ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪ್ರಸ್ತುತದಲ್ಲಿ ಸ್ಪರ್ಧೆ ಹೆಚ್ಚಾಗಿ ಇರುವುದರಿಂದ ಮಕ್ಕಳಿಗೆ ಒತ್ತಡ ನೀಡದೆ, ಆತ್ಮಸ್ಥೈರ್ಯ ತುಂಬಬೇಕು. ಪ್ರಾಮಾಣಿಕ ಅಧ್ಯಯನದ ಜೊತೆಗೆ ಉತ್ತಮ ಪರಿಶ್ರಮದ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಈ ಬಾರಿ ರಾಜ್ಯದಲ್ಲಿ ಹಾಸನ ಜಿಲ್ಲೆ ಮೊದಲ ಸ್ಥಾನ ಪಡೆಯಲು ಪ್ರಯತ್ನಿಸಿ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅವರು ಹೇಳಿದ್ದಾರೆ.ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಉತ್ತಮೀಕರಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶ್ರಮ, ಬೋಧಕ ಬೋಧಕೇತರರ ಶ್ರಮ, ನಮ್ಮ ಶ್ರಮ ಜನಗಳಿಗೆ ತಲುಪುವುದು ಅಂತಿಮವಾಗಿ ಪರೀಕ್ಷೆಯ ಫಲಿತಾಂಶ ಆಗಿದೆ.
ಈಗಾಗಲೇ ಸಾಕಷ್ಟು ಪರಿಶ್ರಮಪಟ್ಟಿದ್ದೀರಿ, ಆದರೂ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಾಗಿರುವುದರಿಂದ ವಿದ್ಯಾರ್ಥಿಗಳು ಕೊನೆಹಂತದಲ್ಲಿ ತಮ್ಮ ಆಸಕ್ತಿಯನ್ನು ಕಳೆದುಕೊಳ್ಳದಂತೆ ಮಕ್ಕಳಿಗೆ ಮತ್ತಷ್ಟು ಮಾದರಿ ಪರೀಕ್ಷೆಗಳನ್ನು ಮಾಡಿ, ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಯದಂತಹ ಕಷ್ಟವಾಗಿರುವ ವಿಷಯಗಳ ಕಡೆಗೆ ಹೆಚ್ಚು ಗಮನ ಕೊಟ್ಟು, ಪುನರ್ ಮನನ ಮಾಡಿಸಿ ಎಂದು ತಿಳಿಸಿದರು.ಈ ಪರೀಕ್ಷೆಯು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರಿಗೂ ಕೂಡ ಒಂದು ಪರೀಕ್ಷೆಯಾಗಿದೆ, ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಕರನ್ನು ಅನುಸರಿಸುತ್ತಿರುತ್ತಾರೆ ಹಾಗಾಗಿ ಶಿಕ್ಷಕರಾದ ನೀವುಗಳು ತಾರತಮ್ಯ ಮಾಡದೆ ಎಲ್ಲ ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ನೀಡಿ ಎಂದು ತಿಳಿಸಿದರು.
ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳಲ್ಲಿ ಯಾವ ಸ್ಥಳದಲ್ಲಿ ತಮ್ಮ ನೋಂದಣಿ ಸಂಖ್ಯೆಗಳನ್ನು ಬರೆಯಬೇಕು ಎನ್ನುವಂತಹ ಅಂಶಗಳ ಕುರಿತು ಮೊದಲೇ ಪರೀಕ್ಷಾ ಪೂರ್ವ ಮಾದರಿ ಪರೀಕ್ಷೆಗಳು, ವಿಶೇಷ ತರಗತಿಗಳು, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿಸಿ, ಶಿಕ್ಷಕರಾದ ನೀವು ಸ್ವಾರ್ಥ ರಹಿತವಾಗಿ ಪರಿಶ್ರಮ ಹಾಕಿ ಪ್ರಾಮಾಣಿಕತೆಯಿಂದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ೨೦೨೧ರಲ್ಲಿ ಹಾಸನ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಹಾಗೆಯೇ ಈ ಬಾರಿಯು ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತರುವಂತೆ ಆಗಲಿ ಎಂದು ಶುಭಹಾರೈಸಿದರು.ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಪೂರ್ಣಿಮಾ ಬಿ ಆರ್ ಅವರು ಮಾತನಾಡಿ, ಮಕ್ಕಳಿಗೆ ಮೂಲಭೂತವಾಗಿ ಯಾವ ರೀತಿಯಲ್ಲಿ ಓದಬೇಕು ಯಾವ ರೀತಿಯಲ್ಲಿ ಪುನರ್ ಮನನ ಮಾಡಿಕೊಳ್ಳಬೇಕು ಹೇಗೆ ಓದಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ ಅಂಶಗಳ ಕುರಿತು ಮೊದಲು ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಜೊತೆಗೆ ಕಠಿಣವಾದ ವಿಷಯಗಳ ಕುರಿತು ಗಮನ ಹರಿಸಿ ವಿದ್ಯಾರ್ಥಿಗಳಿಗೆ ಕಲಿಸಿ ಹಾಗೂ ಪೋಷಕರ ಸಭೆಯನ್ನು ಮಾಡುವಂತೆ ತಿಳಿಸಿದರು.
ಇತ್ತೀಚೆಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಅನೇಕ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಅಂತಹ ಮಕ್ಕಳನ್ನು ಗುರುತಿಸಿ ಪೋಷಕರಿಗೆ ತಿಳಿಹೇಳಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ಪ್ರಯತ್ನ ಮಾಡಬೇಕು ಜೊತೆಗೆ ಆ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು, ಪರೀಕ್ಷೆಗೆ ಹೆದರುವಂತಹ ಮಕ್ಕಳಿಗೆ ಕೌನ್ಸಿಲಿಂಗ್ ಮಾಡಿ ಆತ್ಮಸ್ಥೈರ್ಯ ತುಂಬಬೇಕು ಎಂದರು.ಪ್ರತಿಯೊಂದು ಶಾಲೆಯಲ್ಲಿಯೂ ಶಾಲೆಗೆ ಬರುವಂತಹ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು ಹಾಗೂ ಪ್ರತಿನಿತ್ಯ ವಿದ್ಯಾರ್ಥಿಗಳು ಶಾಲೆಯಲ್ಲಿ ಒಂದು ಕನ್ನಡ ದಿನಪತ್ರಿಕೆ ಹಾಗೂ ಒಂದು ಆಂಗ್ಲ ದಿನಪತ್ರಿಕೆಯನ್ನು ಓದುವ ಹವ್ಯಾಸವನ್ನು ಹೇಳಿಕೊಡಬೇಕು ಎಂದು ತಿಳಿಸಿದರು.
ಇತ್ತೀಚೆಗೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗೆ ಸೇರುವಂತಹ ಮಕ್ಕಳಿಗೆ ಕನಿಷ್ಠ ಕನ್ನಡವನ್ನು ಕೂಡ ಓದಲು ಬರೆಯಲು ಆಗದೆ ಇರುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪಾತ್ರವೂ ಬಹಳ ಮುಖ್ಯವಾಗಿದೆ. ಹಾಗಾಗಿ ಮುಂದಿನ ದಿನದಲ್ಲಿ ಪ್ರಾಥಮಿಕ ಶಿಕ್ಷಕರ ಸಮ್ಮೇಳನವನ್ನು ಸರ್ಕಾರಿ ಶಾಲಾ ಮಕ್ಕಳಿಗಾಗಿಯೇ ಮಾಡೋಣ ಎಂದರು.ಕಾರ್ಯಕ್ರಮದಲ್ಲಿ ಬೆಂಗಳೂರು ಡಯಟ್‌ನ ಹಿರಿಯ ಉಪನ್ಯಾಸಕರಾದ ಎಚ್.ಬಿ ಚಂದ್ರಶೇಖರ್, ಡಿಡಿಪಿಐ ಚಂದ್ರಶೇಖರ್, ಹಾಸನ ಡಯಟ್‌ನ ಉಪ ನಿರ್ದೇಶಕರಾದ ರಂಗನಾಥ ಸ್ವಾಮಿ ಹಾಗೂ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.