ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಹನುಮ ಧ್ವಜ ತೆರವು ವಿರೋಧಿಸಿ ಸೋಮವಾರ ಸಹಸ್ರಾರು ರಾಮಭಕ್ತರು ಕೆರಗೋಡು ಗ್ರಾಮದಿಂದ ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ನಡೆಸಿದರು. ಜೆಡಿಎಸ್-ಬಿಜೆಪಿ ಪಕ್ಷದ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಹನುಮ ಧ್ವಜ ಹಿಡಿದ ರಾಮಭಕ್ತರು ಹಾಗೂ ಕೆರಗೋಡು ಗ್ರಾಮಸ್ಥರು ದಾರಿಯುದ್ದಕ್ಕೂ ಜೈ ಹನುಮಾನ್ ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿಬಂದರು.ಬೆಳಗ್ಗೆ ೮ ಗಂಟೆಗೆ ಕೆರಗೋಡು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಮಂಡ್ಯ-ಯಡಿಯೂರು ರಸ್ತೆಯಲ್ಲಿ ಈಡುಗಾಯಿ ಒಡೆದು, ಕರ್ಪೂರ ಹಚ್ಚಿದರು. ಬಸ್‌ನಿಲ್ದಾಣದ ಬಳಿಯಿಂದ ಪಾದಯಾತ್ರೆ ಆರಂಭಗೊಂಡಿತು. ‘ಜೈಶ್ರೀರಾಮ್’, ‘ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು’ ಎಂಬ ಘೋಷಣೆಯೊಂದಿಗೆ ಮುನ್ನಡೆದರು.
ಮಾಜಿ ಸಚಿವರಾದ ಕೆ.ಸಿ.ನಾರಾಯಣಗೌಡ, ಜನಾರ್ಧನರೆಡ್ಡಿ, ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂಗೌಡ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಅಶೋಕ್ ಜಯರಾಂ ಸೇರಿದಂತೆ ಸ್ಥಳೀಯ ಮುಖಂಡರು ಕೆರಗೋಡಿನಿಂದಲೇ ಕಾರ್ಯಕರ್ತರೊಂದಿಗೆ ಆಗಮಿಸಿದರು. ಎಸ್.ಐ.ಕೋಡಿಹಳ್ಳಿ ಬಳಿ ಪಾದಯಾತ್ರೆಗೆ ಮಾಜಿ ಸಚಿವ ಸಿ.ಟಿ. ರವಿ ಸೇರ್ಪಡೆಗೊಂಡರು.ಎಸ್.ಐ.ಕೋಡಿಹಳ್ಳಿ, ಹುಲಿವಾನ, ಸಾತನೂರು, ಚಿಕ್ಕಮಂಡ್ಯ ಮಾರ್ಗವಾಗಿ ಸುಮಾರು ೧೫ ಕಿಮೀ ದೂರ ಸಾಗಿಬಂದ ಪಾದಯಾತ್ರೆ ಮಧ್ಯಾಹ್ನ ೧೨.೩೦ರ ಸಮಯಕ್ಕೆ ಮಂಡ್ಯ ನಗರ ಪ್ರವೇಶಿಸಿತು. ನಗರದ ಶ್ರೀ ಕಾಳಿಕಾಂಬ ದೇವಾಲಯಕ್ಕೆ ಪಾದಯಾತ್ರೆ ಆಗಮಿಸಿತು. ನಂತರ ಶ್ರೀ ಕಾಳಿಕಾಂಬ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯು ತೆರಳಿತು. ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೆರಗೋಡಿನಲ್ಲಿ ಹನುಮಧ್ವಜದ ಮರು ಸ್ಥಾಪನೆಗೆ ಆಗ್ರಹಿಸಿದರು.
