ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಿರುತರೆ ನಟಿ ಹಾಗೂ ಶ್ರೇಷ್ಠ ನಿರೂಪಕಿ ಅಪರ್ಣಾ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಸಿನಿಮಾ ಹಾಗೂ ದೂರದರ್ಶನದ ಕಲಾವಿದೆಯಾಗಿ ,ಕನ್ನಡ ನಾಡಿನ ಶ್ರೇಷ್ಠ ನಿರೂಪಕಿಯಾಗಿ, ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಹಾಗೂ ಕನ್ನಡದ ಅಭಿಮಾನವನ್ನು ತಮ್ಮ ವಾಗ್ಚರಿಯ ಮೂಲಕ ವಿಶ್ವ ಪ್ರಸಿದ್ಧಗೊಳಿಸಿ ಕನ್ನಡಿಗರ ಮನೆಮಾತಾಗಿದ್ದ ಅಪರ್ಣ ಅವರ ನಿಧನ ನಿರೂಪಣಾ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ. ನಿರೂಪಣೆಯ ಮೂಲಕ ಕನ್ನಡಿಗರ ಹೃದಯ ಗೆದ್ದ ಅಪರ್ಣಾ ಅವರು ಜನರ ಮನಸ್ಸಿನಲ್ಲಿ ಸದಾ ಕಾಲ ಶಾಶ್ವತ ಸ್ಥಾನ ಪಡೆದಿದ್ದಾರೆ. ಧಾರ್ಮಿಕ ಸ್ಥಳಗಳ ಹಾಗೂ ಪವಿತ್ರ ಸ್ಥಳಗಳ ವಿವರಣೆ ಅವರ ವಿಶೇಷವಾಗಿತ್ತು ಎಂದು ತಿಳಿಸಿದರು.ನಿವೃತ್ತ ಶಿಕ್ಷಕಿ ಸರಸ್ವತಿ ಮಾತನಾಡಿ, ಅಪರ್ಣಾ ಅವರು ಕಾರ್ಯಕ್ರಮದ ನಿರೂಪಣೆಯ ಮೂಲಕ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿದವರು. ಅವರಲ್ಲಿದ್ದ ಕನ್ನಡ ಭಾಷೆಯ ಪ್ರೌಢಿಮೆ ಹಾಗೂ ಭಾಷೆಯ ಸ್ಥಾನ ನೂರಾರು ಜನರಿಗೆ ಸ್ಪೂರ್ತಿಯನ್ನು ತುಂಬಿತ್ತು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಶಿವಲಿಂಗ ಮೂರ್ತಿ ಮಾತನಾಡಿ, ಅಪರ್ಣಾ ಕನ್ನಡದ ಬಹು ದೊಡ್ಡ ಪ್ರತಿಭೆ. ಕನ್ನಡ ನಾಡಿನ ಸಾವಿರಾರು ಕಾರ್ಯಕ್ರಮಗಳ ರೂವಾರಿಯಾಗಿದ್ದವರು ಎಂದರು. ರವಿಚಂದ್ರ ಪ್ರಸಾದ್, ಬಿಕೆ ಆರಾಧ್ಯ, ಚಂದ್ರು, ಉಪಸ್ಥಿತರಿದ್ದರು.