ಸಾರಾಂಶ
ಹಾವೇರಿ: ಈಚೆಗೆ ನಿಧನರಾದ ಹಿರಿಯ ಪತ್ರಕರ್ತ ವಸಂತ ನಾಡಿಗೇರ ಅವರಿಗೆ ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ ಮಾತನಾಡಿ, ನಮ್ಮ ಜಿಲ್ಲೆಯವರೆ ಆದ ವಸಂತ ನಾಡಿಗೇರ ಅವರು ಸುದ್ದಿಮನೆಯಲ್ಲಿ ದೊಡ್ಡ ಹೆಸರು ಮಾಡಿದ್ದರು. ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿ ಮಾತು ಕಡಿಮೆ, ಕೆಲಸ ಹೆಚ್ಚು ಎಂಬ ತತ್ವ ಅಳವಡಿಸಿಕೊಂಡಿದ್ದ ಅವರು ಆಕರ್ಷಕ ತಲೆಬರಹದ ಮೂಲಕ ಗಮನ ಸೆಳೆಯುತ್ತಿದ್ದರು ಎಂದರು.ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಕುರುವತ್ತೇರ ಮಾತನಾಡಿ, ಟೈಟಲ್ ಕಿಂಗ್ ಎಂದೇ ಪತ್ರಿಕೋದ್ಯಮದಲ್ಲಿ ಹೆಸರು ಪಡೆದಿದ್ದ ವಸಂತ ನಾಡಿಗೇರ ಅವರು ಮನಮುಟ್ಟುವಂತೆ ಸುದ್ದಿಗಳಿಗೆ ಹೆಡ್ಡಿಂಗ್ ನೀಡುತ್ತಿದ್ದರು. ವ್ಯಾಕರಣದ ಶುದ್ಧಿಗೆ ಆದ್ಯತೆ ನೀಡಬೇಕು ಎಂದು ಯುವ ಪತ್ರಕರ್ತರಿಗೆ ಆಗಾಗ್ಗೆ ಸಲಹೆ ನೀಡುತ್ತಲೇ ಬಂದಿದ್ದರು. ಪತ್ರಿಕೆಗಳಲ್ಲಿ ವ್ಯಾಕರಣ ಶುದ್ಧಿ ಮತ್ತು ಭಾಷಾ ಶುದ್ಧಿಗೆ ಒತ್ತು ನೀಡಿ ಪತ್ರಿಕೆಗಳ ಘನತೆ ಹೆಚ್ಚಿಸಿದ ಕೀರ್ತಿ ದಿ. ವಸಂತ ನಾಡಿಗೇರ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.ಪತ್ರಕರ್ತ ಬಸವರಾಜ ಮರಳಿಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಮಾಧ್ಯಮ ಮತ್ತು ಸಾಹಿತ್ಯಿಕ ಕಾರ್ಯಚಟುವಟಿಕೆಗಳು ನಡೆದಾಗ ಇಂಥ ತೆರೆಮರೆಯ ಸಾಧಕರನ್ನು ಸ್ಮರಿಸುವ ಮೂಲಕ ಗೌರವಿಸುವ ಸಂಪ್ರದಾಯ ಆರಂಭವಾಗಲಿ ಎಂದು ಸಲಹೆ ನೀಡಿದರು.ಪತ್ರಕರ್ತ ಗುರುದತ್ತ ಭಟ್ ಮಾತನಾಡಿ, ಮಾಧ್ಯಮ ಕ್ಷೇತ್ರದ ಹಲವು ಬದಲಾವಣೆಗಳಿಗೆ ಶೀಘ್ರವೇ ಒಗ್ಗಿಕೊಳ್ಳಬೇಕಾದ ಸಂದರ್ಭದಲ್ಲಿ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ವಸಂತ ನಾಡಿಗೇರ ಅವರ ಸಹೃದಯತೆ, ಯುವ ಪತ್ರಕರ್ತರೊಂದಿಗೆ ಹೊಂದಿದ್ದ ಅವಿನಾಭಾವ ನಂಟು ಸ್ಮರಣೀಯವಾಗಿದೆ ಎಂದರು.ಪತ್ರಕರ್ತ ಸಂತೋಷ ಜಿಗಳಿಕೊಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ವೀರೇಶ ಮಡ್ಲೂರು, ಸುರೇಶ ನಾಯಕ, ಕಿರಣ ಮಾಸಣಗಿ, ಫಕ್ಕೀರಯ್ಯ ಗಣಾಚಾರಿ, ವಿನಾಯಕ ಹುದ್ದಾರ, ಶಿವಯೋಗಿಸ್ವಾಮಿ ಮಹಾನುಭಾವಿಮಠ, ಮಂಜುನಾಥ ಗುಡಿಸಾಗರ, ಪರಶುರಾಮ ಡೂಗನವರ, ನಿಂಗಪ್ಪ ಆರೇರ, ವೀರೇಶ ಬಾರ್ಕಿ, ಪ್ರಶಾಂತ ಮರೆಮ್ಮನವರ, ತೌಸೀಫ್, ಎಫ್.ಡಿ. ಗೌಡರ, ಮಂಜುನಾಥ ದಾಸಣ್ಣನವರ, ಮದರಸಾಬ ಮಂಜಲಾಪುರ, ಹನುಮಂತ ಇತರರು ಇದ್ದರು.