ದಾವಣಗೆರೆಯಲ್ಲಿ ಜಿ.ಬಿ.ವಿನಯ್‌ ಬಂಡಾಯದ ಕಹಳೆ?

| Published : Mar 22 2024, 01:01 AM IST

ಸಾರಾಂಶ

ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕಕ್ಕರಗೊಳ್ಳ ಜಿ.ಬಿ.ವಿನಯಕುಮಾರ ತಮ್ಮ ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳೊಂದಿಗೆ ಮುಂದಿನ ನಡೆಯ ಬಗ್ಗೆ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಜನರ ಕನಸನ್ನು ಸಾಕಾರಗೊಳಿಸಲು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸಿದ್ದೆ. ಆದರೆ, ದೆಹಲಿಯಲ್ಲಿ ಕೇವಲ ಅರ್ಧಗಂಟೆಯಲ್ಲೇ ನನ್ನ ಹೆಸರು ಕ್ಯಾನ್ಸಲ್ ಆಗಿದ್ದು, ಮೌಂಟ್ ಎವರೆಸ್ಟನ್ನೇರಿ, ಇನ್ನೇನು ಬಾವುಟ ಸಿಗಿಸಬೇಕೆನ್ನುವಷ್ಟರಲ್ಲಿ ಜಾಡಿಸಿ ಒದ್ದಂಗೆ ನನ್ನ ಹೆಸರು ಕೈಬಿಟ್ಟರು ಎಂದು ಬೆಂಗಳೂರಿನ ಇನ್‌ಸೈಟ್ಸ್‌ ಅಕಾಡೆಮಿ ಸಂಸ್ಥಾಪಕ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕಕ್ಕರಗೊಳ್ಳ ಜಿ.ಬಿ.ವಿನಯಕುಮಾರ ಬೇಸರ ಹೊರ ಹಾಕಿದ್ದಾರೆ.

ನಗರದಲ್ಲಿ ತಮ್ಮ ನಿವಾಸದಲ್ಲಿ ಗುರುವಾರ ತಮ್ಮ ಬೆಂಬಲಿಗರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸಲು ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಪ್ಪ ಮಿನಿಸ್ಟರ್ ಅಲ್ಲ, ನಮ್ಮ ತಾತ ರಾಜಕಾರಣಿಯಲ್ಲ. ಎಂಪಿ, ಎಂಎಲ್‌ಎ ಯಾರೂ ಅಲ್ಲ, ದಾವಣಗೆರೆಯಲ್ಲಿ 30 ವರ್ಷಗಳಿಂದ ಟಿಕೆಟ್ ಸಿಕ್ಕಿಲ್ಲವೆಂದು, ಜನರ ಕನಸನ್ನು ಕಾರ್ಯ ರೂಪಕ್ಕೆ ತರಲು, ಮಾದರಿ ಕ್ಷೇತ್ರ ಮಾಡುವ ಕನಸಿನೊಂದಿಗೆ ಟಿಕೆಟ್‌ಗಾಗಿ ಪ್ರಾಮಾಣಿಕವಾಗಿ, ಶಕ್ತಿ ಮೀರಿ ಪ್ರಯತ್ನ ಮಾಡಿದ್ದೆ ಎಂದರು.

ನಮ್ಮೆಲ್ಲಾ ಹಿತೈಷಿಗಳು, ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು, ವಿವಿಧ ಸಮುದಾಯಗಳ ಮುಖಂಡರ ಸಲಹೆ ಯಂತೆ 20 ದಿನಗಳ ಕಾಲ ಇಡೀ ಕ್ಷೇತ್ರಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 20 ಹಳ್ಳಿಗಳನ್ನು ಸುತ್ತಾಡಿ, ಜನರ ಅಭಿಪ್ರಾಯ ಸಂಗ್ರಹಿಸಲು ತೀರ್ಮಾನಿಸಿದ್ದೇವೆ. ಸಾಮಾನ್ಯ ಜನರಿಂದ ಉಪ ಮುಖ್ಯಮಂತ್ರಿವರೆಗೆ ನಿನಗೆ ಟಿಕೆಟ್ ಸಿಕ್ಕಿದ್ದರೆ, ನೀನು ಗೆದ್ದುಬರುತ್ತಿದ್ದೆಯೆಂಬುದಾಗಿ ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ಇಲ್ಲದಂತಾಗಿದೆ ಎಂದು ಅವರು ಬೇಸರ ತೋಡಿಕೊಂಡರು.

ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲಾ ಸರ್ವೇಗಳಲ್ಲೂ ನನ್ನ ಬಗ್ಗೆ ಎಲ್ಲರಿಂದಲೂ ಪೂರಕ, ಸಕಾರಾತ್ಮಕವಾಗಿ ಪ್ರತಿಕ್ರಿಯೆ, ಅಭಿಪ್ರಾಯ ವ್ಯಕ್ತವಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕನಿಷ್ಟ 25 ಸಾವಿರ ಮತಗಳನ್ನು ಪಡೆಯುಲ ಸಾಮರ್ಥ್ಯ ನನಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಘೋಷಿಸುವ ಪದ್ಧತಿ, ರೀತಿ ಯೇ ಸರಿ ಇಲ್ಲ. ದಾವಣಗೆರೆಯಲ್ಲಿ ಸಾಮಾಜಿಕ ನ್ಯಾಯ ಸತ್ತು ಹೋಗಿದೆ ಎಂದವರು ಹೇಳಿದರು.

ಸ್ವತಃ ಬಿಜೆಪಿಯ ನಾಯಕರೇ ನನ್ನ ಬಗ್ಗೆ ಗುಡ್ ಪರ್ಸನ್‌ ಇನ್‌ ರಾಂಗ್ ಪಾರ್ಟಿ ಎಂಬುದಾಗಿ ಹೇಳಿದ್ದಾರೆ. ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಕೇಳಿದ್ದರೆ ಖಂಡಿತವಾಗಿಯೂ ಟಿಕೆಟ್ ಸಿಗುತ್ತಿತ್ತು. ಪಕ್ಷೇತರನಾಗಿ ನಿಲ್ಲುವ ಬಗ್ಗೆಯೂ ನನಗೆ ಒತ್ತಡ ಇದೆ. ಪಕ್ಷೇತರನಾಗಿ ಸ್ಪರ್ಧೆ ಮಾಡಿದರೂ ನಾನು ಬಲಾಢ್ಯ ಪಕ್ಷಗಳ ವಿರುದ್ಧ ಸ್ಪರ್ಧಿಸಿ, ಗೆಲ್ಲಬೇಕು. ಮತ್ತೊಬ್ಬರನ್ನು ಸೋಲಿಸುವುದ ಕ್ಕೆಂದು ನಾನು ಸ್ಪರ್ಧಿಸುವುದಿಲ್ಲ. ನಾನು ಗೆಲ್ಲಬೇಕೆಂದುಕೊಂಡೇ ಸ್ಪರ್ಧಿಸುವವನು ಎಂದು ಹೇಳಿದರು.

ನನ್ನ ಆತ್ಮಸಾಕ್ಷಿಯು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ಮುಂದಾಗುತ್ತಿಲ್ಲ. ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲ್ಲಲು ತುಂಬಾ ಅವಕಾಶ ಇದ್ದರೂ ನನಗೆ ಟಿಕೆಟ್ ಕೊಟ್ಟಿಲ್ಲ. ಜನ ಸಾಮಾನ್ಯರಾಗಿದ್ದರೆ ರಾಜಕಾರಣಕ್ಕೆ ಬರಬಾರದೆಂಬ ಉದ್ದೇಶವು ಪಕ್ಷದವರಿಗೆ ಇದ್ದಂತಿರುವುದು ಸಾಬೀತಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು. ಸ್ಪರ್ಧಿಸಿ ಗೆಲ್ಲದಿದ್ದರೆ ಮೂಲೆಗುಂಪು!

ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾನು ಸ್ಪರ್ಧಿಸಿದರೆ ಗೆಲ್ಲಲೇಬೇಕು. ಒಂದು ವೇಳೆ ನಾನು ಗೆಲ್ಲದಿದ್ದರೆ ನಮ್ಮನ್ನು ಮೂಲೆಗುಂಪು ಮಾಡುವುದು ಖಚಿತ. ಕ್ಷೇತ್ರಾದ್ಯಂತ ಓಡಾಡಿ ನಿರ್ಧಾರ ಕೈಗೊಂಡ ಮೇಲೆ ಅದಕ್ಕೆ ನಾನು ಬದ್ಧ ನಿರುತ್ತೇನೆ. ಟಿಕೆಟ್ ವಿಚಾರವಾಗಿ ಎಐಸಿಸಿಯಲ್ಲಿ ನನ್ನ ಬಗ್ಗೆ ಸುಮಾರು 25 ನಿಮಿಷ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಪರವಾಗಿ ಹೋರಾಟ ಮಾಡಿದ್ದಾರೆ. ಆದರೆ, ಕಡೆ ಕ್ಷಣದಲ್ಲಿ ನನ್ನ ಹೆಸರನ್ನು ಕೆಲವರು ಕ್ಯಾನ್ಸಲ್ ಮಾಡಿದ್ದಾರೆ ಎಂದು ಜಿ.ಬಿ.ವಿನಯಕುಮಾರ ಹೇಳಿದರು.