ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸರ್ಕಾರದ ಕರ್ನಾಟಕ ವಿರೋಧಿ ಧೋರಣೆ ಖಂಡಿಸಿ, ಕರ್ನಾಟಕಕ್ಕೆ ನ್ಯಾಯ ಕೊಡಿ ಎಂದು ಆಗ್ರಹಿಸಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ತೆರಿಗೆ ನೀತಿ ಧೋರಣೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನೆಲ-ಜಲ-ಭಾಷೆ-ಸಂಸ್ಕೃತಿ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯ ಆಗುತ್ತಿದ್ದು, ಕಳೆದ ಒಂದು ದಶಕದಿಂದ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯಕ್ಕೆ ನ್ಯಾಯವೇ ಸಿಗದಂತಾಗಿದೆ. ಆಡಳಿತಾರೂಢ ಸಂಸದರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರೂ ಅನುದಾನ, ಅಧಿಕಾರ, ಅಭಿವೃದ್ಧಿ ಮತ್ತು ಆದ್ಯತೆ ವಿಚಾರದಲ್ಲಿ ಕರ್ನಾಟಕಕ್ಕೆ ದ್ರೋಹ ಆಗುತ್ತಿರುವುದು ದುರಂತವಾಗಿದೆ. ಒಕ್ಕೂಟ ವ್ಯವಸ್ಥೆಗೆ ಕಳಂಕ ತರುವ ಕೃತ್ಯವಾಗಿದೆ ಎಂದು ಕಿಡಿಕಾರಿದರು.ದೇಶದಲ್ಲೇ ಕರ್ನಾಟಕ ತೆರಿಗೆ ಸಂಗ್ರಹದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಆದರೆ, ಕೇಂದ್ರದಿಂದ ತೆರಿಗೆ ಪಾಲು ಪಡೆಯುವಾಗ ಕೊನೆಯ ಸ್ಥಾನದಲ್ಲಿ ನಿಲ್ಲಿಸಿ ವಂಚಿಸಲಾಗುತ್ತಿದೆ. ೨೦೨೪ರ ತೆರಿಗೆ ಹಂಚಿಕೆಯಲ್ಲಿ ಉತ್ತರಪ್ರದೇಶಕ್ಕೆ ೩೧,೦೩೯,೮೪ ಕೋಟಿ ಕೊಟ್ಟರೆ ಬಿಹಾರಕ್ಕೆ ೧೭,೪೦೩,೩೬ ಕೋಟಿ ನೀಡಿದೆ. ಕರ್ನಾಟಕಕ್ಕೆ ಮಾತ್ರ ತೆರಿಗೆ ಶೋಷಣೆ ನಡೆಯುತ್ತಿದ್ದರೂ ಗಟ್ಟಿಯಾಗಿ ಧನಿ ಎತ್ತದ ಸಂಸದರ ನಡೆ ಅಕಾರ ದಾಹಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಬರ ಬಂದಂತಹ ಸಂದರ್ಭದಲ್ಲಿ ತಿಂಗಳುಗಟ್ಟಲೆ ಅಲೆದರೂ ಪರಿಹಾರ ನೀಡದೆ ಅಮಾನವೀಯವಾಗಿ ವರ್ತಿಸಿದ ಕೇಂದ್ರಕ್ಕೆ ನ್ಯಾಯಾಲಯದ ಮೂಲಕ ಪರಿಹಾರ ಪಡೆದುಕೊಳ್ಳುವ ಸ್ಥಿತಿ ಇದೆ. ಚಿಟಿಕೆ ಹೊಡೆಯುವುದರಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವುದಾಗಿ ಹೇಳಿದವರು ಪ್ರಧಾನಿ ಕೈ ಹಿಡಿದು ಬರೆಸುವುದಾಗಿ ಭರವಸೆ ಕೊಟ್ಟವರು ಈಗ ನಾಪತ್ತೆಯಾಗಿದ್ದಾರೆ. ಕಾವೇರಿ ವಿವಾದದ ಪರಿಹಾರದ ಭರವಸೆ ಆಗಿರುವ ಮೇಕೆದಾಟು ಹದಗೆಟ್ಟ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿರುವ ಕೇಂದ್ರ ಧೋರಣೆ ಅಕ್ಷಮ್ಯವಾಗಿದೆ ಎಂದು ದೂರಿದರು.ರಾಜ್ಯ ಸರ್ಕಾರದ ವಿರುದ್ಧ ಜಿದ್ದಿಗೆ ಬಿದ್ದಂತೆ, ದೆಹಲಿ ದೊರೆಗಳ ನಿರ್ದೇಶನದಲ್ಲಿ ನಡೆದುಕೊಳ್ಳುತ್ತಿರುವ ರಾಜ್ಯಪಾಲರು ಮೈಕ್ರೋಫೈನಾನ್ಸ್ ವಿರುದ್ಧದ ಸುಗ್ರೀವಾಜ್ಞೆಗೆ ಸಹಿ ಹಾಕದಿರುವುದು ಅವರ ಜನವಿರೋ ನಡೆಗೆ ಸಾಕ್ಷಿಯಾಗಿದೆ. ಐಟಿ, ಇಡಿಗಳ ದಾಳಿಗಳು ರಾಜಕೀಯ ಪ್ರೇರಣೆಯಿಂದ ಕೂಡಿದೆ. ಹಿಂದಿ ಹೇರಿಕೆ ನೆಲದ ಭಾಷಯ ಧನಿ ಅಡಗಿಸಿದರೆ ಸಾಂಸ್ಕೃತಿಕ ದಬ್ಬಾಳಿಕೆ ನಾಡಿನ ಸಿರಿವಂತಿಕೆ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ವಿವಿಧ ಸಂಘಟನೆಗಳ ಮುಖಂಡರಾದ ಎಂ. ಕೃಷ್ಣ, ಎಚ್.ಡಿ. ಜಯರಾಂ, ಅಶೋಕ್, ಕೆ.ಎಚ್.ನಾಗರಾಜು, ಸಂತೆಕಸಲಗೆರೆ ಬಸವರಾಜು, ಜಯರಾಂ, ನಾಗರತ್ನ, ವೀಣಾ ಶಂಕರ್, ನರಸಿಂಹಮೂರ್ತಿ, ಗುರುರಾಜ್, ಡಿ. ರಮೇಶ್, ದೊಡ್ಡಯ್ಯ, ಬೋರಲಿಂಗಯ್ಯ, ಸುಂಡಹಳ್ಳಿ ಬಸವರಾಜು, ಹಲ್ಲೆಗೆರೆ ಬೋರಪ್ಪ, ತೂಬಿನಕೆರೆ ಕೃಷ್ಣ, ಪ್ರದೀಪ್ ಇತರರಿದ್ದರು.