ರೈಲು ಪ್ರಯಾಣದಲ್ಲಿ ದಾರುಣ ಸಾವಪ್ಪಿದ ಅನ್ನಪೂರ್ಣಗೆ ಶ್ರದ್ಧಾಂಜಲಿ, ಜಾಗೃತಿ ಸಭೆ

| Published : Feb 12 2024, 01:30 AM IST

ರೈಲು ಪ್ರಯಾಣದಲ್ಲಿ ದಾರುಣ ಸಾವಪ್ಪಿದ ಅನ್ನಪೂರ್ಣಗೆ ಶ್ರದ್ಧಾಂಜಲಿ, ಜಾಗೃತಿ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ರೈಲ್ವೆ ನಿಲ್ದಾಣ ಆವರಣದಲ್ಲಿ ವಿವಿಧ ಮಹಿಳಾ ಸಂಘಟನೆಗಳ ಸಮಾನ ಮನಸ್ಕರ ವೇದಿಕೆ ವತಿಯಿಂದ ಈಚೆಗೆ ರೈಲು ಪ್ರಯಾಣದಲ್ಲಿ ದಾರುಣ ಸಾವು ಕಂಡ ಅನ್ನಪೂರ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ವೇಳೆ ಅನ್ನಪೂರ್ಣಮ್ಮ ಸಾವಿನ ತನಿಖೆಗೆ ಬಿಜೆಪಿ ಮಹಿಳಾ ಮೋರ್ಚಾ ಆಗ್ರಹಿಸಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇತ್ತೀಚೆಗೆ ರೈಲು ಪ್ರಯಾಣದಲ್ಲಿ ದಾರುಣ ಸಾವು ಕಂಡ ಶಿವಮೊಗ್ಗದ ಅನ್ನಪೂರ್ಣ ಅವರಿಗೆ ಶನಿವಾರ ವಿವಿಧ ಮಹಿಳಾ ಸಂಘಟನೆಗಳ ಸಮಾನ ಮನಸ್ಕರ ವೇದಿಕೆ ವತಿಯಿಂದ ರೈಲ್ವೆ ನಿಲ್ದಾಣ ಆವರಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಜಾಗೃತಿ ಮೂಡಿಸಲಾಯಿತು.

ಅನ್ನಪೂರ್ಣಮ್ಮ ಅವರಿಗೆ ಮೌನಾಚರಣೆ ಸಲ್ಲಿಸಿದ ನಂತರ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಗಾಯಿತ್ರಿ ದೇವಿ, ಇದೊಂದು ದಾರುಣವಾದ ಘಟನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಬರಲಿ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ಅತ್ಯಂತ ಸೃಜನಶೀಲರಾಗಿದ್ದರು ಮತ್ತು ಧೈರ್ಯವಂತರಾಗಿದ್ದರು. ಆದರೆ, ಈ ಸಾವು ಹೇಗೆ ಆಯಿತು ಎಂಬುವುದು ಗೊತ್ತಾಗುತ್ತಿಲ್ಲ. ಸೂಕ್ತ ತನಿಖೆಯಾದರೆ ಸತ್ಯಾಂಶ ಹೊರಬರುತ್ತದೆ ಎಂದರು.ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂದುಕೊಂಡರು ಕೂಡ ಅನೇಕ ಸಂದರ್ಭಗಳಲ್ಲಿ ದೈಹಿಕವಾಗಿ ಸಾಮರ್ಥ್ಯ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಅತ್ಯಂತ ಸಮರ್ಥವಾಗಿ ನಿಭಾಯಿಸಬೇಕು. ಹೆಣ್ಣು ಮಕ್ಕಳು ಪ್ರಯಾಣ ಮಾಡುವಾಗ ಅತ್ಯಂತ ಜಾಗೃತಿವಹಿಸಬೇಕು ಎಂದರು.