ಪೊಲೀಸರ ಕಟ್ಟೆಚ್ಚರಪಾದಯಾತ್ರೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಕೆರಗೋಡಿನಿಂದ ಆಗಮಿಸುವ ಪಾದಯಾತ್ರೆ ಮಾರ್ಗ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ನೇತೃತ್ವದಲ್ಲಿ ಬಂದೋಬಸ್ತ್ ಆಯೋಜಿಸಲಾಗಿತ್ತು. ಎಎಸ್‌ಪಿ, ಇನ್ಸ್‌ಪೆಕ್ಟರ್‌ಗಳು, ೧೦ ಕೆಎಸ್‌ಆರ್‌ಪಿ ತುಕಡಿ, ಜಿಲ್ಲಾ ಸಶಸ್ತ್ರ ಮೀಸಲುಪಡೆ ಪೊಲೀಸರು ಸೇರಿ ೪೦೦ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮುಂಜಾಗ್ರತೆಯಾಗಿ ಕೆರಗೋಡು ಗ್ರಾಮದಲ್ಲೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಧ್ವಜ ಸ್ತಂಭದ ಬಳಿ ಯಾರೂ ತೆರಳದಂತೆ ಖಾಕಿ ಸರ್ಪಗಾವಲು ಹಾಕಲಾಗಿತ್ತು.
ಫ್ಲೆಕ್ಸ್‌ಗೆ ಹೊಡೆದ ಕಲ್ಲು ವ್ಯಕ್ತಿ ತಲೆಗೆ ಬಡಿದು ಗಾಯಪಾದಯಾತ್ರೆ ಸಮಯದಲ್ಲಿ ಶಾಸಕ ಪಿ.ರವಿಕುಮಾರ್ ಭಾವಚಿತ್ರವಿದ್ದ ಫ್ಲೆಕ್ಸ್‌ಗೆ ಉದ್ರಿಕ್ತನೊಬ್ಬ ತೂರಿದ ಕಲ್ಲು ವ್ಯಕ್ತಿಯ ತಲೆಗೆ ಬಡಿದು ಗಾಯವಾದ ಘಟನೆ ನಗರದ ಮಹಾವೀರ ವೃತ್ತದಲ್ಲಿ ಸೋಮವಾರ ನಡೆಯಿತು. ಪಾದಯಾತ್ರಿಗಳು ಸಾಗುತ್ತಿದ್ದ ಸಮಯದಲ್ಲಿ ರಸ್ತೆ ಬದಿಯಲ್ಲಿ ಹಾಕಿದ್ದ ಶಾಸಕರ ಫ್ಲೆಕ್ಸ್ ಕಣ್ಣಿಗೆ ಬಿದ್ದಿದೆ. ಅದಕ್ಕೆ ಕಲ್ಲು ತೂರುವ ಮೂಲಕ ಆಕ್ರೋಶ ಹೊರಹಾಕಲು ಗುಂಪಿನಲ್ಲಿದ್ದವನೊಬ್ಬ ಯತ್ನಿಸಿದ್ದಾನೆ. ಆ ವೇಳೆ ಕಲ್ಲು ಆಕಸ್ಮಿಕವಾಗಿ ವ್ಯಕ್ತಿಯ ತಲೆಗೆ ಬಡಿದಿದೆ. ತೀವ್ರ ರಕ್ತಸ್ರಾವವಾಗುತ್ತಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಶಾಸಕರ ಫ್ಲೆಕ್ಸ್‌ಗೆ ಬೆಂಕಿಹನುಮ ಧ್ವಜ ತೆರವು ವಿರೋಧಿಸಿ ನಡೆಯುತ್ತಿದ್ದ ಪಾದಯಾತ್ರೆ ಸಮಯದಲ್ಲಿ ಉದ್ರಿಕ್ತರು ಶಾಸಕ ಪಿ. ರವಿಕುಮಾರ್ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಾತನೂರು ಗ್ರಾಮದಲ್ಲಿ ನಡೆಯಿತು. ರಸ್ತೆ ಪಕ್ಕದಲ್ಲಿ ಹಾಕಿದ್ದ ಶಾಸಕರ ಫ್ಲೆಕ್ಸ್‌ನ್ನು ಕಿತ್ತುಹಾಕಿದ ಗುಂಪು ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೆಂಕಿಯನ್ನು ನಂದಿಸಿ ಗುಂಪನ್ನು ಚದುರಿಸಿದರು. ನಂದಾ ವೃತ್ತದ ಬಳಿ ಶಾಸಕರ ಫ್ಲೆಕ್ಸ್‌ಗೆ ಕಲ್ಲು ಹಾಗೂ ನೀರಿನ ಬಾಟಲಿಗಳನ್ನು ತೂರಿ ಆಕ್ರೋಶ ವ್ಯಕ್ತಪಡಿಸಿದರು.
