ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಜನ ವಿದ್ಯಾರ್ಥಿಗಳಿಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಪೂರ್ವದಲ್ಲೇ ಅಡಿಗಲ್ಲು ಹಾಕಿದ್ದ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಮಹಾತ್ಮ ಗಾಂಧಿ ಸ್ಮಾರಕ ವಸತಿಯುತ ಶಾಲೆಯ ವಿದ್ಯಾರ್ಥಿ ನಿಲಯಕ್ಕೆ ಹೆಚ್ಚು ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.ನಗರದ ಪಿಜೆ ಬಡಾವಣೆಯ ಅಕ್ಕ ಮಹಾದೇವಿ ರಸ್ತೆಯ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಮಹಾತ್ಮ ಗಾಂಧಿ ಸ್ಮಾರಕ ವಸತಿಯುತ ಶಾಲಾವರಣದಲ್ಲಿ ಸೋಮವಾರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕೊಡುಗೆಯಾಗಿರುವ, ಗಾಂಧೀಜಿ ಅಡಿಗಲ್ಲು ಹಾಕಿದ್ದಂತಹ ದೊಡ್ಡ ಹಿನ್ನೆಲೆ, ಇತಿಹಾಸವಿರುವ ಶಾಲೆಗೆ 92 ಲಕ್ಷ ರು. ಮೊದಲ ಅನುದಾನ ನೀಡಿದ್ದೇನೆ ಎಂದರು.
ಅನುದಾನಕ್ಕೆ ಒತ್ತಾಯಿಸೋಣ:ವಿದ್ಯಾರ್ಥಿ ನಿಲಯ ಸ್ಥಾಪಿಸಲು ಅಗತ್ಯ ಅನುದಾನಕ್ಕಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪಗೆ ಮನವಿ ಮಾಡಿದ್ದೇನೆ. ಮಾರ್ಚ್ ನಂತರ ನಾನು, ನೀವೆಲ್ಲರೂ ಆಡಳಿತ ಮಂಡಳಿಯವರೂ ಸೇರಿ ಡಾ.ಮಹಾದೇವಪ್ಪಗೆ ಭೇಟಿಯಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸೋಣ. ಈ ಶಾಲೆಯ ಸಮಗ್ರ ಅಭಿವೃದ್ಧಿಗೆ ತಮ್ಮ ಸಲಹೆ, ಸಹಕಾರ ಇದ್ದೇ ಇರುತ್ತದೆ ಎಂದು ಭರವಸೆ ನೀಡಿದರು.
ಶಾಲೆ ಕಟ್ಟಲು ಜಾಗ ಕೊಟ್ಟರೆ ಬರುವೆ:ಸಂಸ್ಥೆಯ ಅಧ್ಯಕ್ಷ ಎಲ್.ಎಂ.ಹನುಮಂತಪ್ಪ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ದಾವಣಗೆರೆಗೆ ಆಹ್ವಾನಿಸಲು ಹೋಗಿದ್ದ ಊರಿನ ಹಿರಿಯರಿಗೆ ಗಾಂಧೀಜಿ ಷರತ್ತು ವಿಧಿಸಿದ್ದರು. ಹರಿಜನ ಮಕ್ಕಳ ಓದಿಗೆ ಅನುಕೂಲವಾಗುವಂತೆ ಶಾಲೆ ಕಟ್ಟಲು ಜಾಗ ನೀಡಿದರೆ ಬರುವುದಾಗಿ ಹೇಳಿದ್ದರು. ಅದರಂತೆ ಗಾಂಧೀಜಿ 1934ರಲ್ಲಿ ಇಲ್ಲಿಗೆ ಬಂದ ವೇಳೆ ಪೌರಾಯುಕ್ತರ ಸ್ಥಳಕ್ಕೆ ಕರೆಸಿ ಚೌಕಾಕಾರದಲ್ಲಿ ಗಾಂಧೀಜಿ ನಡೆದಷ್ಟು ಜಾಗವನ್ನು ಹರಿಜನ ಮಕ್ಕಳಿಗೆ ಶಾಲೆಯ ನಿರ್ಮಾಣಕ್ಕೆಂದು ಅಂದೇ ಗಾಂಧೀಜಿ ಭೂಮಿಪೂಜೆ ನೆರವೇರಿಸಿದ್ದರು ಎಂದರು.
