ಧಾರವಾಡದ ಪ್ರತ್ಯೇಕ ಪಾಲಿಕೆಗಾಗಿ ನಮ್ಮ ಸಾಂಕೇತಿಕ ಧರಣಿ ಆರಂಭಗೊಂಡಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ನಮ್ಮ ನ್ಯಾಯಯುತ ಬೇಡಿಕೆಗೆ ತಕ್ಷಣ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಸಹ ನಾವು ಸಿದ್ಧರಿದ್ದೇವೆ.
ಧಾರವಾಡ:
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಆಡಳಿತದಿಂದ ಧಾರವಾಡ ಮುಕ್ತಗೊಳಿಸಿ, ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾಪಿಸಬೇಕೆಂದು ಆಗ್ರಹಿಸಿ ‘ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ’ಯಿಂದ ಸತ್ಯ ಪ್ರತಿಪಾದನಾ ಹೆಸರಿನ ಹೋರಾಟ ಶುರುವಾಗಿದೆ.ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಎದುರು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದ ಹೋರಾಟಗಾರರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಉಪವಾಸ ಸತ್ಯಾಗ್ರಹಕ್ಕೂ ಸಿದ್ಧ:ಧರಣಿ ಉದ್ದೇಶಿಸಿ ಮಾತನಾಡಿದ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ, ಧಾರವಾಡದ ಪ್ರತ್ಯೇಕ ಪಾಲಿಕೆಗಾಗಿ ನಮ್ಮ ಸಾಂಕೇತಿಕ ಧರಣಿ ಆರಂಭಗೊಂಡಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ನಮ್ಮ ನ್ಯಾಯಯುತ ಬೇಡಿಕೆಗೆ ತಕ್ಷಣ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಸಹ ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.ಅಂಕಿತ ಹಾಕಿ:ಹಿರಿಯ ನಾಯಕ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಧಾರವಾಡದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತ್ಯೇಕ ಪಾಲಿಕೆ ಅಗತ್ಯವಿದೆ. ಈ ಕುರಿತಾದ ಕಡತಕ್ಕೆ ರಾಜ್ಯಪಾಲರು ಯಾವುದೇ ವಿಳಂಬವಿಲ್ಲದೆ ಕೂಡಲೇ ಅಂಕಿತ ಹಾಕಬೇಕು ಎಂದು ಒತ್ತಾಯಿಸಿದರು.ವೇದಿಕೆ ಪ್ರಮುಖರಾದ ಮಹಾದೇವ ಹೊರಟ್ಟಿ ಮಾತನಾಡಿ, ಧಾರವಾಡದ ಜನತೆಗೆ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಬೇಡಿ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ವೈಯಕ್ತಿಕ ಮುತವರ್ಜಿ ವಹಿಸಿ, ರಾಜ್ಯಪಾಲರಿಂದ ಕಡತಕ್ಕೆ ಅಂಕಿತ ಹಾಕಿಸುವ ಮೂಲಕ ಧಾರವಾಡದ ಜನರಿಗೆ ನ್ಯಾಯ ಒದಗಿಸಬೇಕು ಎಂದು ಪರೋಕ್ಷವಾಗಿ ಒತ್ತಾಯಿಸಿದರು.ಹೋರಾಟಗಾರ ಅರವಿಂದ ಏಗನಗೌಡರ ಮಾತನಾಡಿ, ದಶಕಗಳ ಈ ಹೋರಾಟ ಇಂದು ಅಂತಿಮ ಹಂತಕ್ಕೆ ಬರಲು ವಿನಯ ಕುಲಕರ್ಣಿ ಅವರ ಶ್ರಮ ಕಾರಣ. ಆದರೆ, ಇದನ್ನು ತಡೆಯಲು ಯತ್ನಿಸುತ್ತಿರುವ ಬಿಜೆಪಿ ಮುಖಂಡರು ಧಾರವಾಡದ ಜನತೆಗೆ ಮೋಸ ಮಾಡುತ್ತಿದ್ದಾರೆ. ಧಾರವಾಡದ ಬಿಜೆಪಿ ಮಹಾನಗರ ಪಾಲಿಕೆ ಸದಸ್ಯರು ತಮ್ಮನ್ನು ಗೆಲ್ಲಿಸಿದ ಮತದಾರರ ಋಣ ತೀರಿಸಲು, ಪಕ್ಷಾತೀತವಾಗಿ ಈ ಹೋರಾಟದಲ್ಲಿ ಭಾಗವಹಿಸಬೇಕು. ಪ್ರತ್ಯೇಕ ಪಾಲಿಕೆ ರಚನೆಗೆ ಅಡ್ಡಗಾಲು ಹಾಕಬಾರದು ಎಂದರು.ದೀಪಕ ಚಿಂಚೋರಿ ಮಾತನಾಡಿ, ಶಾಸಕ ಅರವಿಂದ ಬೆಲ್ಲದ ಅವರ ದ್ವಂದ್ವ ನಿಲುವನ್ನು ಖಂಡಿಸಿದರು. ಈ ವಿಷಯದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಸತ್ಯಾಗ್ರಹದಲ್ಲಿ ವಕೀಲರ ಸಂಘ:ಗಾಂಧಿ ಶಾಂತಿ ಪ್ರತಿಷ್ಠಾನ, ಅಂಜುಮನ್ ಇಸ್ಲಾಂ ಸಂಸ್ಥೆ, ಆಟೋ ಚಾಲಕರ ಸಂಘ, ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ, ಬಸವ ಶಾಂತಿ ಮಿಷನ್, ಡಿಎಸ್‌ಎಸ್, ಜೆಡಿಯು ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸುವ ಮೂಲಕ ಬೆಂಬಲಿಸಿದರು.ಮುಖಂಡರಾದ ಗುರುರಾಜ ಹುಣಸಿಮರದ, ಮಾಜಿ ಮೇಯರ್ ದಾನಪ್ಪ ಕಬ್ಬೇರ, ಬಶೀರ ಅಹ್ಮದ್ ಜಹಗೀರದಾರ, ನಜೀರ ಅಹ್ಮದ್ ಮನಿಯಾರ,ಮನೋಜ ಪಾಟೀಲ, ವೆಂಕಟೇಶ ಮಾಚಕನೂರ, ಪಾಲಿಕೆ ಸದಸ್ಯ ರಾಜಶೇಖರ ಕಮತಿ, ಗೌರಮ್ಮ ಬಲೋಗಿ, ಬಾಳಣ್ಣ ಶೀಗಿಹಳ್ಳಿ, ಬಸವರಾಜ ಜಾಧವ, ಶ್ರೀಶೈಲಗೌಡ ಕಮತರ ಮತ್ತಿತರರು ಇದ್ದರು.ಬೆಲ್ಲದ ಮನೆಗೆ ಮುತ್ತಿಗೆ...ಶಾಸಕ ಅರವಿಂದ ಬೆಲ್ಲದ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿ ಧಾರವಾಡದಲ್ಲಿ ಅವರ ನಿವಾಸಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ಸಮಿತಿ, ಧಾರವಾಡ ಸ್ವಾಭಿಮಾನಿಗಳ ಹೋರಾಟಗಾರರ ಬಳಗ, ಧಾರವಾಡ ಧ್ವನಿ ಸಂಘಟನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವ ಪ್ರಸ್ತಾವನೆಗೆ ಬೆಲ್ಲದ ವಿರೋಧ ವ್ಯಕ್ತಪಡಿಸಿದ್ದು ಜನವಿರೋಧಿ ನೀತಿ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.