ಸಾರಾಂಶ
ಮುಂದೆ ಯಾವುದೇ ರೀತಿಯ ಕಾನೂನಾತ್ಮಕ ಸಮಸ್ಯೆಗಳು ಎದುರಾಗದಂತೆ ಅಣೆಕಟ್ಟು ಸುರಕ್ಷತಾ ಸಮಿತಿ, ಕಾನೂನು ತಜ್ಞರು, ತಾಂತ್ರಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅಣೆಕಟ್ಟು ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡುವುದೋ, ಟ್ರಯಲ್ ಬ್ಲಾಸ್ಟ್ ನಡೆಸದಂತೆ ತೀರ್ಮಾನಿಸುವುದು ಸೂಕ್ತವೋ ಎಂಬ ಬಗ್ಗೆ ವರದಿ ಪಡೆದುಕೊಳ್ಳಲಾಗುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಟ್ರಯಲ್ ಬ್ಲಾಸ್ಟ್ ಸಾಧಕ-ಬಾಧಕಗಳ ಕುರಿತಂತೆ ತಾಂತ್ರಿಕ ತಜ್ಞರು ಹಾಗೂ ಅಡ್ವೋಕೇಟ್ ಜನರಲ್ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಮನವರಿಕೆ ಮಾಡಿಕೊಡಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.ಟ್ರಯಲ್ ಬ್ಲಾಸ್ಟ್ ವಿಚಾರವಾಗಿ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರ ಜೊತೆ ಚರ್ಚೆ ನಡೆಸಲಾಗಿದ್ದು, ಜು.೧೫ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿರುವುದರಿಂದ ಅದನ್ನು ಮುಂದೂಡುವಂತೆ ನ್ಯಾಯಾಲಯವನ್ನು ಕೋರಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಮುಂದೆ ಯಾವುದೇ ರೀತಿಯ ಕಾನೂನಾತ್ಮಕ ಸಮಸ್ಯೆಗಳು ಎದುರಾಗದಂತೆ ಅಣೆಕಟ್ಟು ಸುರಕ್ಷತಾ ಸಮಿತಿ, ಕಾನೂನು ತಜ್ಞರು, ತಾಂತ್ರಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅಣೆಕಟ್ಟು ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡುವುದೋ, ಟ್ರಯಲ್ ಬ್ಲಾಸ್ಟ್ ನಡೆಸದಂತೆ ತೀರ್ಮಾನಿಸುವುದು ಸೂಕ್ತವೋ ಎಂಬ ಬಗ್ಗೆ ವರದಿ ಪಡೆದುಕೊಳ್ಳಲಾಗುವುದು ಎಂದರು.ಈ ಹಿಂದೆ ಜಿಪಂ ಸಭಾಂಗಣದಲ್ಲಿ ಸಭೆ ನಡೆಸಿದ್ದ ಸಮಯದಲ್ಲಿ ರೈತ ಮುಖಂಡರಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ಮಾತುಕತೆಗೆ ಅವಕಾಶ ಕಲ್ಪಿಸಿಕೊಡುವುದಾಗಿ ಹೇಳಿದ್ದೆ. ಆದರೆ, ತುರ್ತಾಗಿ ಸಭೆ ನಡೆಸಿದ್ದರಿಂದ ಆಹ್ವಾನಿಸಲಾಗಲಿಲ್ಲ. ಹಾಗಾಗಿ ರೈತರಿಗೆ ಯಾವುದೇ ಆತಂಕ ಬೇಡ. ನಾವು ನಿಮ್ಮ ಪರವಾಗಿದ್ದೇವೆ. ಕಾನೂನಾತ್ಮಕ ಸಂಸ್ಥೆಗಳಿಂದ ಅಭಿಪ್ರಾಯ ಪಡೆದು ರೈತರ ಆಶಯದಂತೆ ನಡೆಯಲಾಗುವುದು ಎಂದರು.
ಕೆಆರ್ ಎಸ್ ನೀರಿನ ಮಟ್ಟಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 104.65 ಅಡಿ
ಒಳ ಹರಿವು – 2898 ಕ್ಯುಸೆಕ್ಹೊರ ಹರಿವು – 2257 ಕ್ಯುಸೆಕ್
ನೀರಿನ ಸಂಗ್ರಹ – 26.679 ಟಿಎಂಸಿ