ಸಾರಾಂಶ
ಇಹಲೋಕ ತ್ಯಜಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರ ಹೊತ್ತ ವಾಹನ ಚನ್ನಪಟ್ಟಣದ ಮೂಲಕ ಮೆರವಣಿಯಲ್ಲಿ ಜಿಲ್ಲೆಯ ಗಡಿಭಾಗಕ್ಕೆ ಆಗಮಿಸಿದಾಗ ಜಿಲ್ಲೆಯ ಜನನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಅಭಿಮಾನಿಗಳು ಗೌರವ ಸಮರ್ಪಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ಇಹಲೋಕ ತ್ಯಜಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರ ಹೊತ್ತ ವಾಹನ ಚನ್ನಪಟ್ಟಣದ ಮೂಲಕ ಮೆರವಣಿಯಲ್ಲಿ ಜಿಲ್ಲೆಯ ಗಡಿಭಾಗಕ್ಕೆ ಆಗಮಿಸಿದಾಗ ಜಿಲ್ಲೆಯ ಜನನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಅಭಿಮಾನಿಗಳು ಗೌರವ ಸಮರ್ಪಣೆ ಮಾಡಿದರು.ಬೆಂಗಳೂರು, ರಾಮನಗರ, ಚನ್ನಪಟ್ಟಣ ಮಾರ್ಗವಾಗಿ ಮಧ್ಯಾಹ್ನ 1.40ರ ಸುಮಾರಿಗೆ ಜಿಲ್ಲೆಯ ಗಡಿಭಾಗವಾದ ತಾಲೂಕಿನ ನಿಡಘಟ್ಟ ಸಮೀಪಕ್ಕೆ ಆಗಮಿಸಿದ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಶಾಸಕರಾದ ಕೆ.ಎಂ.ಉದಯ್, ಪಿ. ರವಿಕುಮಾರ್, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ, ಜಿಪಂ ಮಾಜಿ ಅಧ್ಯಕ್ಷ ಬಸವರಾಜು, ಪುರಸಭಾಧ್ಯಕ್ಷ ಕೋಕಿಲ ಅರುಣ್, ಮೀರಾ ಶಿವಲಿಂಗಯ್ಯ, ಇತಿಹಾಸ ಸಂಶೋಧಕ ತೈಲೂರು ವೆಂಕಟ ಕೃಷ್ಣ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಎಸ್.ಎಂ.ಕೃಷ್ಣರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಹುಟ್ಟೂರು ಸೋಮನಹಳ್ಳಿಗೆ ತೆರಳಿದ ಪಾರ್ಥಿವ ಶರೀರವಿದ್ದ ವಾಹನಕ್ಕೆ ನಿಡಘಟ್ಟ, ರುದ್ರಾಕ್ಷಿಪುರ ಗ್ರಾಮಗಳಲ್ಲಿ ರಸ್ತೆ ಇಕ್ಕಲಗಳಲ್ಲಿ ಕಾದು ನಿಂತಿದ್ದ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಹೂ ಮಳೆಗೆರೆದು ಎಸ್.ಎಂ.ಕೃಷ್ಣ ಅಮರ್ ಹೇ, ಎಸ್ ಎಂ.ಕೃಷ್ಣ ಕೀ ಜೈ, ಚಿರಾಯುವಾಗಲಿ ಎಂದು ಜೈಕಾರ ಹಾಕಿ ವಾಹನಕ್ಕೆ ಹೂಮಳೆಗೆರೆದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.ಕೃಷ್ಣರ ಪಾರ್ಥಿವ ಶರೀರ ಹೊತ್ತ ವಾಹನ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು ಎಸ್.ಎಂ.ಕೃಷ್ಣರ ಭಾವಚಿತ್ರ ಉಳ್ಳ ಫ್ಲಕ್ಸ್ ಗಳನ್ನು ಹಾಕಿ ಪೂಜೆ ಸಲ್ಲಿಸಿದರು.
ಈ ವೇಳೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಭಾರತೀ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ. ತಾಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್. ಕದಲೂರು ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.