ಬುಡಕಟ್ಟು ಜನರು ಸೌಲಭ್ಯಗಳಿಂದ ವಂಚಿತರಾಗದಿರಲಿ: ದಿವಾಕರ

| Published : Aug 31 2025, 02:00 AM IST

ಬುಡಕಟ್ಟು ಜನರು ಸೌಲಭ್ಯಗಳಿಂದ ವಂಚಿತರಾಗದಿರಲಿ: ದಿವಾಕರ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ತಿ ಅಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನದಡಿ ಸರ್ಕಾರದ ಯೋಜನೆಗಳನ್ನು ಬುಡಕಟ್ಟು ಸಮುದಾಯಗಳ ಮನೆ, ಮನೆಗೆ ತಲುಪಿಸುವ ಗುರಿ ಸಾಧಿಸುವ ಕಾರ್ಯಕ್ಕೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು.

ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಧರ್ತಿ ಅಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನದಡಿ ಸರ್ಕಾರದ ಯೋಜನೆಗಳನ್ನು ಬುಡಕಟ್ಟು ಸಮುದಾಯಗಳ ಮನೆ, ಮನೆಗೆ ತಲುಪಿಸುವ ಗುರಿ ಸಾಧಿಸುವ ಕಾರ್ಯಕ್ಕೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.

ನಗರದ ಜಿಪಂ ಕ್ರೀಡಾಂಗಣದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಧರ್ತಿ ಅಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನದಡಿ ‘ಆದಿ ಕರ್ಮಯೋಗಿ ಅಭಿಯಾನ’ ಜಿಲ್ಲಾ ಮಟ್ಟದ ತರಬೇತುದಾರರಿಂದ ತಾಲೂಕು ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹೆಚ್ಚು ಪರಿಶಿಷ್ಟ ವರ್ಗಗಳ ಸಮುದಾಯದ ಜನರು ವಾಸಿಸುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಭಿಯಾನದ ಜಾಗೃತಿ ಮೂಡಿಸಲಾಗುತ್ತಿದೆ. ವಿವಿಧ ಗ್ರಾಮಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಆಯಾ ಹಳ್ಳಿಗಳಲ್ಲಿಯೇ ಅರ್ಜಿಗಳನ್ನು ಸ್ವೀಕರಿಸಲು ನಮ್ಮ ಅಧಿಕಾರಿಗಳು ಸಮರ್ಪಕ ಸೇವೆ ಸಲ್ಲಿಸಲು ತರಬೇತಿ ಅಗತ್ಯ ಇದೆ. ಈ ನಿಟ್ಟಿನಲ್ಲಿ ಫಲಾನುಭವಿಗಳಿಗೆ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಅಭಿಯಾನದಡಿ ಗ್ರಾಮ ಮಟ್ಟದ ಶಿಬಿರಗಳಲ್ಲಿ ಆರೋಗ್ಯ, ಆಹಾರ, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ, ಕೃಷಿ, ಭೂಮಾಪನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಸಂಬಂಧಿಸಿದ ಇಲಾಖೆ ಸಹಯೋಗದಲ್ಲಿ ತಾಲೂಕು ಮಟ್ಟದ ತರಬೇತುದಾರರಿಗೆ ಸಮರ್ಪಕ ಮಾಹಿತಿ ಹಾಗೂ ಸರ್ಕಾರದ ಯೋಜನೆಗಳನ್ನು ಬಗ್ಗೆ ಮಾಹಿತಿ ನೀಡಿ ಗ್ರಾಮೀಣ ಭಾಗದಲ್ಲಿನ ಅರ್ಹ ಫಲಾನುಭವಿಗಳಿಗೆ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಆದಿ ಕರ್ಮಯೋಗಿ ಹೆಸರಿನಲ್ಲಿ ತರಬೇತಿಯನ್ನು ಮೂರು ದಿನಗಳ ಕಾಲ ನೀಡಲಾಗುತ್ತಿದೆ ಎಂದರು.

ಬುಡಕಟ್ಟು ಸಮುದಾಯದವರಿಗೆ ಒದಗಿಸಬೇಕಾದ ಮೂಲಭೂತ ಸೌಕರ್ಯಗಳು ಆಧಾರ ಕಾರ್ಡ್, ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಜಾತಿ ಪ್ರಮಾಣಪತ್ರ, ನಿವಾಸಿ ಪ್ರಮಾಣಪತ್ರ, ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್, ಜನ್ ಧನ್ ಬ್ಯಾಂಕ್ ಖಾತೆ, ವಿಮಾ ಹಕ್ಕುಗಳು (ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ), ಸಾಮಾಜಿಕ ಭದ್ರತಾ ಯೋಜನೆಗಳು, ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ದಿವ್ಯಾಂಗ ಪಿಂಚಣಿ, ಉದ್ಯೋಗ ಮತ್ತು ಜೀವನೋಪಾಯ ಯೋಜನೆಗಳು, ಮನರೇಗಾ, ಪಿಎಂ ವಿಶ್ವಕರ್ಮ, ಮುದ್ರಾ ಸಾಲಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಿಎಂ ಮಾತೃವಂದನಾ ಯೋಜನೆ (ಪಿಎಂಎಂವಿವೈ), ಐಸಿಡಿಎಸ್ ಸೌಲಭ್ಯಗಳು, ಲಸಿಕೆ ಹಾಕುವುದು, ಸಿಕೆಲ್ ಸೆಲ್ ಅನಿಮೀಯಾ ಕುರಿತು ಜಾಗೃತಿ ಮೂಡಿಸುವುದು ಮತ್ತು ತಪಾಸಣೆ ಸೇರಿದಂತೆ ವಿವಿಧ ಯೋಜನೆಗಳ ಸ್ಥಳದಲ್ಲಿಯೇ ಪರಿಹರಿಸಲಾಗುವುದು ಎಂದರು.

ಆದಿ ಕರ್ಮಯೋಗಿ ಅಭಿಯಾನದ ಮೂಲಕ ನಿಯೋಜಿತಗೊಂಡ ಅಧಿಕಾರಿಗಳು ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಬುಡುಕಟ್ಟು ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕ್ರಿಯಾಶೀಲರಾಗಿ ಬುಡಕಟ್ಟು ಸಮುದಾಯದವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗದಂತೆ ನಿಗಾ ವಹಿಸಬೇಕು ಎಂದರು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಕೆ. ರವಿಕುಮಾರ್, ಕೇಂದ್ರ ಸರ್ಕಾರದ ನೋಡಲ್ ಅಧಿಕಾರಿ ಪಲ್ಲವಿ ಹಾಗೂ ವಿವಿಧ ತಾಲೂಕಿನ ಅಧಿಕಾರಿಗಳು ಭಾಗವಹಿಸಿದ್ದರು.