ಪ್ರತಿಯೊಬ್ಬರೂ ಆಧ್ಯಾತ್ಮಿಕತೆ, ಭಕ್ತಿ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು.
ಭಟ್ಕಳ ಆಸರಕೇರಿ ವೆಂಕಟ್ರಮಣ ದೇವಸ್ಥಾನದಲ್ಲಿ ಧರ್ಮಸಭೆಕನ್ನಡಪ್ರಭ ವಾರ್ತೆ ಭಟ್ಕಳ
ಪ್ರತಿಯೊಬ್ಬರೂ ಆಧ್ಯಾತ್ಮಿಕತೆ, ಭಕ್ತಿ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಧ್ಯಾನ ಎಂದರೆ ಅದು ಕಸರತ್ತು ಅಲ್ಲ. ಭಗವಂತನನ್ನು ಏಕಾಗ್ರತೆಯಿಂದ ಸ್ಮರಿಸುವುದೆ ನಿಜವಾದ ಧ್ಯಾನವಾಗಿದೆ ಎಂದು ಶ್ರೀರಾಮ ಕ್ಷೇತ್ರದ ಪೀಠಾಧೀಶ ಮತ್ತು 1008 ಮಹಾ ಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ಭಾನುವಾರ ಪಟ್ಟಣದ ಆಸರಕೇರಿಯ ನಿಚ್ಛಲಮಕ್ಕಿ ತಿರುಮಲ ವೆಂಕಟ್ರಮಣ ದೇವಸ್ಥಾನದ ಗುರುಮಠದಲ್ಲಿ ಪಾಲಕಿ ಉತ್ಸವದ ಧರ್ಮಸಭೆಯ ದಿವ್ಯ ಉಪಸ್ಥತಿ ವಹಿಸಿ ಆಶೀರ್ವಚನ ನೀಡಿದರು. ಭಗವಂತನ ಹತ್ತಿರ ಹೋಗಲು ಕುಬ್ಜ ಮನಸ್ಸುಗಳನ್ನು ಶುದ್ಧ ಮಾಡಿಕೊಳ್ಳಲು ಭಜನೆ, ಸತ್ಸಂಗ ಸಹಕಾರಿಯಾಗಲಿದೆ. ಸತ್ಸಂಗದಿಂದ ಧರ್ಮ ಜಾಗೃತಿ ಆಗುತ್ತದೆ. ನಾವು ನಮ್ಮ ಮನಸ್ಸು ಮತ್ತು ಬುದ್ಧಿಯನ್ನು ನಿರಂತರ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು. ಸ್ವಾಮೀಜಿ, ಮಠಗಳೆಂದರೆ ಸಾಲ ನೀಡುವ ಸಂಘವೆಂಬ ತಪ್ಪುಕಲ್ಪನೆ ಜನರ ಮನಸ್ಸಿನಲ್ಲಿದೆ. ಗುರುಮಠಗಳು ಎಂದಿಗೂ ಧರ್ಮ ಪ್ರಚಾರಕ್ಕೆ ಮೀಸಲೆ ಹೊರತು ಅನ್ಯಭಾವನೆಯಿಂದ ಜನರು ನೋಡಬಾರದು ಎಂಬ ಕಿವಿಮಾತನ್ನು ಹೇಳಿದರು.
ಗುರುಮಠದ ಅಧ್ಯಕ್ಷ ಅರುಣ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಡಿ.ಎಲ್. ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ನಾರಾಯಣ ನಾಯ್ಕ, ಗಂಗಾಧರ ನಾಯ್ಕ ನಿರೂಪಿಸಿದರು. ಸದಸ್ಯ ಕೆ.ಆರ್. ನಾಯ್ಕ ವಂದಿಸಿದರು. ಪಾಲಕಿ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ ಸಾವಿರಾರು ಜನರು ಪ್ರಸಾದ ಸ್ವೀಕರಿಸಿದರು.