ಮಹಾವೀರ ವೃತ್ತದಲ್ಲಿ ಉದ್ರಿಕ್ತ ಪರಿಸ್ಥಿತಿಪಾದಯಾತ್ರೆ ನಗರ ಪ್ರವೇಶಿಸಿ ಮಹಾವೀರ ವೃತ್ತದಲ್ಲಿ ಸಾಗುತ್ತಿದ್ದ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಪಿ. ರವಿಕುಮಾರ್ ಫ್ಲೆಕ್ಸ್ ಮೇಲೆ ಕಲ್ಲು ತೂರಾಟ ನಡೆಸಿದರು. ಫ್ಲೆಕ್ಸ್ ಹರಿದುಹಾಕಲು ನುಗ್ಗಿದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ಸಮಯದಲ್ಲಿ ಪಾದಯಾತ್ರೆಯಲ್ಲಿ ಆಗಮಿಸಿದ್ದವರು ಧಿಕ್ಕಾಪಾಲಾಗಿ ಓಡಿದರು. ಪೊಲೀಸರೊಂದಿಗೆ ಮಾಜಿ ಸಚಿವ ಸಿ.ಟಿ. ರವಿ, ಬಿಜೆಪಿ ಮುಖಂಡರು, ಮಾತಿನ ಚಕಮಕಿ ನಡೆಸಿದರು. ಪೊಲೀಸರ ವರ್ತನೆಯನ್ನು ತೀವ್ರವಾಗಿ ಖಂಡಿಸಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಸಿ.ಟಿ. ರವಿ ನೇತೃತ್ವದಲ್ಲಿ ಪಾದಯಾತ್ರಿಗಳು ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು.
ಅಲ್ಲಿಂದ ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ಆಗಮಿಸಿದ ವೇಳೆ ಶಾಸಕ ಪಿ.ರವಿಕುಮಾರ್ ಭಾವಚಿತ್ರವಿದ್ದ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಫ್ಲೆಕ್ಸ್ ಹರಿದು ‘ಜೈಶ್ರೀರಾಮ್’ ಘೋಷಣೆಯೊಂದಿಗೆ ಪಾದಯಾತ್ರಿಗಳು ಮುಂದೆ ಸಾಗಿದರು.ಪಾದಯಾತ್ರೆಯು ಜಿಲ್ಲಾಧಿಕಾರಿ ಕಚೇರಿ ತಲುಪಿದಾಗ ಮಧ್ಯಾಹ್ನ ೨.೩೦ ಗಂಟೆಯಾಗಿತ್ತು. ಆ ವೇಳೆಗೆ ಜೆಡಿಎಸ್ ನಾಯಕರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗಾಗಿ ಕಾದು ಕುಳಿತಿದ್ದರು. ಅಲ್ಲಿಗೆ ಕುಮಾರಸ್ವಾಮಿ ಅವರು ಆಗಮಿಸಿದರು. ಪ್ರೀತಂಗೌಡ, ಸಿ.ಟಿ. ರವಿ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು. ಬಳಿಕ ಪಾದಯಾತ್ರೆಯನ್ನು ಅಂತ್ಯಗೊಳಿಸಲಾಯಿತು.