ಈದ್ಗಾ ಕಾಂಪೌಂಡ್ ಹೊಡೆದು ಹಾಕಿ ಅತಿಕ್ರಮ ಪ್ರವೇಶ

| Published : Sep 05 2025, 01:00 AM IST

ಸಾರಾಂಶ

ಈದ್ಗಾಗೆ ಮಂಜೂರಾಗಿರುವ ಜಮೀನಿನ ಕಾಂಪೌಂಡ್ ಹೊಡೆದು ಹಾಕಿ, ಸಾರ್ವಜನಿಕ ರಸ್ತೆಯನ್ನು ಮುಚ್ಚಿ ಹಾಕಿ, ಅತಿಕ್ರಮ ಪ್ರವೇಶ ಮಾಡಿರುವರ ಮೇಲೆ ಕಾನೂನು ಕ್ರಮ ಜರುಗಿಸಬೇಕು.

ಕನ್ನಡಪ್ರಭ ವಾರ್ತೆ ವಿಜಯಪುರ

ಪಟ್ಟಣದ ಹೊರವಲಯದಲ್ಲಿರುವ ಜಂಗ್ಲಿಫೀರ್ ಬಾಬಾ ದರ್ಗಾ ಬಳಿ ಮುಸ್ಲಿಂ ಸಮುದಾಯದ ಸ್ಮಶಾನಗಳಿಗೆ ಹಾಗೂ ಈದ್ಗಾಗೆ ಮಂಜೂರಾಗಿರುವ ಜಮೀನಿನ ಕಾಂಪೌಂಡ್ ಹೊಡೆದು ಹಾಕಿ, ಸಾರ್ವಜನಿಕ ರಸ್ತೆಯನ್ನು ಮುಚ್ಚಿ ಹಾಕಿ, ಅತಿಕ್ರಮ ಪ್ರವೇಶ ಮಾಡಿರುವ ರಿಯಲ್ ಎಸ್ಟೇಟ್ ಉದ್ಯಮಿ ಮರವೇ ಕೆಂಪಣ್ಣ, ಅವರ ಸಹೋದರರು ಮತ್ತು ಬಿ.ಎಸ್.ಹರೀಶ್ ಹಾಗೂ ಸಹಚರರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಜಾಮೀಯಾ ಮಸೀದಿಯ ಆಡಳಿತಾಧಿಕಾರಿ ಸೈಯದ್ ಅಜ್ಮತುಲ್ಲಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಜಾಮೀಯಾ ಮಸೀದಿಯ ಮಾಜಿ ಅಧ್ಯಕ್ಷ ಎ.ಆರ್.ಹನೀಪುಲ್ಲಾ ಅವರು, ವಿಜಯಪುರ ಹೋಬಳಿ ಚಿಕ್ಕತತ್ತಮಂಗಲ ಗ್ರಾಮದ ಸರ್ವೆ ನಂಬರ್ 39ರಲ್ಲಿ ಉಪವಿಭಾಗಾದಿಕಾರಿ ಹಾಗೂ ಜಿಲ್ಲಾಧಿಕಾರಿಯವರು ಈದ್ಗಾ ಮತ್ತು ಸ್ಮಶಾನಗಳಿಗೆ ಮಂಜೂರು ಮಾಡಿರುವ 6 ಎಕರೆ 19 ಗುಂಟೆ ಜಮೀನಿಗೆ ನಾವು ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದೇವೆ. ಆದರೆ, ರಿಯಲ್ ಎಸ್ಟೇಟ್ ಉಧ್ಯಮಿ ಕೆಂಪಣ್ಣ ಎಂಬುವವರು ಅವರ ಭೂಮಿ ಅಳತೆ ಮಾಡಿಸಿಕೊಂಡು, ನಮ್ಮ ಈದ್ಗಾ ಮೈದಾನಕ್ಕೆ ಅಳವಡಿಸಿದ್ದ ಕಾಂಪೌಂಡ್ ಕಲ್ಲುಗಳು ಹೊಡೆದು ಹಾಕಿ, ಸುಮಾರು 10 ಅಡಿಗಳಿಗೂ ಹೆಚ್ಚು ಭೂಮಿ ಒತ್ತುವರಿ ಮಾಡಿಕೊಂಡು ಅವರು ಕಲ್ಲುಗಳು ನೆಟ್ಟಿದ್ದಾರೆ. ಅವರು ಭೂಮಿ ಅಳತೆ ಮಾಡುವಾಗ ನಮಗೆ ನೊಟೀಸ್ ಜಾರಿಗೊಳಿಸಿಲ್ಲ. ನಾವು ಭೂಮಾಪಕರನ್ನು ಕೇಳಿದರೆ, ನಾವು ಅಳತೆ ಮಾಡಿಲ್ಲವೆಂದು ಹೇಳಿದ್ದಾರೆ.

