ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ತಾಲೂಕಿನ ಹಲಕುರ್ಕಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಲ್ಲಿ 33 ವರ್ಷಗಳ ಕಾಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮಣ್ಣ ಮಾದರ ಅವರಿಗೆ ಗ್ರಾಮದ ಪ್ರಮುಖರು ಅವರ ನಿವಾಸದಲ್ಲಿ ಸರಳ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.ಗ್ರಾಮದ ಹಿರಿಯರಾದ ಎಂ.ಎನ್. ನಾಯ್ಕರ ಮಾತನಾಡಿ, ಕಳೆದ 34 ವರ್ಷಗಳಿಂದರಾಮಣ್ಣ ಮಾದರ ಹಲಕುರ್ಕಿ ಗ್ರಾಮದ ರೈತ ಬಾಂಧವರಿಗೆ ಆಪದ್ಬಾಂಧವನಂತೆ ಕೆಲಸ ಮಾಡಿದ್ದಾರೆ. ಕಾಲಕಾಲಕ್ಕೆ ಬದಲಾದ ಬ್ಯಾಂಕಿನ ಆಡಳಿತ ಮಂಡಳಿಗಳ ಜೊತೆ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಸಿಬ್ಬಂದಿ ಮತ್ತು ಸಹಕಾರ ಇಲಾಖೆಯ ಸಿಬ್ಬಂದಿ ವಿಶ್ವಾಸ ಗಳಿಸಿ ರೈತರಿಗೆ ಸಕಾಲಕ್ಕೆ ಸಾಲ ಒದಗಿಸುವುದು, ಸಾಲ ಮನ್ನಾ, ಬಡ್ಡಿ ಮನ್ನಾ, ಬೆಳೆವಿಮೆ ವಿತರಣೆ ಸೌಲಭ್ಯಗಳನ್ನು ರೈತರಿಗೆ ಕಾಲಮಿತಿಯೊಳಗೆ ದೊರಕಿಸಿಕೊಟ್ಟಿದ್ದಾರೆ ಎಂದರು.ರೈತರು ಪಡೆದ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲಗಳನ್ನು ಸಕಾಲದಲ್ಲಿ ಮರುಪಾವತಿ ಮಾಡಲು ರೈತರಿಗೆ ತಿಳಿವಳಿಕೆ ನೀಡಿ ರೈತರು ಕಟಬಾಕಿದಾರರಾಗದಂತೆ ನೋಡಿಕೊಂಡಿದ್ದಾರೆ. ಬ್ಯಾಂಕ್ ಮೂಲಕ ಗ್ರಾಮದ ಫಲಾನುಭವಿಗಳಿಗೆ ಪಡಿತರ ವಿತರಣೆ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಒಂದು ಕಾಲಕ್ಕೆ ಹಾನಿಯಲ್ಲಿದ್ದ ಬ್ಯಾಂಕ್ ಮುಂದೆ ಸತತವಾಗಿ ಲಾಭದಲ್ಲಿ ಬರಲು ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ರಾಮಣ್ಣ ಅವರ ಸೇವೆ ಹಲಕುರ್ಕಿ ಗ್ರಾಮದ ರೈತರ ನೆನಪಿನಲ್ಲಿ ಬಹುಕಾಲ ಉಳಿಯುವಂತಹುದಾಗಿದೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ. ದೇವರು ಅವರಿಗೆ ಆಯುರಾರೋಗ್ಯ ದಯಪಾಲಿಸಲಿ. ಅವರ ಸೇವೆ ಹಲಕುರ್ಕಿ ಗ್ರಾಮದ ರೈತರಿಗೆ ಮುಂದಿನ ದಿನಗಳಲ್ಲಿಯೂ ಬೇರೆ ರೀತಿಯಲ್ಲಿ ದೊರೆಯಲಿ ಎಂದು ಹೇಳಿದರು. ವಕೀಲ ಶಂಕರ ಪೂಜಾರ, ರಮೇಶ ಗಾಣಿಗೇರ, ಶಿಕ್ಷಕ ಕೆ.ಎಚ್. ಮಾದರ ಇತರರು ಉಪಸ್ಥಿತರಿದ್ದರು.