ಸಾರಾಂಶ
ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಮೃತರಾದ ಯುವ ನ್ಯಾಯವಾದಿ ಪ್ರಥಮ್ ಬಂಗೇರ ಅವರಿಗೆ ವಕೀಲರ ಸಂಘ ಬಂಟ್ವಾಳ ವತಿಯಿಂದ ಬಿ.ಸಿ.ರೋಡಿನ ನ್ಯಾಯಾಲಯದಲ್ಲಿರುವ ಬಾರ್ ಅಸೋಸಿಯೇಶನ್‌ನಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಬೈಕ್ ಅಪಘಾತದಲ್ಲಿ ಮೃತರಾದ ಯುವ ನ್ಯಾಯವಾದಿ ಪ್ರಥಮ್ ಬಂಗೇರ ಅವರಿಗೆ ವಕೀಲರ ಸಂಘ ಬಂಟ್ವಾಳ ವತಿಯಿಂದ ಬಿ.ಸಿ.ರೋಡಿನ ನ್ಯಾಯಾಲಯದಲ್ಲಿರುವ ಬಾರ್ ಅಸೋಸಿಯೇಶನ್‌ನಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು.ನುಡಿ ನಮನ ಸಲ್ಲಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ, ಜೆ.ಎಮ್.ಎಫ್.ಸಿ.ಬಂಟ್ವಾಳ, ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಇದರ ಅಧ್ಯಕ್ಷೆ ಭಾಗ್ಯಮ್ಮ ಮಾತನಾಡಿ, ವಾಹನಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಮೀರಿ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸಿ,ಸಾವು ನೋವುಗಳು ಉಂಟಾಗುತ್ತವೆ ಎಂದರು.ಜೀವಕ್ಕಿರುವ ಬೆಲೆಯ ಬಗ್ಗೆ ಮತ್ತು ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಮ್.ಎಫ್.ಸಿ.ಬಂಟ್ವಾಳ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಪ್ರಭಾರ ಸದಸ್ಯ ಕಾರ್ಯದರ್ಶಿ ಕೃಷ್ಣಮೂರ್ತಿ ಎನ್. ಅವರು ಮಾತನಾಡಿ, ಸಂಚಾರದ ವೇಳೆ ನಿಯಮ ಪಾಲನೆ ಜೊತೆ ಜಾಗರೂಕತೆಯಿಂದ ಮತ್ತು ನಿಧಾನವಾಗಿ ಚಲಿಸುವ ಬಗ್ಗೆ ತಿಳಿಸಿದರು.ಬಂಟ್ವಾಳ ವಕೀಲರ ಸಂಘ ಅಧ್ಯಕ್ಷ ರಿಚರ್ಡ್ ಕೊಸ್ತಾ ಮಾತನಾಡಿ, ಪ್ರಥಮ್ ನ ಸಾವಿನ ದುಃಖ ಸಹಿಸುವ ಶಕ್ತಿಯನ್ನು ಕುಟುಂಬ ವರ್ಗಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸಿದರು. ಅಂಗಾಗ ದಾನ ಮಾಡಿದ ಯುವ ವಕೀಲ ಪ್ರಥಮ್ ಬಂಗೇರ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ ಎಂದು ಹೇಳಿದರು.
ಹಿರಿಯ, ಕಿರಿಯ ಹಾಗೂ ಪ್ರಥಮ್ ನ ವಕೀಲ ಸ್ನೇಹಿತರು ನುಡಿ ನಮನ ಸಲ್ಲಿಸಿದರು. ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದರು. ಗಿರೀಶ್ ಮುಳಿಯಾಲ ನಿರೂಪಿಸಿದರು.