ಸಾರಾಂಶ
ಚನ್ನಪಟ್ಟಣ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡ್ತೀನಿ. ನನಗಿರುವ ಮಾಹಿತಿ ಪ್ರಕಾರ ಬಿಜೆಪಿ-ಜೆಡಿಎಸ್ ಮುಖಂಡರು ನನ್ನ ಹೆಸರನ್ನ ಅಂತಿಮಗೊಳಿಸಲಿದ್ದಾರೆ. ನನಗೆ ಪಕ್ಷದ ವರಿಷ್ಠರ ಮೇಲೆ ವಿಶ್ವಾಸ ಇದೆ. ನಾನು ಈ ಉಪ ಚುನಾವಣೆಯಲ್ಲಿ ಕಣದಲ್ಲಿರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎರಡು ಪಕ್ಷದ ಮುಖಂಡರ ಜತೆ ಚರ್ಚೆ ಮಾಡಿದ್ದೇನೆ. ಬಹುತೇಕ ಇನ್ನೆರಡು ದಿನಗಳಲ್ಲಿ ಹೆಸರು ಘೋಷಣೆ ಆಗಲಿದೆ. ಕುಮಾರಸ್ವಾಮಿ ಅವರೇ ಟಿಕೆಟ್ ಕೊಡೋದು. ಹಿಂದೆಯೂ ಕುಮಾರಸ್ವಾಮಿ ಜೊತೆ ಮಾತನಾಡಿದ್ದೇನೆ. ನಮ್ಮ ರಾಜ್ಯ ನಾಯಕರು, ಕೇಂದ್ರ ನಾಯಕರ ಬಳಿಯೂ ಮಾತನಾಡಿದ್ದೇನೆ. ನನಗೆ ಟಿಕೆಟ್ ಸಿಕ್ಕೇ ಸಿಗುತ್ತೆ. ಈಗಾಗಲೇ ಸಾಕಷ್ಟು ಸರ್ವೆ ಆಗಿದೆ, ಎಲ್ಲಾ ಸರ್ವೆಯಲ್ಲೂ ನನ್ನ ಹೆಸರೇ ಬಂದಿದೆ. ಆದ್ಯತೆ ಮೇಲೆ ಕೊಟ್ಟರು ಸಹ ನನಗೇ ಟಿಕೆಟ್ ಕೊಡಬೇಕು ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನೇ ಅಭ್ಯರ್ಥಿ:ಟಿಕೆಟ್ ಸಿಗದಿದ್ದರೆ ಮುಂದಿನ ನಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದಕ್ಕೆ ಈಗಲೇ ಏನೂ ಪ್ರತಿಕ್ರಿಯೆ ನೀಡಲ್ಲ. ಟಿಕೆಟ್ ಸಿಗದಿದ್ದರೆ ನಮ್ಮ ಕಾರ್ಯಕರ್ತರು ಏನು ಹೇಳುತ್ತಾರೋ ಅದರ ಮೇಲೆ ತೀರ್ಮಾನ ಆಗುತ್ತೆ. ಆದರೆ ನಾನು ದುಡುಕುವ ಅವಶ್ಯಕತೆ ಇಲ್ಲ. ಬಿಜೆಪಿ-ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ನಾನೇ ಆಗ್ತೀನಿ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಎಚ್ಡಿಕೆ ಒಕ್ಕಲಿಗ ನಾಯಕರನ್ನ ತುಳಿಯುತ್ತಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ರೀತಿ ಏನು ಇಲ್ಲ, ಕಳೆದ ೧೫ ವರ್ಷದಿಂದ ಇಲ್ಲಿ ನಾನು ಪಕ್ಷ ಕಟ್ಟಿದ್ದೇನೆ. ನಾನು ಇಲ್ಲಿ ಇರಲೇಬೇಕು, ನಾನಿದ್ದರೆ ಇಲ್ಲಿ ಬಿಜೆಪಿ ಬೆಳೆಯುವ ವಾತಾವರಣ ಬರುತ್ತೆ. ನಾವು ಮೈತ್ರಿ ಆದ ಮೇಲೂ ಒಬ್ಬರ ಯೋಗಕ್ಷೇಮವನ್ನ ಒಬ್ಬರು ನೋಡಿಕೊಳ್ಳಬೇಕು. ಆ ಅರ್ಥದಲ್ಲಿ ನಾನು ಮಾತನಾಡಿದ್ದೇನೆ. ನನ್ನನ್ನ ಏನು ಕುಮಾರಸ್ವಾಮಿ ತುಳಿಯುತ್ತಿಲ್ಲ ಎಂದರು.ಟಿಕೆಟ್ ಸಿಗದಿದ್ದರೂ ಸಿಪಿವೈ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆಗೆ, ಇದರ ಬಗ್ಗೆ ನಾನು ಈಗಲೇ ಏನು ಹೇಳಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಪಕ್ಷದ ಕೆಳಗೆ ಕೆಲಸ ಮಾಡ್ತಿದ್ದೇವೆ. ಪಕ್ಷ ಹೇಳಿದ ರೀತಿ ನಡೆದುಕೊಳ್ತೇವೆ. ಮೈತ್ರಿ ಅಭ್ಯರ್ಥಿಗೆ ಯಾರೇ ಆದರೂ ಸಪೋರ್ಟ್ ಮಾಡಿ ಅಂತ ಪಕ್ಷ ಹೇಳಿದರೆ ಮಾಡಬೇಕಾಗುತ್ತೆ. ನಮ್ಮ ಕಾರ್ಯಕರ್ತರ ಅಭಿಪ್ರಾಯವನ್ನೂ ಕೇಳಬೇಕಾಗುತ್ತೆ ಎಂದು ಹೇಳಿದರು.
ಪಕ್ಷದ ಕಾರ್ಯಕರ್ತನಾಗಿ ನಾನು ಭಕಪಕ್ಷಿ ರೀತಿ ಕಾಯ್ತಿದ್ದೇನೆ. ಪಕ್ಷ ನನ್ನ ಹೆಸರು ಅನೌನ್ಸ್ ಮಾಡಿದ ತಕ್ಷಣ ನಾಮಪತ್ರ ಸಲ್ಲಿಸುತ್ತೇನೆ. ಅಭಿಮಾನಿಗಳು ಸ್ವಾಭಿಮಾನಿ ಸೈನಿಕನ ಸ್ಪರ್ಧೆ ಖಚಿತ ಅಂತ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ತಿದ್ದಾರೆ.ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯಬೇಕು ಅಂದರೆ ನಾನು ಇರಬೇಕು ಎಂದು ತಿಳಿಸಿದರು.
ಈ ಭಾಗದಲ್ಲಿ ನಾನೇ ಸೀನಿಯರ್:ಈ ಭಾಗದಲ್ಲಿ ಬಿಜೆಪಿಗೆ ನಾನೇ ಸೀನಿಯರ್ ಈಗ. ನಾನು ಇರಬೇಕು ಎಂಬುದು ನನ್ನ ಬಯಕೆ, ಪಕ್ಷವೂ ಇದನ್ನೇ ಬಯಸುತ್ತೆ. ಪಕ್ಷ ಅಷ್ಟು ಬೇಗ ನಮ್ಮನ್ನ ಬಿಡಲ್ಲ. ಕುಮಾರಸ್ವಾಮಿ ಕೂಡಾ ಪ್ರಜ್ಞಾವಂತರಿದ್ದಾರೆ. ಕಾದುನೋಡಿ ಎಲ್ಲರನ್ನೂ ಸಮಾಧಾನ ಮಾಡಿ ನನಗೆ ಟಿಕೆಟ್ ಕೊಡ್ತಾರೆ. ಚಿಹ್ನೆ ಯಾವುದಾದರೂ ಇರಲಿ ಮುಂದೆ ನೋಡೋಣ ಎಂದು ಯೇಗೇಶ್ವರ್ ಹೇಳಿದರು.