ಗಳ ವ್ಯವಸ್ಥೆಯೂ ಇಲ್ಲದಿರುವಾಗ ಇದು ಬಹಳ ಹೊರೆಯಾಗಲಿದೆ ಎಂದು ಮತ್ತೊಬ್ಬ ಪ್ರವಾಸಿಗರು ತಿಳಿಸಿದ್ದಾರೆ

ಸಿಕೆಬಿ-3 ಮೊಡಗಳ ಹೊದಿಕೆ ಹೊದ್ದಿರುವ ಸ್ಕಂದ ಗಿರಿ

ಸಿಕೆಬಿ-4 ಸೂರ್ಯೊದಯದಲ್ಲಿ ಮೊಡಗಳ ಹೊದಿಕೆ ಹೊದ್ದಂತಿರುವ ಸ್ಕಂದ ಗಿರಿ