ಸಾರಾಂಶ
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಕಾಯಕ, ದಾಸೋಹ ಮತ್ತು ಅನುಭಾವವೆ ಶರಣರ ತತ್ವಗಳು ಇವು ಅರ್ಥ ಮಾಡಿಕೊಂಡರೆ ನಾವು ಶರಣರಾಗುತ್ತೇವೆ ಎಂದು ವಿಜಯಪುರದ ಷಣ್ಮುಖರೂಢ ಮಠ ಅಥರ್ಗಾದ ಪೂಜ್ಯ ಈಶಪ್ರಸಾದ ಸ್ವಾಮೀಜಿ ತಿಳಿಸಿದರು.ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠ ಹಾರಕೂಡ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿ ಬಸವಕಲ್ಯಾಣ ಇವರ ಸಹಯೋಗದಲ್ಲಿ ನಗರದ ಥೇರ್ ಮೈದಾನದಲ್ಲಿ ಹಮ್ಮಿಕೊಂಡ ದ್ವಿತೀಯ ಕಾಯಕ ಉತ್ಸವದ ಕಾಯಕ ಚಿಂತನ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
12ನೇ ಶತಮಾನದ ಬಸವಾದಿ ಶಿವಶರಣರ ತತ್ವ ಹೇಳಲಿಕ್ಕೆ ಬರುವುದು ಬಹಳ ಸುಲಭ. ಆದರೆ ಆಚರಣೆಯಲ್ಲಿ ತರುವುದು ತುಂಬಾ ಕಷ್ಟಕರ ಕೆಲಸವಾಗಿದೆ. ಮನುಷ್ಯ ಮಾತನಾಡುವುದರ ಜೊತೆಗೆ ಕಾಯಕಕ್ಕೆ ಆದ್ಯತೆ ನೀಡಬೇಕು. ಶರಣರ ಕಾಯಕ ಎಂಬ ಪರಿಕಲ್ಪನೆ ಸುಂದರ ಪರಿಕಲ್ಪನೆಯಾಗಿದೆ ಎಂದರು.ಬಸವ ಮಹಾಮನೆಯ ಸಿದ್ದರಾಮ ಶರಣ ಬೆಲ್ದಾಳ ಮಾತನಾಡಿ, ಬಸವಾದಿ ಶಿವಶರಣರು ಕಾಯಕಕ್ಕೆ ಮೊದಲಾದ್ಯತೆ ನೀಡಿದರು. ಜಗತ್ತಿನ 16 ಧರ್ಮಗಳ ಕುರಿತು ನಾನು ಅಧ್ಯಯನ ಮಾಡಿದ್ದೇನೆ. ಆದರೆ ಕಾಯಕ ತತ್ವ ಸಿಗುವುದು ಕೇವಲ ಬಸವಾದಿ ಶಿವಶರಣರ ತತ್ವದಿಂದ ಮಾತ್ರ, ದೇಶದ ಆರ್ಥಿಕತೆ ನೀತಿ ಸಮತೋಲನೆ ನೀತಿ ಬರಬೇಕಾದರೆ ಸತ್ಯ, ಶುದ್ಧ ಕಾಯಕ ಮಾಡಿ ಆರ್ಥಿಕ ನೀತಿ ಕಾಪಾಡಿದರೆ ದೇಶದ ಆರ್ಥಿಕತೆ ಇನ್ನೂ ಎತ್ತರಕ್ಕೆ ಹೋಗುತ್ತದೆ ಎಂದು ಹೇಳಿದರು.
ಹಿರನಾಗಾಂವನ ಜಯಶಾಂತಲಿಂಗ ಸ್ವಾಮಿ ಸಮ್ಮುಖ ವಹಿಸಿ ಮಾತನಾಡಿ, ಮನುಷ್ಯ ಮತ್ತೊಬ್ಬರ ಮನಸ್ಸು ನೋಯಿಸದೆ ಕಾಯಾ, ವಾಚಾದಿಂದ ಬದುಕಿದರೆ ಅದೇ ದೊಡ್ಡ ಒಂದು ಕಾಯಕವಾಗಿದೆ. ಕಲ್ಯಾಣದ ಪವಿತ್ರ ಭೂಮಿಯಲ್ಲಿ ಪಣತಿ ಒಡೆದ ಸ್ಥಳದಲ್ಲಿ ಪಣತಿ ಕೂಡಿಸಿ ಜ್ಞಾನದ ಗಂಗೆ ಹರಿಸಿ ಭಕ್ತಿ ಜ್ಯೋತಿಯನ್ನು ಬೆಳಗಿಸುವ ಡಾ. ಚೆನ್ನವೀರ ಶಿವಾಚಾರ್ಯರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ. ಚೆನ್ನವೀರ ಶಿವಾಚಾರ್ಯರು, ಗವಿ ಮಠದ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಬೇಲೂರ ಉರಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಡಾ. ಯುವರಾಜ ಬಿರಾದಾರ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ವಿಕಾಸ ಅಕಾಡೆಮಿಯ ಸಂಚಾಲಕ ರೇವಣಸಿದ್ದಪ್ಪಾ ಜಲಾದೆ, ಮುಖ್ಯಗುರು ಸೂರ್ಯಕಾಂತ ಕೆ. ಪಾಟೀಲ, ಯಶಸ್ವಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕಿ ಕಾವೇರಿ ಪಾಟೀಲ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಗಣೇಶ ಅಮೀನಗಡ ತಂಡದವರಿಂದ ಖೌದಿ ಎಂಬ ನಾಟಕ ಪ್ರದರ್ಶಿಸಲಾಯಿತು.