ಹೆಣ್ಣು ಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಸಂಸದರಿಗೆ ಮತ್ತು ರೈಲ್ವೆ ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ. ಜಿಪಿಎಸ್ ಅಳವಡಿಸುವಂತೆ ಆಗ್ರಹಿಸಿದ್ದೇವೆ ಎಂದರು.ರೈಲ್ವೆ ಇಲಾಖೆಯ ಅಧಿಕಾರಿ ಪಿ.ಆರ್.ಪ್ರಕಾಶ್ ಮಾತನಾಡಿ, ಮಹಿಳೆಯರು ರೈಲ್ವೆಯಲ್ಲಿ ಪ್ರಯಣಿಸುವಾಗ ಎಚ್ಚರದಿಂದ ಇರಬೇಕು. ಒಡವೆಗಳ ಪ್ರದರ್ಶನ ಬೇಡ, ಅಪರಿಚಿತರ ಸ್ನೇಹ ಬೇಡ, ನಿದ್ರೆ ಹೋಗಬೇಡಿ, ಚಲಿಸುವ ರೈಲನ್ನು ಹತ್ತಬೇಡಿ, ಮಧ್ಯ ಮಧ್ಯ ಇಳಿಯಬೇಡಿ, ಕಳ್ಳರ ಬಗ್ಗೆ ಎಚ್ಚರದಿಂದ ಇರಿ ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಸ್ಟೇಷನ್ ಮಾಸ್ಟರ್‌ಗೆ ಮನವಿ ಸಲ್ಲಿಸಲಾಯಿತು.ಅನ್ನಪೂರ್ಣರವರ ದಾರುಣ ಸಾವಿನ ಘಟನೆಯನ್ನು ವಿಶೇಷ ತನಿಖಾದಳದಿಂದ ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ನೀಡಬೇಕು. ಮತ್ತು ಇವರ ಸಾವಿಗೆ ಸೂಕ್ತ ಪರಿಹಾರ ನೀಡಬೇಕು. ಮಹಿಳಾ ಸಂಘಟನೆಗಳಿಗೆ, ಶಾಲಾ ಕಾಲೇಜುಗಳಲ್ಲಿ ರೈಲ್ವೆ ಪ್ರಯಾಣಕ್ಕೆ ಸಂಬಂಧಿಸಿದಂತೆ ಆಗಾಗ ಅಗತ್ಯ ಶಿಕ್ಷಣ ಮತ್ತು ಜಾಗೃತಿ ನೀಡಬೇಕು. ರೈಲ್ವೆ ಸೇವಾ ಟ್ವಿಟರ್ ಖಾತೆ ಹಾಗೂ ರೈಲ್ವೆ ಮದದ್ ಪೋರ್ಟಲ್ ಆಪ್ ಡೌನ್‍ಲೋಡ್ ಮಾಡಿಕೊಂಡು ತುರ್ತು ಸಂದರ್ಭದಲ್ಲಿ ಸಂದೇಶ ಕಳುಹಿಸಬೇಕು ಎಂಬುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಮನವಿಯಲ್ಲಿ ತಿಳಿಸಲಾಯಿತು.ಈ ಸಂದರ್ಭದಲ್ಲಿ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರಾದ ರಂಜಿನಿ ದತ್ತಾತ್ರಿ, ಎಸ್.ವಿ.ಚಂದ್ರಕಲಾ, ಡಾ. ಸರೋಜ, ಶೀಲಾ ಸುರೇಶ್, ಶಾಂತಾ ಸುರೇಂದ್ರ, ಪ್ರತಿಮಾ ಡಾಕಪ್ಪಗೌಡ, ಭಾರತೀ ರಾಮಕೃಷ್ಣ, ಪುಷ್ಪ ರವಿ, ಉಷಾ ಉಡುಪ, ಯಶೋಧ, ಆರತಿ ಆ.ಮಾ. ಪ್ರಕಾಶ್, ಸೀತಾಲಕ್ಷ್ಮೀ, ಶಾರದ, ಕಾತ್ಯಾಯಿನಿ, ರೈಲ್ವೆ ಪೊಲೀಸ್ ಇನ್ಸ್‌ಪೆಕ್ಟರ್ ಎ.ಜಿ.ಇಂದಿರಾ , ಚಂದ್ರಮತಿ ಹೆಗಡೆ ಮತ್ತಿತರರು ಇದ್ದರು.