ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ತಾಲೂಕಿನ ಬೆಳ್ಳಾವಿಯ ಕಾರದೇಶ್ವರ ಮಠದ, ಕಾರದ ಶಿವಯೋಗಿಗಳ ಕರ್ತೃ ಗದ್ದುಗೆ ಲೋಕಾರ್ಪಣೆ ಸಮಾರಂಭದ ಪ್ರಯುಕ್ತ, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ, ಶಾಸಕ ಬಿ.ಸುರೇಶ್‌ಗೌಡ, ಮಾಜಿ ಸಂಸದ ಜಿ.ಎಸ್.ಬಸವರಾಜು ಮತ್ತಿತರ ಗಣ್ಯರು ಹಾಜರಿದ್ದರು.ಕಾರದ ವೀರಬಸವ ಸ್ವಾಮೀಜಿಗಳ ಸಮ್ಮುಖದಲ್ಲಿ, ವಿವಿಧ ಪೂಜಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಕಾರದ ಶೀವಯೋಗಿಗಳು ಲಿಂಗೈಕ್ಯರಾಗಿ 116 ವರ್ಷಗಳು ಕಳೆದಿದ್ದು, ಮಠದ ಆವರಣದಲ್ಲಿ ನಿರ್ಮಾಣ ಮಾಡಿರುವ ಅವರ ಗದ್ದುಗೆಯ ಲೋಕಾರ್ಪಣೆ ಕಾರ್ಯಕ್ರಮದ ಪ್ರಯುಕ್ತ ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆಯಿಂದಲೇ ಕಳಸಾರಾಧನೆ, ನೂತನ ವಿಮಾನಗೋಪುರದ ಕಳಸಕ್ಕೆ ಹಾಗೂ 108 ಶಿವಲಿಂಗಗಳಿಗೆ ಸಂಸ್ಕಾರಾದಿ ಕಾರ್ಯಗಳು, ಕರ್ತೃ ಗದ್ದುಗೆಗೆ ಧನಾದಿವಾಸ, ಪುಷ್ಪಾದಿವಾಸ, ಕರ್ತೃಗದ್ದುಗೆಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಕ್ಷೀರಾಭಿಷೇಕ, ಮಹಾಭಿಷೇಕ ಮಹಾ ಮಂಗಳಾರತಿ ನೆರವೇರಿದವು.ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕುಂಚಿಟಿಗರ ಸಂಸ್ಥಾನದ ಡಾ.ಹನುಮಂತನಾಥ ಸ್ವಾಮೀಜಿ, ರೇವಣ ಸಿದ್ದೇಶ್ವರ ಮಠದ ಬಿಂದುಶೇಖರ ಸ್ವಾಮೀಜಿ ಸೇರಿ ವಿವಿಧ ಮಠಗಳ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಿದ್ಧರಬೆಟ್ಟ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಹಾ ತಪಸ್ವಿಗಳು, ಸಿದ್ಧಿಪುರುಷರು ಆದ ಕಾರದ ಶಿವಯೋಗಿಗಳ ಗದ್ದುಗೆಯನ್ನು, ಅವರು ಲಿಂಗೈಕ್ಯರಾದ 116 ವರ್ಷಗಳ ನಂತರ ಇಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಕಾರದ ವೀರಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ಭಕ್ತರ ಸಹಕಾರದಲ್ಲಿ, ಈ ಮಠ ಅಭಿವೃದ್ಧಿಯಾಗುತ್ತಿದೆ. ಶಿವಯೋಗಿಗಳು ನಡೆದಾಡಿದ ಪುಣ್ಯಭೂಮಿಯಲ್ಲಿ ಸುಮಾರು ಒಂದೂವರೆ ಕೋಟಿ ರು. ವೆಚ್ಚದಲ್ಲಿ ಗದ್ದುಗೆ ನಿರ್ಮಾಣ ಮಾಡಿ ಶಾಸ್ತ್ರೋಕ್ತವಾಗಿ ಪೂಜೆ, ಧಾರ್ಮಿಕ ಕಾರ್ಯಗಳೊಂದಿಗೆ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು.ಕಾರದ ಶಿವಯೋಗಿಗಳ ಸೇವಾ ಸಮಿತಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಉಪಾಧ್ಯಕ್ಷ ಷಣ್ಮುಖಪ್ಪ, ಕಾರ್ಯದರ್ಶಿ ಎಂ.ಎಸ್.ಉಮೇಶ್, ಖಜಾಂಚಿ ಟಿ.ಡಿ.ರಮೇಶ್, ನಿರ್ದೇಶಕರಾದ ಟಿ.ಆರ್.ಸದಾಶಿವಯ್ಯ, ಟಿ.ಎಸ್.ಗಟ್ಟಿ, ಟಿ.ಸಿ.ಕಿಶೋರ್, ಮೃತ್ಯುಂಜಯಪ್ಪ, ನಂಜುಂಡಸ್ವಾಮಿ, ಶಿವಶಂಕರ್, ಸಿ.ಎ.ಬಸವರಾಜು, ಚನ್ನಬಸವಣ್ಣ, ಮುಖಂಡರಾದ ದಿಲೀಪ್‌ಕುಮಾರ್, ಚಂದ್ರಶೇಖರಬಾಬು, ಬಿ.ಬಿ.ಮಹದೇವಯ್ಯ,ಗೂಳೂರು ಶಿವಕುಮಾರ್, ರಘು ಹೆಬ್ಬಾಕ,ಅಂಬರೀಶ್, ನವೀನ್‌ಕುಮಾರ್, ಹರೀಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.