ಇದು ಚಿಕ್ಕತತ್ತಮಂಗಲ ಹಾಗೂ ಗಡ್ಡದನಾಯಕನಹಳ್ಳಿಯ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಆಗಿದೆ. ಈ ರಸ್ತೆಯನ್ನು ಮುಚ್ಚಿದ್ದಾರೆ. ನಮಗೆ ಸೇರಿದ ಭೂಮಿಯ ಒಳಗೆ ಅತಿಕ್ರಮ ಪ್ರವೇಶ ಮಾಡಿ, ಕಾಂಪೌಂಡ್‌ಗೆ ಅಳವಡಿಕೆ ಮಾಡಿದ್ದ ಕಲ್ಲುಗಳನ್ನು ಹೊಡೆದು ಹಾಕಿದ್ದಾರೆ. ಇದರ ಜೊತೆಗೆ, ಈ ಭಾಗದಲ್ಲಿ ನಿವೇಶನಗಳು ಖರೀದಿಸಿರುವ 80ಕ್ಕೂ ಹೆಚ್ಚು ಮಂದಿ ಬಡವರಿಗೆ ಸೇರಬೇಕಾಗಿರುವ ಜಾಗಗಳು ನಮಗೆ ಸೇರಿದ್ದು, ಎಂದು ಮನೆಗಳು ಕಟ್ಟಿಕೊಂಡು ವಾಸವಾಗಿರುವವರನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗೌಸ್ ಖಾನ್ ಮಾತನಾಡಿ, ಈ ಹಿಂದೆ ಜಾಫರ್ ಷರೀಫ್ ಅವರು ಹಾಗೂ ಆಗಿನ ಶಾಸಕರಾಗಿದ್ದ ಮುನಿನರಸಿಂಹಯ್ಯ ಅವರ ಕಾಲದಲ್ಲಿ ಮಂಜೂರಾಗಿರುವ ಈ ಭೂಮಿಯೊಳಗೆ ಮರವೇ ಕೆಂಪಣ್ಣ ಹಾಗೂ ಅವರ ಸಹೋದರರು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ರೀತಿಯಾಗಿ ದೌರ್ಜನ್ಯದಿಂದ ನಡೆದುಕೊಳ್ಳುವುದು ಸರಿಯಲ್ಲ. ಸಂಬಂಧಪಟ್ಟ ತಹಶೀಲ್ದಾರರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು. ತಪ್ಪು ಮಾಡಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೂರಾರು ಮಂದಿ ಜಮಾವಣೆ:

ಪೊಲೀಸ್ ಠಾಣೆಯಲ್ಲಿ ಘಟನೆಯ ಕುರಿತು, ದೂರು ನೀಡಲು ಬಂದಿದ್ದ ಜಾಮೀಯಾ ಮಸೀದಿಯ ಆಡಳಿತಾಧಿಕಾರಿ ಅಜ್ಮತ್ ಉಲ್ಲಾ ಅವರ ಜೊತೆಯಲ್ಲಿ ನೂರಾರು ಮಂದಿ ಮುಸ್ಲಿಂ ಸಮುದಾಯದವರು ಜಮಾವಣೆಗೊಂಡಿದ್ದರು. ಕೆಲ ಕಾಲ ಪೊಲೀಸ್ ಠಾಣೆಯ ಆವರಣದಲ್ಲಿ ಉಧ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು, ಜಮಾವಣೆಗೊಂಡಿದ್ದವರನ್ನು ಹೊರಗೆ ಕಳುಹಿಸಿದರು.