ಸಮಾಜ ಸೇವೆ ಬಹಳ ಕಷ್ಟದ ಕೆಲಸ

| Published : Oct 10 2025, 01:00 AM IST

ಸಾರಾಂಶ

ನ್ಯಾಯ ನಿಷ್ಠೂರವಾಗಿರಬೇಕು, ಅದರಲ್ಲಿ ದಾಕ್ಷಣ್ಯ ಇರಬಾರದು, ಈ ನಿಟ್ಟಿನಲ್ಲಿ ಚಂದ್ರಶೇಖರಯ್ಯ ಅವರು ಕಾರ್ಯಪ್ರವೃತ್ತರಾಗುವ ಮೂಲಕ ಸಮಾಜ ಸೇವೆಯನ್ನು ಮಾಡುವ ಮೂಲಕ ಜನಮಾನದಲ್ಲಿ ನೆಲೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಸಮಾಜ ಸೇವೆ ಬಹಳ ಕಷ್ಟದ ಕೆಲಸ ಎಂದು ಬೆಟ್ಟದಪುರ ವಿರಕ್ತಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಜೆಡಿಎಸ್ ವತಿಯಿಂದ ತಾಲೂಕು ಅಧ್ಯಕ್ಷ ಕೆ.ಪಿ. ಚಂದ್ರಶೇಖರಯ್ಯ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ನ್ಯಾಯ ನಿಷ್ಠೂರವಾಗಿರಬೇಕು, ಅದರಲ್ಲಿ ದಾಕ್ಷಣ್ಯ ಇರಬಾರದು, ಈ ನಿಟ್ಟಿನಲ್ಲಿ ಚಂದ್ರಶೇಖರಯ್ಯ ಅವರು ಕಾರ್ಯಪ್ರವೃತ್ತರಾಗುವ ಮೂಲಕ ಸಮಾಜ ಸೇವೆಯನ್ನು ಮಾಡುವ ಮೂಲಕ ಜನಮಾನದಲ್ಲಿ ನೆಲೆಸಿದ್ದಾರೆ. ಸದಾ ನ್ಯಾಯಪರ ನಿಲ್ಲುತ್ತಿದ್ದ ಅವರ ಸಮಾಜ ಸೇವೆ ಶ್ಲಾಘನೀಯ, ಒಬ್ಬ ವ್ಯಕ್ತಿ ಸಮಾಜ ಸೇವೆಗೆ ತೊಡಗಿಸಿಕೊಳ್ಳಬೇಕಾದಲ್ಲಿ ಅವರ ಕುಟುಂಬಸ್ಥರ, ಸ್ನೇಹಿತರ ಸಹಕಾರ ಅತ್ಯಗತ್ಯ, ಈ ನಿಟ್ಟಿನಲ್ಲಿ ಚಂದ್ರಶೇಖರಯ್ಯ ನವರ ಕುಟುಂಬಸ್ಥ ಸಹಕಾರ ಮರೆಯುವಂಥದ್ದಲ್ಲ, ಚಂದ್ರಶೇಖರಯ್ಯನವರ ಅಗಲಿಕೆ ಸಮಾಜಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದರು.

ಮಾಜಿ ಶಾಸಕ ಕೆ. ಮಹದೇವ್ ಮಾತನಾಡಿ, ಉತ್ತಮ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಚಂದ್ರಶೇಖರಯ್ಯ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದರು, ಅವರ ಶಿಸ್ತು, ಬದ್ಧತೆ, ಪ್ರಾಮಾಣಿಕತೆ, ಅನ್ಯಾಯದ ವಿರುದ್ಧ ಹೋರಾಡುವ ಗುಣ ಸ್ವಭಾವ ಮಾದರಿಯಾದದ್ದು, ಅವರ ಅಗಲಿಕೆ ಕೇವಲ ವೀರಶೈವ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ನಷ್ಟವಾಗಿದೆ ಎಂದರು.

ಮಾಜಿ ಶಾಸಕ ಎಚ್.ಸಿ. ಬಸವರಾಜ್ ಮಾತನಾಡಿ, ಚಂದ್ರಶೇಖರಯ್ಯ ಅವರು ಧರ್ಮಾತೀತವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಅವರು ಇರುವಷ್ಟು ಕಾಲ ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ಆದರ್ಶ ಜೀವನವನ್ನು ನಡೆಸಿಕೊಂಡು ಬಂದಿದ್ದರು ರಾಜಕೀಯ, ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದರು ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಪರಮೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ, ಮುಖಂಡರಾದ ಶಿವಯೋಗಿ, ರೇಣುಕಾಸ್ವಾಮಿ, ರಾಮು, ರಾಜು ಮಾಸ್ಟರ್ ಮಾತನಾಡಿದರು.

ಮುಖಂಡರಾದ ರಾಜೇಂದ್ರ, ವಕೀಲ ನಾಗರಾಜ್, ಗಗನ್ ಸುರಗಳ್ಳಿ ವಿದ್ಯಾಶಂಕರ್, ಪರಮಶಿವಯ್ಯ, ರೇಣುಕಾಸ್ವಾಮಿ ಇದ್ದರು.