ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಪಕ್ಷ ಸಂಘಟಿಸುವ ಉದ್ದೇಶದಿಂದ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಪ್ರಚಾರ ಸಮಿತಿಯಿಂದ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಚಾರ ಸಮಿತಿ ಚುನಾವಣೆಗೊಸ್ಕರ ಮಾತ್ರ ಸೀಮಿತ ಅನ್ನುವ ರೀತಿಯಲ್ಲಿ ಇತ್ತು. ಆದರೆ ಈಗ ಪಕ್ಷ ಸಂಘಟಿಸುವ ಉದ್ದೇಶದಿಂದ ಡಿಸಿಎಂ, ಸಿಎಂ ಶಿಫಾರಸ್ಸಿನ ಮೇರೆಗೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಪ್ರಚಾರ ಸಮಿತಿ ಪಟ್ಟಿಗೆ ಅನುಮೋದನೆ ನೀಡಿದ್ದಾರೆ ಎಂದರು.
365 ದಿನವು ಕೂಡ ಪಕ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಚಾರ ಮಾಡುವ ಅವಶ್ಯಕತೆ ಇದ್ದು, ಆ ದೃಷ್ಠಿಯಿಂದ ಸಂಘಟನೆಯನ್ನು ಹೆಚ್ಚಳ ಮಾಡಿಕೊಳ್ಳಬೇಕಿದೆ. ಈಗಾಗಲೇ ರಾಜ್ಯ ಮಟ್ಟದಲ್ಲಿ 10 ಜನ ಉಪಾಧ್ಯಕ್ಷರು, 12 ಮಂದಿ ಮುಖ್ಯಕೋಡಿನೇಟರ್, 40 ಮಂದಿ ಕೋಡಿನೇಟರ್ ಹಾಗೂ 30 ಜಿಲ್ಲೆಯಲ್ಲೂ ಪ್ರಚಾರ ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದರು.ಜಿಲ್ಲಾ ಸಮಿತಿ, ಬ್ಲಾಕ್ ಸಮಿತಿ ರಚನೆ ಮಾಡಿಕೊಂಡು ಕಾಂಗ್ರೆಸ್‌ದಲ್ಲಿರುವ ಗ್ರಾಮೀಣ ಕಾಂಗ್ರೆಸ್‌ನಲ್ಲಿ ಬೂತ್ ಮಟ್ಟದಲ್ಲಿ ಒಂದು ಬೂತ್‌ಗೆ ಇಬ್ಬರನ್ನೊಳಗೊಂಡಂತೆ ಸಮಿತಿಗಳನ್ನು ರಚನೆ ಮಾಡಿಕೊಳ್ಳಲಿದ್ದೇವೆ. ರಾಜ್ಯದಲ್ಲಿರುವ 58 ಸಾವಿರ ಬೂತ್‌ಗಳಿಗೆ ನೇಮಕ ಮಾಡಲಿದ್ದೇವೆ ಎಂದರು.
ಚುನಾವಣೆ ಎಂದರೆ ಯುದ್ದ ಯುದ್ದದಲ್ಲಿ ಸೇನಾಧಿಕಾರಿಗಳಿದ್ದರೆ ಸಾಕಾಗುವುದಿಲ್ಲ. ಸೈನಿಕರನ್ನು ಹೆಚ್ಚಳ ಮಾಡಿಕೊಳ್ಳಬೇಕು. ಇದು ದೊಡ್ಡ ಸವಾಲು ನಮಗೆ ಈಗಾಗಲೇ ಗ್ರಾಮೀಣ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಎಂದರು.ರಾಹುಲ್ ಗಾಂಧಿ ಅವರು ಮತಕಳ್ಳತನದ ಬಗ್ಗೆ ಬಿಹಾರದಲ್ಲಿ ದೊಡ್ಡ ಆಂದೋಲನವನ್ನೇ ಎಬ್ಬಿಸಿದ್ದಾರೆ. ಮಹಾರಾಷ್ಠದಲ್ಲೂ 5 ವರ್ಷಕ್ಕೆ 1 ವಿಧಾನಸಭೆ ಕ್ಷೇತ್ರದಲ್ಲಿ 21 ಸಾವಿರ ಮತದಾರರು ಹೆಚ್ಚಾಗಿದ್ದರು. 6 ತಿಂಗಳಲ್ಲಿ 41 ಸಾವಿರ ಹೆಚ್ಚಾಗಿ ಮತದಾರರು ಸೇರ್ಪಡೆಯಾಗಿದ್ದಾರೆ ಎಂದರು.
ಮತ ಕಳ್ಳತನ ಬಿಹಾರದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲಿ ಎಲ್ಲೆಡೆ ನಡೆಯುತ್ತಿದೆ. ಮತ ಕಳ್ಳತನ ಮಾಡುವುದು, ಮತದಾರರ ಸೇರ್ಪಡೆ ಮಾಡುವುದರಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ನವರು ಸ್ವಲ್ಪ ಮಟ್ಟಿಗೆ ಹಿಂದೆಯಿದ್ದೇವೆ ಎಂದರೆ ತಪ್ಪಾಗಲಾರದು ಚುನಾವಣೆಯ ಮತಪಟ್ಟಿಯ ಬಗ್ಗೆ ಕಾಂಗ್ರೆಸ್ ಮುತುವರ್ಜಿವಹಿಸಬೇಕಾಗಿದೆ ಎಂದರು.ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಪಿ. ಮರಿಸ್ವಾಮಿ, ಪ್ರಚಾರ ಸಮಿತಿಯ ರಾಜ ಉಪಾಧ್ಯಕ್ಷರಾದ ಕೋಟೆ ಶಿವಣ್ಣ, ಅಬ್ದುಲ್ ಮುನ್ನಿರ್ , ರಾಜ್ಯ ಸಂಯೋಜಕ ಎಸ್. ನಾರಾಯಣ್, ಕೆಪಿಸಿಸಿ ಕಾರ್ಯದರ್ಶಿ ಎಸ್.ಸಿ. ಬಸವರಾಜ್, ಪ್ರಚಾರ ಸಮಿತಿ ಕಾರ್ಯದರ್ಶಿ ನಟರಾಜ್, ಚೂಡ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನ, ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಧುಸೂದನ್ ಹೊಸಹಳ್ಳಿ ಇದ್ದರು.