ಹನುಮಸಾಗರ: ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳ ತ್ರಿಪದಿಗಳ ಮೂಲಕ ಸಮಾಜದಲ್ಲಿನ ಮೌಢ್ಯ ಹಾಗೂ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ ಮಹಾನ್ ಚೇತನ ಕವಿ ಸರ್ವಜ್ಞ ಎಂದು ಕುಂಬಾರ ಸಮಾಜದ ಮುಖಂಡ ಜಗದೀಶ ಕುಂಬಾರ ಹೇಳಿದರು.
ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ''''''''ತ್ರಿಪದಿ ಕವಿ ಸರ್ವಜ್ಞ ಜಯಂತಿ'''''''' ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಗಹನವಾದ ಗದ್ಯ ಮತ್ತು ಸಂಕೀರ್ಣವಾದ ಪದ್ಯಗಳು ಸಾಮಾನ್ಯ ಜನರಿಗೆ ಎಟಕುವುದು ಕಷ್ಟ ಎಂಬ ಅರಿವು ಸರ್ವಜ್ಞನಿಗಿತ್ತು. ಹಾಗಾಗಿಯೇ ಅವರು ಕೇವಲ ಮೂರು ಸಾಲುಗಳ ''''''''ತ್ರಿಪದಿ'''''''' ಸಾಹಿತ್ಯ ಪ್ರಕಾರವನ್ನು ಆಯ್ದುಕೊಂಡರು. ಈ ಮೂರು ಸಾಲುಗಳಲ್ಲಿಯೇ ಜಗತ್ತಿನ ಸಕಲ ಸತ್ಯಗಳನ್ನು ಅಡಗಿಸಿಟ್ಟ ಕಾರಣಕ್ಕಾಗಿಯೇ ಅವರು ''''''''ಸರ್ವಜ್ಞ'''''''' ಎನಿಸಿಕೊಂಡರು ಎಂದರು.
ಪಟ್ಟಣ ಪಂಚಾಯಿತಿ ಬಿಲ್ ಕಲೆಕ್ಟರ್ ಚಂದಯ್ಯ ಹಿರೇಮಠ ಮಾತನಾಡಿ, ಅಸಮಾನತೆಯ ವಿರುದ್ಧ ಸರ್ವಜ್ಞರು ತಮ್ಮ ತ್ರಿಪದಿಗಳನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದರು. ಅಂದಿನ ಕಾಲಕ್ಕೆ ಅವರು ನೀಡಿದ ಸಂದೇಶಗಳು ಇಂದಿನ ಆಧುನಿಕ ಯುಗಕ್ಕೂ ಪ್ರಸ್ತುತವಾಗಿವೆ. ಅವರ ವಿಚಾರಗಳನ್ನು ಕೇವಲ ಓದುವುದಷ್ಟೇ ಅಲ್ಲದೆ, ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಜಯಂತಿ ಆಚರಣೆಗಳಿಗೆ ನಿಜವಾದ ಅರ್ಥ ಸಿಗುತ್ತದೆ ಎಂದರು.ಆದಪ್ಪ ಜವಳಿ, ಅಮರೇಶ ಜವಳಿ, ಜಾವೇದ ಬಳಿಗಾರ ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಬಸವರಾಜ ಶಿವಸಿಂಪಿ, ಹನುಮೇಶ ನರೇಗಲ್, ಮೈಬೂಬ ಇಟಗಿ, ಮಂಗಳೇಶ ಗುಮಗೇರಿ ಇತರರು ಇದ್ದರು.