ಅರಣ್ಯ ಹಕ್ಕು ಕಾಯ್ದೆ ಪರಿಣಾಮಕಾರಿ ಜಾರಿಗೆ ಪದ್ಮಶ್ರೀ ಸೋಮಣ್ಣ ಆಗ್ರಹ

| Published : Feb 08 2024, 01:31 AM IST

ಅರಣ್ಯ ಹಕ್ಕು ಕಾಯ್ದೆ ಪರಿಣಾಮಕಾರಿ ಜಾರಿಗೆ ಪದ್ಮಶ್ರೀ ಸೋಮಣ್ಣ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕಠಿಣ ಪರಿಶ್ರಮದ ಮೂಲಕ ಯುವಕರು ತಮ್ಮ ಕನಸನ್ನು ನನಸು ಮಾಡಿಕೊಳ್ಳಬೇಕು. ಬೇರೆ ಬೇರೆ ಪರಿಸರ ಅರ್ಥಮಾಡಿಕೊಳ್ಳಲು ಮೈಸೂರು ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಬೇಕು

-15ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ

----

ಕನ್ನಡಪ್ರಭ ವಾರ್ತೆ ಮೈಸೂರು

ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಆದಿವಾಸಿ ಮುಖಂಡ ಸೋಮಣ್ಣ ಆಗ್ರಹಿಸಿದರು.

ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ. ಗೃಹ ಇಲಾಖೆ, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರದ ವತಿಯಿಂದ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಿರುವ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಪ.ಪಂಗಡದ ಪಟ್ಟಿಗೆ ಆದಿವಾಸಿಗಳಲ್ಲದವರನ್ನು ಸೇರಿಸಿರುವುದರಿಂದ ನೈಜ ಆದಿವಾಸಿಗಳಿಗೆ ಒಳ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಬುಡಕಟ್ಟು ಯುವಕರ ಉನ್ನತ ವ್ಯಾಸಂಗಕ್ಕೆ ಪ್ರತ್ಯೇಕ ವಿಶ್ವವಿದ್ಯಾನಿಲಯ ಆರಂಭಿಸಬೇಕು ಎಂದು ಅವರು ಸಲಹೆ ಮಾಡಿದರು.

ಜೀತದಾಳಾಗಿ ದುಡಿದು ನಂತರ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸಿ, ಪದ್ಮಶ್ರೀ ಪ್ರಶಸ್ತಿ ಪಡೆಯುವವರಿಗೆ ಸಾಗಿ ಬಂದ ಹಾದಿಯನ್ನು ಅವರು ವಿವರಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಕಠಿಣ ಪರಿಶ್ರಮದ ಮೂಲಕ ಯುವಕರು ತಮ್ಮ ಕನಸನ್ನು ನನಸು ಮಾಡಿಕೊಳ್ಳಬೇಕು. ಬೇರೆ ಬೇರೆ ಪರಿಸರ ಅರ್ಥಮಾಡಿಕೊಳ್ಳಲು ಮೈಸೂರು ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ನೆಹರು ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಅಭಿಷೇಕ್ ಚವರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಮೊದಲಾದವರು ಇದ್ದರು.

ಜಾರ್ಖಂಡ್, ಬಿಹಾರ, ಒಡಿಸ್ಸಾ, ಮಹಾರಾಷ್ಟ್ರ ರಾಜ್ಯಗಳಿಂದ ಇನ್ನೂರು ಮಂದಿ ಯುವಕ, ಯುವತಿಯರು, ಇಪ್ಪತ್ತು ಮಂದಿ ಉಸ್ತುವಾರಿ ಅಧಿಕಾರಿಗಳು ಒಂದು ವಾರದ ಈ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇಲ್ಲಿನ ಕಲೆ, ಸಂಸ್ಕೃತಿ, ಜೀವನ ಶೈಲಿ, ಆಹಾರ ಪದ್ಧತಿ ಮೊದಲಾದ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ.