ನಾಡಗೀತೆ ವೈಶಿಷ್ಟತೆ ಅರಿತುಕೊಳ್ಳಲು ಪ್ರಯತ್ನಿಸಿ

| Published : Nov 15 2024, 12:36 AM IST

ಸಾರಾಂಶ

ವಿದ್ಯಾರ್ಥಿಗಳು ದೈನಿಂದಿನ ಪ್ರಾರ್ಥನೆ ಹಾಡುವಾಗ ನಾಡಗೀತೆಯ ವೈಶಿಷ್ಟತೆ ಅರಿತುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ರವಿ ಎಚ್. ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ವಿದ್ಯಾರ್ಥಿಗಳು ದೈನಿಂದಿನ ಪ್ರಾರ್ಥನೆ ಹಾಡುವಾಗ ನಾಡಗೀತೆಯ ವೈಶಿಷ್ಟತೆ ಅರಿತುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ರವಿ ಎಚ್. ಸಲಹೆ ನೀಡಿದರು.

ಪಟ್ಟಣದ ಕುಂಬಾರಗುಂಡಿಯಲ್ಲಿನ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಪ್ರೌಢಶಾಲೆಯ ಸಾಹಿತ್ಯ ಸಂಘ ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಭಾಷಾ ಸಂಘಗಳ ಸಹಯೋಗದಲ್ಲಿ ನಡೆದ 69 ನೇ ಕನ್ನಡ ರಾಜ್ಯೋತ್ಸವ ಮತ್ತು ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡ ನಾಡಿಗೆ ತನ್ನದೇ ಆದ ಅಗಾಧ ಇತಿಹಾಸ ಮತ್ತು ಸಾಹಿತ್ಯಿಕ ಪರಂಪರೆ ಇದೆ. ಕನ್ನಡ ರಾಜ್ಯೋತ್ಸವವು ನಾಡಿನ ಹಿರಿಮೆಯ ಪ್ರತೀಕವಾಗಿದ್ದು, ರಾಜ್ಯೋತ್ಸವದ ಸಂದರ್ಭದಲ್ಲಿ ನಾಡಿನಾದ್ಯಂತ ವಿವಿಧ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ನವೆಂಬರ್ ಮಾಸದಲ್ಲಿ ಪ್ರತಿನಿತ್ಯ ಕನ್ನಡ ನಾಡು ನುಡಿಯ ವೈಭವವನ್ನು ವಿವಿಧ ಶೀರ್ಷಿಕೆಗಳೊಂದಿಗೆ ಮಕ್ಕಳಿಗೆ, ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿವೆ ಎಂದರು.

ಕನ್ನಡ ನಾಡು-ನುಡಿ ಕುರಿತು ಸ್ವರಚಿತ ಕವನ ವಾಚನ, ಪ್ರಬಂಧ ಬರವಣಿಗೆ, ಭಾಷಣ ಸ್ಪರ್ಧೆ, ಸಾಹಿತ್ಯಅಭ್ಯಾಸ ಮತ್ತು ವಿಮರ್ಶೆಯಂತಹ ವಿವಿಧ ಕಾರ್ಯಕ್ರಮಗಳಲ್ಲಿ ನಿರಂತರ ತೊಡಗಿಸಿಕೊಳ್ಳಬೇಕು. ಇದರೊಂದಿಗೆ ಶಾಲಾ-ಕಾಲೇಜುಗಳಲ್ಲಿ ಪ್ರತಿನಿತ್ಯ ಹಾಡುವ ನಾಡಗೀತೆಯಲ್ಲಿ ಅಡಗಿದ ಕನ್ನಡ ನಾಡಿನ ವಿವಿಧ ಕ್ಷೇತ್ರಗಳ ವಿಶೇಷತೆ, ಐಕ್ಯತೆ ಮತ್ತು ವೈಶಿಷ್ಟ್ಯತೆಯ ಸಾರವನ್ನು ಸವಿವರವಾಗಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು. ಮಕ್ಕಳು ನಾಡಗೀತೆಯನ್ನು ಸ್ವಷ್ಟವಾಗಿ ಉಚ್ಚರಿಸುವುದನ್ನು ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು. ರಾಜ್ಯೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಪ್ಪಿಲ್ಲದೆ ಸರಾಗವಾಗಿ ಸ್ಪಷ್ಟತೆಯೊಂದಿಗೆ ನಾಡಗೀತೆಯನ್ನು ಹಾಡಲು ಕಲಿತಲ್ಲಿ ಕನ್ನಡ ನಾಡಿಗೆ ದೊಡ್ಡ ಗೌರವ ನೀಡಿದಂತಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಬಸವರಾಜ ಎಲೆಗಾರ್ ಮಾತನಾಡಿ, ಕರ್ನಾಟಕದ ನೆಲ, ಜಲ, ಜನ, ಸಂಸ್ಕೃತಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟು ರೀತಿಯಲ್ಲಿ ವೈಶಷ್ಟ್ಯತೆಯಿಂದ ಕೂಡಿದೆ. ಕನ್ನಡ ನಾಡಿನಲ್ಲಿ ಅನೇಕ ಕವಿಪುಂಗವರು, ಸಾಹಿತಿಗಳು, ಲೇಖಕರು ಕಾಲದಿಂದ ಕಾಲಕ್ಕೆ ನೀಡಿದ ಸಾಹಿತ್ಯಿಕ ಕೊಡುಗೆ ಅಪಾರ. ಅವರ ಸಾಧನೆಯನ್ನು ಪ್ರೇರಣೆಯನ್ನಾಗಿಸಿಕೊಂಡು ಪ್ರಸ್ತುತ ಪೀಳಿಗೆ ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ ಎಂದರು.

ಕನ್ನಡ ನಾಡು-ನುಡಿಯ ಇತಿಹಾಸ ಕುರಿತು ಆಯೋಜಿಸಿದ್ದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು, ಪ್ರಶಿಕ್ಷಣಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಶಿಕ್ಷಣಾರ್ಥಿ ರಂಜಿತಾ ಮತ್ತು ಸಂಗಡಿಗರು ಪ್ರಾರ್ಥಿಸಿ, ಸುಮ ಸ್ವಾಗತಿಸಿ, ನಾಗಶ್ರೀ ನಿರೂಪಿಸಿ, ನಾಗರಾಜ ವಂದಿಸಿದರು.