ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಎಸ್.ಆರ್.ಎಸ್ ಪ್ರಜ್ಞಾ ವಿದ್ಯಾಶಾಲೆಯಲ್ಲಿ ರಾಪ್ಟ್ರೀಯ ಕ್ರೀಡಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.ಸಂಸ್ಥೆಯ ಅಧ್ಯಕ್ಷರಾದ ಆರ್ ರಾಜಗೋಪಾಲಶೆಟ್ಟಿರವರು ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಕ್ಕಳನ್ನು ಉದ್ದೇಶಿಸಿ ಮಾತಾಡಿದ ಅವರು, ಭಾರತದ ಹಾಕಿ ಕ್ರೀಡೆಯ ಮೇರು ಪ್ರತಿಭೆ ಮೇಜರ್ ಧ್ಯಾನ್‌ಚಂದ್‌ರವರ ಜನ್ಮ ದಿನವನ್ನು ಇಡೀ ದೇಶದಲ್ಲಿ ಆಗಸ್ಟ್ ೨೯ ರಂದು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ೧೯೪೧ರಿಂದ ೧೯೭೯ರ ಅವಧಿಯಲ್ಲಿ ಭಾರತದ ಹಾಕಿ ಕ್ರೀಡೆಯಲ್ಲಿ ವಿರಾಜಮಾನರಾಗಿ ವಿಜೃಂಭಿಸಿ ಹಾಕಿ ಮಾಂತ್ರಿಕ ಎಂದೇ ಪ್ರಖ್ಯಾತರಾಗಿರುವ ಧ್ಯಾನ್‌ಚಂದ್‌ರವರು, ಹಾಕಿ ಕ್ರೀಡೆಯ ದಂತಕಥೆಯಾಗಿದ್ದಾರೆ. ಅವರ ಚೆಂಡಿನ ನಿಯಂತ್ರಣ, ನಿಖರತೆ ಮತ್ತು ಗೋಲು ಮಾಡುವ ಸಾಮರ್ಥ್ಯವು ವಿಶ್ವದ ಮೆಚ್ಚುಗೆ ಗಳಿಸಿತ್ತು.ಒಟ್ಟು ೧೮೫ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳನ್ನು ಅಡಿ ೫೭೦ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಧ್ಯಾನ್‌ಚಂದ್ ಭಾರತದ ಕ್ರೀಡಾ ಇತಿಹಾಸದಲ್ಲಿ ಅಪ್ರತಿಮ ಸ್ಥಾನ ಪಡೆದಿದ್ದಾರೆ. ಅವರು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಮತ್ತು ಕೀರ್ತಿ ತಂದು ಕೊಟ್ಟ ನಿಜವಾದ ಭಾರತದ ಕ್ರೀಡಾ ರತ್ನ. ಸುಮಾರು ೧೯೨೬ರಿಂದ ೧೯೪೯ ವರೆಗೆ ಭಾರತವನ್ನು ಹಾಕಿ ಕ್ರೀಡೆಯಲ್ಲಿ ಉತ್ತುಂಗಕ್ಕೇರಿಸಿದ ಮಹಾನ್ ಕ್ರೀಡಾಪಟು ಧ್ಯಾನ್‌ಚಂದ್‌ರವರು ಒಟ್ಟು ೮ ಒಲಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿ ೭ ಒಲಂಪಿಕ್ ಕ್ರೀಡೆಗಳಲ್ಲಿ ಚಿನ್ನದ ಪದಕಗಳನ್ನು ಪಡೆದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಮಕ್ಕಳಾದ ನೀವು ಧ್ಯಾನ್‌ಚಂದ್‌ರವರಂತೆ ತಮ್ಮ ತಮ್ಮ ಇಚ್ಛೆಯ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಕಠಿಣ ಪರಿಶ್ರಮದೊಂದಿಗೆ ಯಶಸ್ವಿನ ಉತ್ತುಂಗಕ್ಕೇರಬಹುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಜಗೋಪಾಲ ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿಯಾದ ನಟರಾಜ್. ಎಂ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆಯಾದ ಆಶಾ ನಟರಾಜ್, ಶಾಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.