ನಂಬಿಕೆ, ಪಾರದರ್ಶಕತೆ ಸಹಕಾರಿ ಸಂಘಗಳ ಮಂತ್ರ

| Published : Sep 05 2025, 01:00 AM IST

ಸಾರಾಂಶ

ಪ್ರಾಮಾಣಿಕತೆ, ಪಾರದರ್ಶಕತೆ ಸಹಕಾರಿ ಸಂಘಗಳ ಮಂತ್ರವಾಗಿದ್ದು, ಸಂಘಗಳಿಂದ ದೊರೆಯುವ ಸಾಲ ಸೌಲಭ್ಯಗಳನ್ನು ಪಡೆದು ಸಕಾಲದಲ್ಲಿ ಮರು ಪಾವತಿ ಮಾಡುವ ಮೂಲಕ ಸಹಕಾರ ಕ್ಷೇತ್ರವನ್ನು ದಕ್ಷಿಣ ಭಾಗದಲ್ಲಿಯೂ ಬಲಿಷ್ಠಗೊಳಿಸಲು ಮುಂದಾಗಬೇಕು ಎಂದು ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಪ್ರಾಮಾಣಿಕತೆ, ಪಾರದರ್ಶಕತೆ ಸಹಕಾರಿ ಸಂಘಗಳ ಮಂತ್ರವಾಗಿದ್ದು, ಸಂಘಗಳಿಂದ ದೊರೆಯುವ ಸಾಲ ಸೌಲಭ್ಯಗಳನ್ನು ಪಡೆದು ಸಕಾಲದಲ್ಲಿ ಮರು ಪಾವತಿ ಮಾಡುವ ಮೂಲಕ ಸಹಕಾರ ಕ್ಷೇತ್ರವನ್ನು ದಕ್ಷಿಣ ಭಾಗದಲ್ಲಿಯೂ ಬಲಿಷ್ಠಗೊಳಿಸಲು ಮುಂದಾಗಬೇಕು ಎಂದು ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಸಮೀಪದ ಮರಿಯಾಲದ ಶ್ರೀ ಮುರುಘರಾಜೇಂದ್ರ ಸ್ವಾಮಿ ಸೌಹಾರ್ದ ಸಹಕಾರಿ ಸಂಘದ ೭ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶ್ರೀ ಮುರುಘರಾಜೇಂದ್ರಸ್ವಾಮಿ ಸೌಹಾರ್ದ ಸಂಘವು ಉತ್ತಮ ವಹಿವಾಟು ಮಾಡಿ, ಲಾಭದತ್ತ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ವಿವಿಧ ರೀತಿಯ ಸಮಾಜಮುಖಿ ಕಾರ್ಯಕ್ರಮಗಳು ಕೈಗೊಳ್ಳುವ ಮೂಲಕ ಇನ್ನು ಹೆಚ್ಚಿನ ಸಾಧನೆ ಮಾಡಬೇಕು. ಸಹಕಾರಿ ಕ್ಷೇತ್ರವು ಎಲ್ಲಾ ರಂಗದಲ್ಲಿ ಬೆಳೆದಷ್ಟು ಹೆಚ್ಚಿನ ಅಭಿವೃದ್ಧಿ ಆಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಸಹಕಾರಿ ಕ್ಷೇತ್ರ ಪ್ರಬಲವಾಗಿದೆ. ಅದೇ ರೀತಿ ನಮ್ಮ ಭಾಗದಲ್ಲಿಯು ಸಹಕಾರಿ ಕ್ಷೇತ್ರದ ಅಭಿವೃದ್ದಿ ಹೊಂದಿ ಎಲ್ಲಾ ಸ್ತರ ಜನರಿಗೆ ಸೇವೆ ಲಭಿಸಬೇಕು. ವಿದ್ಯಾರ್ಥಿಗಳು ಉನ್ನತಮಟ್ಟದ ಸಾಧನೆ ಮಾಡಬೇಕೆಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಸಂಘವು ಅಭಿವೃದ್ಧಿಯತ್ತ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಂಘದ ಸದಸ್ಯರು ಸಹಸ್ರಕ್ಕೂ ಅಧಿಕವಾಗಲೆಂದು ಆಶಿಸಿ, ನಾನು ಸಹ ಸಂಘದ ಸದಸ್ಯರಾಗಿ ಹೆಚ್ಚಿನ ಸದಸ್ಯರನ್ನು ಸೇರ್ಪಡೆ ಮಾಡಿ ಸಂಘದ ಬೆಳವಣಿಗೆಗೆ ಶ್ರಮಿಸುವುದಾಗಿ ತಿಳಿಸಿದರು.

ಇಂಥ ಕಾರ್ಯಕ್ರಮಗಳ ದಿನದಂದು ವಿಶೇಷವಾಗಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಮೇಳದಂತ ಕಾರ್‍ಯಕ್ರಮಗಳು ನಡೆಯಬೇಕು ಎಂದರು.

ಸಂಘದ ಅಧ್ಯಕ್ಷ ಬಿ. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೌರ್ಹಾದ ಸಹಕಾರ ಸಂಘದ ಸ್ಥಾಪನೆ, ಬೆಳವಣಿಗೆ ಮತ್ತು ಉದ್ದೇಶ ಕುರಿತು ಸವಿವರವಾಗಿ ತಿಳಿಸಿ, ೨೦೨೪-೨೫ನೇ ಸಾಲಿನಲ್ಲಿ ಸಂಘವು ೨,೮೫,೧೬೬ ರು.ಗಳ ನಿವ್ವಳ ಲಾಭ ಗಳಿಸಿದ್ದು, ಕಳೆದ ಐದು ವರ್ಷಗಳಲ್ಲಿ ಸಂಘವು ೬,೪೬,೮೨೦ ರು.ಗಳ ಲಾಭಾಂಶ ಹೊಂದಿದೆ ಎಂದರು. ಸಮಾಜ ಸೇವಕ ಪರಮೇಶ್ವರಪ್ಪ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಸೌಮ್ಯ ಅವರು ಸಂಘದ ವರದಿಯನ್ನು ಓದಿ ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ಒಳಲೆಕ್ಕ ಪರಿಶೋಧಕ ಎಂ. ಆರ್. ಸ್ವಾಮಿ ಸಂಘದ ಕಾನೂನು ಸಲಹೆಗಾರ ಎ. ಎಸ್ ಸಿದ್ದರಾಜು, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಬಲರಾಮ್, ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ನಿರ್ದೇಶಕ ಎಚ್.ಆರ್ ಮಂಜು ಸ್ವಾಗತಿಸಿದರೆ, ಕೆ.ಸಿ. ಮಹೇಂದ್ರ ನಿರು.ಪಿಸಿದರು.