ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ನಾಡಿನ ಅಸಂಖ್ಯಾತ ಬಡ ವಿದ್ಯಾರ್ಥಿಗಳ ಬಾಳು ಹಸನಾಗಿಸಿದ್ದಾರೆ ಎಂದು ಹಿರಿಯ ಉಪ ನೋಂದಣಾಧಿಕಾರಿ ಸುಭಾಷ್ ಹೊಸಳ್ಳಿ ಹೇಳಿದರು.ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದಿಂದ ನಗರದ ಚಿಕ್ಕಪೇಟೆ ಸಮೀಪ ಭಾನುವಾರ ನಡೆದ ಡಾ.ಶಿವಕುಮಾರ ಸ್ವಾಮೀಜಿಯವರ ಐದನೇ ಪುಣ್ಯಸ್ಮರಣೋತ್ಸವ ಹಾಗೂ ದಾಸೋಹ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಠದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ, ವಿದೇಶದ ವಿವಿಧ ಹುದ್ದೆಗಳಲ್ಲಿದ್ದಾರೆ. ನಾನು ಕೂಡ ಮಠದ ಹಳೆಯ ವಿದ್ಯಾರ್ಥಿ ಎಂದು ಸ್ಮರಿಸಿದರು.ಸಾನ್ನಿಧ್ಯ ವಹಿಸಿದ್ದ ಕೌಠಾದ ಬಸವ ಯೋಗಾಶ್ರಮದ ಬೆಲ್ದಾಳ ಸಿದ್ಧರಾಮ ಶರಣರು ಮಾತನಾಡಿ, ಡಾ. ಶಿವಕುಮಾರ ಸ್ವಾಮೀಜಿ ಅವರ ತ್ರಿವಿಧ ದಾಸೋಹ ಎಲ್ಲರಿಗೆ ಮಾದರಿಯಾಗಿದೆ. ಅವರು ಸಮಾಜದ ಉದ್ಧಾರಕ್ಕೆ ತಮ್ಮ ಬದುಕು ಸಮರ್ಪಣೆ ಮಾಡಿಕೊಂಡಿದ್ದರು ಎಂದು ಹೇಳಿದರು.
ಶಿವಕುಮಾರ ಸ್ವಾಮೀಜಿಯವರು ಬೀದರ್‌ನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅವರೊಂದಿಗೆ ತಮಗೆ ಒಳ್ಳೆಯ ಒಡನಾಟ ಇತ್ತು ಎಂದು ತಿಳಿಸಿದರು.ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಅನುಭಾವ ನೀಡಿ, ಮಠ ಮಾನ್ಯಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದಾಗಿಯೆ ನಾಡಿನ ಜನ ಸಮೃದ್ಧ ಬದುಕು ನಡೆಸಲು ಸಾಧ್ಯವಾಗಿದೆ. ಸಿದ್ಧಗಂಗಾ ಮಠದ ಶ್ರೀಗಳು ನೂರಾರು ಶಾಲಾ, ಕಾಲೇಜು ತೆರೆದು ಅಕ್ಷರ, ಅನ್ನ, ಅರಿವೆ ದಾಸೋಹ ಮಾಡಿದ್ದರು ಎಂದು ನುಡಿದರು.
ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಿದ್ದಗಂಗಾ ಶ್ರೀಗಳ ಶೈಕ್ಷಣಿಕ ಕಾರ್ಯ ಇಡೀ ಮನುಕುಲಕ್ಕೆ ಮಾದರಿ ಪೂಜ್ಯರು ನಡೆದ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು.ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪುರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹೇಶ ಪಾಟೀಲ, ಭಾಲ್ಕಿ ತಾಪಂ ಸಹಾಯಕ ನಿರ್ದೇಶಕ ಚಂದ್ರಶ್ರೇಖರ ಬನ್ನಾಳೆ, ನಿವೃತ್ತ ಮುಖ್ಯಶಿಕ್ಷಕ ಸಿದ್ಧಾರೆಡ್ಡಿ ನಾಗೋರಾ, ಸಂಘದ ಉಪಾಧ್ಯಕ್ಷ ರಮೇಶ ಪಾಟೀಲ ಪಾಶಾಪುರ, ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ ಇದ್ದರು. ಸಂಘದ ಗೌರವಾಧ್ಯಕ್ಷ ನಾಗಭೂಷಣ ಹುಗ್ಗೆ ಸ್ವಾಗತಿಸಿದರೆ ಪತ್ರಕರ್ತ ನಾಗೇಶ ಪ್ರಭಾ ವಂದಿಸಿದರು.