ಸಾರಾಂಶ
ಹುಬ್ಬಳ್ಳಿ: ನಗರದ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ಶೇ. 90ರಷ್ಚು ಪೂರ್ಣಗೊಂಡಿದೆ. ಕಳೆದ ನಾಲ್ಕು ತಿಂಗಳಿಂದ ಬಂದ್ ಮಾಡಲಾಗಿದ್ದ ಚೆನ್ನಮ್ಮ ವೃತ್ತದಿಂದ ಹೊಸೂರ ಸರ್ಕಲ್‌ವರೆಗಿನ ವಾಹನಗಳ ಸಂಚಾರ ಸೆಪ್ಟೆಂಬರ್ 3ರಿಂದ ಪ್ರಾಯೋಗಿಕವಾಗಿ ಆರಂಭಿಸುವ ಚಿಂತನೆಯಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿಯ ಚೆನ್ನಮ್ಮ ವೃತ್ತದಲ್ಲಿ ಮಂಗಳವಾರ ಫ್ಲೈಓವರ್ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ವಿಜಯಪುರ ರಸ್ತೆಯಿಂದ ಹೊಸೂರ ವೃತ್ತದ ವರೆಗಿನ ಕಾಮಗಾರಿ ಮುಕ್ತಾಯಕ್ಕೆ ಆ. 20ರ ವರೆಗೆ ಗಡುವು ನೀಡಲಾಗಿತ್ತು. ಆದರೆ, ಮಳೆ ಹಾಗೂ ಕಾರ್ಮಿಕರ ಕೊರತೆಯಿಂದ ಕಾಮಗಾರಿ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ 10 ದಿನ ಟೈಂ ಸಹ ವಿಸ್ತರಣೆ ಮಾಡಿದ್ದು, ಇದರಲ್ಲಿ ಬಹುತೇಕ ಕಾಮಗಾರಿ ಮುಕ್ತಾಯಗೊಂಡಿದೆ. ಸದ್ಯ ಈ ಕಾಮಗಾರಿಯು ಶೇ. 90-95ರಷ್ಟು ಪೂರ್ಣಗೊಂಡಿದ್ದು, ಸೆಪ್ಟೆಂಬರ್ 20ರೊಳಗಾಗಿ ಈ ರಸ್ತೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ಚೆನ್ನಮ್ಮ ವೃತ್ತದಲ್ಲಿನ ಒಂದು ಭಾಗದ ಕಾಮಗಾರಿ ಸೆಪ್ಟೆಂಬರ್ 30ರೊಳಗಾಗಿ ಪೂರ್ಣಗೊಳ್ಳಲಿದೆ. ಈ ವೇಳೆ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕೆ ಸಚಿವರು ಸೂಚಿಸಿದ್ದಾರೆ. ಫ್ಲೈಓವರ್ ಕಾಮಗಾರಿ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ಎನ್‌ಎಚ್, ಪಿಡಬ್ಲೂಡಿ, ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಫ್ಲೈಓವರ್ ಕಾಮಗಾರಿ ವೀಕ್ಷಣೆ ನಡೆಸಲಾಗಿದೆ ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಕಾಮಗಾರಿಯನ್ನು 2026ರ ಜನವರಿ ಒಳಗಾಗಿ ಸಂಪೂರ್ಣವಾಗಿ ಮುಗಿಸುವ ಗುರಿ ಹೊಂದಲಾಗಿದೆ. ಇತರೆ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಉಳಿದಂತೆ ವಿಜಯಪುರ ರಸ್ತೆಯಿಂದ ಹೊಸೂರ ಸರ್ಕಲ್ ವರೆಗಿನ ಫ್ಲೈಓವರ್ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು, ಸೆಪ್ಟೆಂಬರ್ 30ರೊಳಗಾಗಿ ಈ ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.ಪ್ರಾಯೋಗಿಕ ಸಂಚಾರ ಪ್ರಾರಂಭಿಸುವ ಕುರಿತು ಪೊಲೀಸ್ ಇಲಾಖೆ ಸೇರಿದಂತೆ ಎನ್‌ಎಚ್, ಪಿಡಬ್ಲೂಡಿ ಅಧಿಕಾರಿಗಳ ಅಭಿಪ್ರಾಯವನ್ನು ಕೂಢೀಕರಿಸಲಾಗುವುದು. ಅಲ್ಲದೇ, ಕಾಮಗಾರಿ ಸ್ಥಳದಲ್ಲಿ ಕೈಗೊಳ್ಳುವ ಮುಂಜಾಗ್ರತಾ ಕ್ರಮದ ಬಗ್ಗೆ ಸಮಗ್ರ ಮಾಹಿತಿ ಪಡೆದು ಈ ಮಾರ್ಗದಲ್ಲಿ ಸರಳ ಸಂಚಾರ ಪ್ರಾರಂಭಿಸಲು ಯೋಜಿಸಲಾಗಿದೆ. ಇನ್ನುಳಿದಂತೆ ನಿಗದಿತ ವೇಳೆಯಲ್ಲಿ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ನಿರಂತರ ಮೇಲ್ವಿಚಾರಣೆ ನಡೆಸಿ ಕಾಮಗಾರಿಗೆ ವೇಗ ನೀಡುವ ಕೆಲಸ ಮಾಡಲಾಗುವುದು ಎಂದರು.
ಈ ವೇಳೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್, ಎಸಿಪಿ ಶಿವಪ್ರಕಾಶ ನಾಯ್ಕ, ಪಿಐಗಳಾದ ಸಂಗಮೇಶ ಪಾಲಭಾವಿ, ಎಂ.ಎಸ್. ಹೂಗಾರ, ಜಾಕ್ಸನ್ ಡಿಸೋಜಾ ಸೇರಿದಂತೆ ಇತರರು ಇದ್ದರು.