(ವಾಜಪೇಯಿ ಚಾಲಕಗೆ ಸನ್ಮಾನ) ವಾಜಪೇಯಿ ಚಾಲಕ ಮದೆನಾಡು ಕುಶಾಲಪ್ಪ ಗೌಡರಿಗೆ ಗೌರವಾರ್ಪಣೆ

| Published : Nov 20 2025, 01:45 AM IST

(ವಾಜಪೇಯಿ ಚಾಲಕಗೆ ಸನ್ಮಾನ) ವಾಜಪೇಯಿ ಚಾಲಕ ಮದೆನಾಡು ಕುಶಾಲಪ್ಪ ಗೌಡರಿಗೆ ಗೌರವಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ ಅಂಗವಾಗಿ ಅಟಲ್ ವಿರಾಸತ್ ಎಲ್ಲೆಡೆ ನಡೆಯುತ್ತಿದ್ದು, ಶುಕ್ರವಾರ ಪುತ್ತೂರಿನ ಬಿಜೆಪಿ ವತಿಯಿಂದ, ಸುಮಾರು ೧೫ ವರ್ಷಗಳ ಕಾಲ ವಾಜಪೇಯಿ ಕಾರು ಚಾಲಕರಾಗಿದ್ದ ಕೊಡಗಿನ ಮದೆನಾಡು ನಿವಾಸಿ ಕುಶಾಲಪ್ಪ ಗೌಡ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ ಅಂಗವಾಗಿ ಅಟಲ್ ವಿರಾಸತ್ ಎಲ್ಲೆಡೆ ನಡೆಯುತ್ತಿದ್ದು, ಶುಕ್ರವಾರ ಪುತ್ತೂರಿನ ಬಿಜೆಪಿ ವತಿಯಿಂದ, ಸುಮಾರು ೧೫ ವರ್ಷಗಳ ಕಾಲ ವಾಜಪೇಯಿ ಕಾರು ಚಾಲಕರಾಗಿದ್ದ ಕೊಡಗಿನ ಮದೆನಾಡು ನಿವಾಸಿ ಕುಶಾಲಪ್ಪ ಗೌಡ ಅವರನ್ನು ಗೌರವಿಸಲಾಯಿತು. ವಾಜಪೇಯಿ ದೇಶದ ಪ್ರಧಾನಿ ಆಗುವ ಮೊದಲೇ ಇಡೀ ದೇಶ ಸುತ್ತಿ ತನ್ನ ಪಕ್ಷದ ಸಂಘಟನೆಯ ಕೆಲಸ ನಡೆಸುತ್ತಿದ್ದರು. ಸಂಸತ್ತಿನಲ್ಲಿ ವಿರೋಧ ಪಕ್ಷ ನಾಯಕರಾಗಿ ದೇಶದ ಜನರ ಪರವಾಗಿ ಧ್ವನಿಯನ್ನು ಎತ್ತಿದ್ದರು. ವಾಜಪೇಯಿ ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಅವರು ಬೆಂಗಳೂರು ಹಾಗೂ ಇತರ ಭಾಗಗಳಿಗೆ ಬಂದ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಮದೆನಾಡು ನಿವಾಸಿ ಬಲ್ಯಾಣ ಕುಶಾಲಪ್ಪ ಗೌಡ ಅವರ ಕಾರಿನ ಚಾಲಕರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನ.೧೯ ರಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಆಚರಣೆ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಅಟಲ್ ವಿರಾಸತ್ ಕಾರ್ಯಕ್ರಮ ನಡೆಯುವ ವಿಚಾರ ತಿಳಿದು ಕುಶಾಲಪ್ಪ ಗೌಡ ತನ್ನ ಪತ್ನಿಯೊಂದಿಗೆ ಪುತ್ತೂರಿಗೆ ಆಗಮಿಸಿದ್ದರು. ಹೀಗೆ ಬಂದ ಕುಶಾಲಪ್ಪ ಗೌಡ ದಂಪತಿಯನ್ನು ಬಿಜೆಪಿ ವತಿಯಿಂದ ಗೌರವಿಸಲಾಯಿತು. ವಾಜಪೇಯಿ ಜೊತೆಗಿನ ತಮ್ಮ ನಂಟಿನ ಬಗ್ಗೆ ಅನುಭವ ಹಂಚಿಕೊಂಡ ಕುಶಾಲಪ್ಪ ಗೌಡರು ವಾಜಪೇಯಿಯವರು ೧೯೮೯ ರ ವೇಳೆಗೆ ಬೆಂಗಳೂರಿಗೆ ಬಂದಾಗ ಸ್ಥಳೀಯ ಮುಖಂಡರೋರ್ವರ ಮೂಲಕ ವಾಜಪೇಯಿ ಪರಿಚಯವಾಗಿತ್ತು. ಬೆಂಗಳೂರಿನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ದುಡಿಯುತ್ತಿದ್ದ ಕುಶಾಲಪ್ಪರು ವಾಜಪೇಯಿ ಪುಟ್ಟಪರ್ತಿಗೆ ಹೋಗುವ ಸಂದರ್ಭದಲ್ಲಿ ಅವರ ಕಾರಿನ ಚಾಲಕನಾಗಿ ಮೊದಲು ಕಾರ್ಯ ನಿರ್ವಹಿಸಿದ್ದರು. ಪುಟ್ಟಪರ್ತಿ, ನಂದಿಬೆಟ್ಟ, ದೊಡ್ಡಬಳ್ಳಾಪುರ,ಚಿಕ್ಕಬಳ್ಳಾಪುರ ಮೊದಲಾದ ಕಡೆಗಳಲ್ಲಿ ವಾಜಪೇಯಿ ಮೀಟಿಂಗ್ ಮಾಡಲು ಹೋದ ಸಂದರ್ಭದಲ್ಲೆಲ್ಲಾ ಕುಶಾಲಪ್ಪರು ವಾಜಪೇಯಿ ಅವರಿಗೆ ಸಾರಥಿಯಾಗಿದ್ದರು. ಕುಶಾಲಪ್ಪರು ವಾಜಪೇಯಿ ಜೊತೆಗೆ ಫೋಟೋ ತೆಗೆಸಿಕೊಂಡು ಗುಡ್ ಡ್ರೈವಿಂಗ್ ಎನ್ನುವ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಅತ್ಯಂತ ಸರಳ ಸ್ವಭಾವದ ಸಾಕಾರ ಮೂರ್ತಿಯಂತಿದ್ದ ವಾಜಪೇಯಿ ಅವರನ್ನ ನೆನಪಿಸುವ ಕಾರ್ಯಕ್ರಮ ನಡೆಯುವ ಹಿನ್ನಲೆಯಲ್ಲಿ ಪುತ್ತೂರಿಗೆ ಆಮಿಸಿರುವುದಾಗಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಪಕ್ಷದ ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ, ಅಪ್ಪಯ್ಯ ಮಣಿಯಾಣಿ, ಚಂದ್ರಶೇಖರ್ ರಾವ್ ಬಪ್ಪಳಿಗೆ ಮತ್ತಿತರರಿದ್ದರು.