ಅನುದಾನ ಬಿಡುಗಡೆಗೆ ಒತ್ತಾಯಿಸುವೆವು:ಸಂಸ್ಥೆಯ , ಕಾರ್ಯದರ್ಶಿ ಬಿ.ಎಚ್.ವೀರಭದ್ರಪ್ಪ ಮಾತನಾಡಿ, ಮಹಾತ್ಮ ಗಾಂಧಿ ವಸತಿಯುತ ಶಾಲೆಯಲ್ಲಿ 5 ಕೊಠಡಿ ಹಾಗೂ ಒಂದು ಅಡುಗೆ ಕೊಠಡಿ ನಿರ್ಮಿಸಲು 92 ಲಕ್ಷ ರು. ಅನುದಾನವನ್ನು ಶಾಸಕರ ಅನುದಾನದಲ್ಲಿ ನೀಡಲಾಗಿದೆ. ವಿದ್ಯಾರ್ಥಿ ನಿಲಯದ ನಿರ್ಮಿಸಲು 3 ಕೋಟಿ ರು.ಗಳ ಅಗತ್ಯವಿದೆ. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ನೇತೃತ್ವದಲ್ಲಿ ಭೇಟಿ ಮಾಡಿ, ಅಗತ್ಯ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಲಾಗುವುದು. ಆದಷ್ಟು ಬೇಗ ವಿದ್ಯಾರ್ಥಿ ನಿಲಯ ನಿರ್ಮಾಣವಾದರೆ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಪಾಲಿಕೆ ಆಯುಕ್ತೆ ಜಿ.ರೇಣುಕಾ, ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ, ಎ.ನಾಗರಾಜ, ಸಂಸ್ಥೆಯ ಎಲ್.ಎಂ.ಎಚ್.ಸಾಗರ್, ಹಿರಿಯ ಪತ್ರಕರ್ತ ಕೆ.ಚಂದ್ರಣ್ಣ ಪೇಪರ್, ಗಾಂಧಿ ನಗರ ಬಿ.ಎಂ.ಈಶ್ವರ, ರಾಕೇಶ, ನಾಗರಾಜ, ಕಾಂಗ್ರೆಸ್ ಮುಖಂಡ ಡೋಲಿ ಚಂದ್ರು ಇತರರಿದ್ದರು.ಶಿಕ್ಷಕರು, ಸಿಬ್ಬಂದಿ ನೇಮಕಕ್ಕೆ ಸಿಎಂ ಕ್ರಮ
ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಕಾಲೇಜುಗಳು ಸ್ಥಾಪನೆಯಾಗಬೇಕಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಶಾಲಾ-ಕಾಲೇಜುಗಳಲ್ಲೂ ಶೇ.80ರಷ್ಟು ಸಿಬ್ಬಂದಿ ಕೊರತೆ ಇದೆ. ಶಿಕ್ಷಕರು, ಸಿಬ್ಬಂದಿ, ಕ್ಲರ್ಕ್ ಕೂಡ ಇಲ್ಲ. ಈ ಹಿನ್ನೆಲೆಯಲ್ಲಿ ಅಗತ್ಯ ಶಿಕ್ಷಕರು, ಸಿಬ್ಬಂದಿ ನೇಮಕದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ಕ್ರಮ ಕೈಗೊಳ್ಳಲಿದ್ದಾರೆ. ಸಚಿವ ಸಂಪುಟದಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ರಾಜ್ಯವ್ಯಾಪಿ ಶಿಕ್ಷಕರು, ಸಿಬ್ಬಂದಿ ನೇಮಕವಾದಾಗ ಮಹಾತ್ಮ ಗಾಂಧಿ ಶಾಲೆಗೂ ಶಿಕ್ಷಕರು, ಸಿಬ್ಬಂದಿ ನೇಮಕದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.