ಸಾರಾಂಶ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಬುಡಕಟ್ಟು ಜನಾಂಗದವರು ಪ್ರಕೃತಿಯ ಆರಾಧಕರಾಗಿದ್ದಾರೆ ಎಂದು ಬುಡಕಟ್ಟು ಜನಾಂಗದ ಮುಖಂಡ ಹಾಗೂ ಜಾನಪದ ಕಲಾವಿದ ಶೆಟ್ಟಿಕೊಪ್ಪ ಮಹೇಶ್ ಹೇಳಿದರು.ತಾಲೂಕಿನ ಬಿ.ಎಚ್.ಕೈಮರದ ಜಯಂತಿರಮೇಶ್ ಅವರ ಮನೆಯಂಗಳದಲ್ಲಿ ತಾಲೂಕು ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕ ಭಾನುವಾರ ಏರ್ಪಡಿಸಿದ್ದ ವಿಶ್ವ ಜಾನಪದ ಹಾಗೂ ಬುಡಕಟ್ಟು ಜನಾಂಗದವರ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, 1994 ರಲ್ಲಿ ಸಂಯುಕ್ತ ರಾಷ್ಟ ಸಂಸ್ಥೆಯು ವಿಶ್ವ ಬುಡಕಟ್ಟು ಜನಾಂಗಗಳ ಅಂತಾರಾಷ್ಠೀಯ ದಿನಾಚರಣೆಯನ್ನು ಆ.9 ರಂದು ಘೋಷಿಸಿತು. ನಂತರ ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಬುಡಕಟ್ಟು ಜನಾಂಗದವರ ಹಕ್ಕುಗಳು, ಸಂಸ್ಕೃತಿ, ಪರಂಪರೆ, ಜೀವನ ಶೈಲಿ ಹಾಗೂ ಪ್ರಕೃತಿಯೊಂದಿನ ಒಡನಾಟ, ಹೊಂದಾಣಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಬುಡಕಟ್ಟು ಜನಾಂಗವು ಪ್ರಕೃತಿಯೊಂದಿಗೆ ಬದುಕುವ ಶ್ರೇಷ್ಠ ಜನಾಂಗವಾಗಿದೆ. ಅರಣ್ಯ, ನೆಲ,ಸಂಪತ್ತು, ಜಲ, ಪ್ರಾಣಿ ಪಕ್ಷಿಗಳೊಂದಿಗೆ ಸಹಜವಾಗಿ ಜೀವನ ನಡೆಸುವ ಕೌಶಲ್ಯವನ್ನು ಈ ಜನಾಂಗದವರು ಹೊಂದಿದ್ದಾರೆ ಎಂದರು.
ಅತ್ತಿಮಬ್ಬೆ ಪ್ರಶಸ್ತಿ ವಿಜೇತೆ, ಸಾಹಿತಿ ಜಯಮ್ಮ ಮಾತನಾಡಿ, ಶಿಕ್ಷಣ ವಂಚಿತರಾದ ಬುಡಕಟ್ಟು ಜನಾಂಗದವರು ಭೂಮಿಯನ್ನು ಬಳಸಿಕೊಂಡು ಜೀವನ ನಡೆಸುತ್ತಿದ್ದರು. ಪ್ರಕೃತಿ ಮಾತೆಯ ಮಡಿಲಲ್ಲಿ ಬದುಕುವಂತಹ ಜನಾಂಗ ಇದಾಗಿದೆ. ಮೂಲ ಜನಾಂಗ ದ್ರಾವಿಡರು ದಕ್ಷಿಣ ಭಾರತದ ಕಾಡಿನಲ್ಲಿದ್ದಾರೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ಜಾನಪದಕ್ಕೂ, ಬುಡಕಟ್ಟು ಜನಾಂಗದವರಿಗೂ ಅವಿನಾಭಾವ ಸಂಬಂಧವಿದೆ. ನೈಜ ಜಾನಪದ ಹುಟ್ಟಿದ್ದೇ ಬುಡಕಟ್ಟು ಜನಾಂಗದವರಿಂದ. ಇತ್ತೀಚಿನ ದಿನಗಳಲ್ಲಿ ನೈಜ ಜಾನಪದ ನಶಿಸಿ ಹೋಗುತ್ತಿದೆ. ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಬಾಲಾಜಿಯವರು ನೈಜ ಹಾಗೂ ಮೂಲ ಜಾನಪದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಈ ಹಿಂದೆ ಇದ್ದ ನಾಟಿ ಪದಗಳು, ಸೋಬಾನ ಪದಗಳು, ಮದುವೆ ದಿಬ್ಬಣದ ಪದಗಳು, ಅಂಟಿಕೆ-ಪಿಂಟಿಕೆ ಪದಗಳು ಸಮಾಜದಿಂದ ಕಣ್ಮರೆಯಾಗುತ್ತಿವೆ. ಇವುಗಳನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ತಾಲೂಕು ಜಾನಪದ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಜಯಂತಿರಮೇಶ್ ಮಾತನಾಡಿ, ಬುಡಕಟ್ಟು ಜನಾಂಗದವರ ಅನುಭವಸಾರದಿಂದ ಹುಟ್ಟಿಬಂದ ಪದಗಳೇ ಜಾನಪದವಾಗಿದೆ. ಜನರ ಬಾಯಿಂದ ಬಾಯಿಗೆ ಹರಿದಾಡಿದ ಪದಗಳೇ ಇಂದು ಜಾನಪದಗಳಾಗಿವೆ. ಗ್ರಾಮೀಣ ಸೊಗಡನ್ನು ಮೇಳೈಸುವ ಬೀಸೋ ಕಲ್ಲಿನ ಪದಗಳು, ಲಾಲಿ ಹಾಡು, ಜೋಗುಳ ಪದಗಳು ಸಂಸ್ಕೃತಿಗೇ ಮೆರುಗನ್ನು ನೀಡುವಂತಹವು. ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನನ್ನ ಕೈಯಲ್ಲಾದ ಅಳಿಲು ಸೇವೆ ಸಲ್ಲಿಸಿದ್ದೇನೆ ಎಂದರು.ಬುಡಕಟ್ಟು ಜನಾಂಗದ ಹಿರಿಯರಾದ ಮೇದರಬೀದಿಯ ಶಾರದಮ್ಮ, ಜಾನಪದ ಕಲಾವಿದ ಶೆಟ್ಟಿಕೊಪ್ಪಮಹೇಶ್ ಅವರನ್ನು ಸನ್ಮಾನಿಸಲಾಯಿತು. ವಿಶ್ವ ಬುಡಕಟ್ಟು ಜನಾಂಗದ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಜಾನಪದ ಗೀತೆ, ಭಕ್ತಿಗೀತೆ ಮತ್ತು ಜಾನಪದ ಗೀತೆಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಆರೋಗ್ಯ ಇಲಾಖೆ ಆಪ್ತ ಸಮಾಲೋಚಕಿ ಸುಜಾತ, ಶೆಟ್ಟಿಕೊಪ್ಪದ ಹೊನ್ನಮ್ಮ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಕಾವ್ಯ ಪಡೆದುಕೊಂಡರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಸುನಂದಮ್ಮ ಇದ್ದರು.ಶೈಲಾ ಸ್ವಾಗತಿಸಿದರು. ಸುಲೋಚನಾ ಕಾರ್ಯಕ್ರ ಮ ನಿರೂಪಿಸಿದರು.