ಶಿರಸಿ ಟಿಎಸ್‌ಎಸ್‌ಗೆ ₹20 ಕೋಟಿ ಲಾಭ

| Published : Sep 19 2025, 01:01 AM IST

ಸಾರಾಂಶ

ಅಡಕೆ ಬೆಳೆಗಾರರ ಸಂಸ್ಥೆಯಾದ ಶಿರಸಿಯ ತೋಟಗಾರ್ಸ್ ಕೋ ಆಪರೇಟಿವ್‌ ಸೇಲ್‌ ಸೊಸೈಟಿ (ಟಿಎಸ್‌ಎಸ್‌) ಪ್ರಸಕ್ತ ಸಾಲಿನಲ್ಲಿ ₹20,00,95,592.62 ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟ ತಿಳಿಸಿದರು.

ಶಿರಸಿ: ಅಡಕೆ ಬೆಳೆಗಾರರ ಸಂಸ್ಥೆಯಾದ ತೋಟಗಾರ್ಸ್ ಕೋ ಆಪರೇಟಿವ್‌ ಸೇಲ್‌ ಸೊಸೈಟಿ (ಟಿಎಸ್‌ಎಸ್‌) ಪ್ರಸಕ್ತ ಸಾಲಿನಲ್ಲಿ ₹20,00,95,592.62 ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಈ ಹಿಂದಿನ ಆಡಳಿತ ಮಂಡಳಿ, ಕೆಲವು ಸಿಬ್ಬಂದಿಯ ದೋಷದಿಂದಾಗಿ ಸಾಕಷ್ಟು ಹಣದ ಅವ್ಯವಹಾರ, ದುರುಪಯೋಗವಾಗಿತ್ತು. ಮೂವರಿಗೆ ₹113 ಕೋಟಿ ಬೇಕಾಯ್ದೆಯಾಗಿ ಸಾಲ ನೀಡಿದ್ದನ್ನೂ ಒಳಗೊಂಡಂತೆ ₹123 ಕೋಟಿ ಹಾನಿಯಾಗಿತ್ತು. ಆನಂತರ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಕಾರಣ ಕಳೆದ ವರ್ಷ ಸಂಸ್ಥೆ ₹8 ಕೋಟಿ ಲಾಭ ಗಳಿಸಿತ್ತು. ವಿವಿಧ ನಿಧಿಗಳನ್ನು ತೆಗೆದ ಬಳಿಕ ₹8 ಲಕ್ಷ ನಿವ್ವಳ ಲಾಭ ಗಳಿಸಿದೆ. ಈ ವರ್ಷ ಸಂಸ್ಥೆ ಇನ್ನಷ್ಟು ಪ್ರಗತಿ ಸಾಧಿಸಿದೆ ಎಂದರು.

ಸಂಸ್ಥೆಯಲ್ಲಿ ₹749 ಕೋಟಿ ದುಡಿಯುವ ಬಂಡವಾಳವಿದ್ದು, ಕಳೆದ ಸಾಲಿನಲ್ಲಿ ₹1450 ಕೋಟಿ ವ್ಯವಹಾರ ನಡೆಸಿದೆ. ₹100 ಕೋಟಿಗಳಷ್ಟು ಸದಸ್ಯರ ಹಣ ಠೇವಣಿ ಇಟ್ಟಿದ್ದೇವೆ. ಬೆಳೆ ಸಾಲ ಸೇರಿದಂತೆ ವಿವಿಧ ಸಾಲಗಳನ್ನು ಸದಸ್ಯರಿಗೆ ನೀಡುವ ಸಲುವಾಗಿ ₹254 ಕೋಟಿ ಸಾಲ ಪಡೆದಿದ್ದೇವೆ. ಸಂಸ್ಥೆಯಲ್ಲಿ ಸದಸ್ಯರು 2.56 ಸಾವಿರ ಕ್ವಿಂಟಲ್ ಅಡಕೆಯ ದಾಖಲೆಯ ವಿಕ್ರಿ ಆಗಿದೆ. ಮಾರುಕಟ್ಟೆಯಲ್ಲಿ ದರ ಸ್ಥಿರತೆಗಾಗಿ ಟಿಎಸ್‌ಎಸ್ ಸಂಸ್ಥೆಯೇ ಈ ವರ್ಷ ₹97 ಸಾವಿರ ಕ್ವಿಂಟಲ್‌ ಅಡಕೆ ಸ್ವಂತ ಖರೀದಿಸಿದೆ. ಸಂಘ ಕಳೆದ ಒಂದು ವರ್ಷದ ಅವಧಿಯಲ್ಲಿ ಒಟ್ಟಾರೆಯಾಗಿ ₹55 ಕೋಟಿ ತೆರಿಗೆ, ₹4.98 ಕೋಟಿ ಸೆಸ್ ಭರಣ ಮಾಡಿದೆ ಎಂದರು.

ಟಿಎಸ್‌ಎಸ್‌ ಸರ್ವ ಸದಸ್ಯರ 2024-25ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಸಂಘದ ಪ್ರಧಾನ ಕಚೇರಿಯಲ್ಲಿ ಸೆ. 23ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಮುಂಡಗೋಡಿನಲ್ಲಿ ಹಸಿ ಅಡಕೆ ಖರೀದಿ ಕೇಂದ್ರವನ್ನು ಟಿಎಸ್‌ಎಸ್ ಶೀಘ್ರದಲ್ಲಿ ಆರಂಭಿಸಲಿದೆ. ಸಿಹಿ ಅಡಕೆ ಪುಡಿಯನ್ನು ಹೊರ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಳುಹಿಸಲು ನಿರ್ಧರಿಸಿದ್ದೇವೆ ಎಂದರು.

ಉಪಾಧ್ಯಕ್ಷ ಮಹಾಬಲೇಶ್ವರ ಭಟ್ಟ, ನಿರ್ದೇಶಕರಾದ ರವೀಂದ್ರ ಹೆಗಡೆ, ಕೃಷ್ಣ ಹೆಗಡೆ, ನಿರ್ಮಲಾ ಭಟ್ಟ ಅಗಸಾಲ, ಅಶೋಕ ಹೆಗಡೆ, ಪುರುಷೋತ್ತಮ ಹೆಗಡೆ, ವ್ಯವಸ್ಥಾಪಕ ಗಿರೀಶ ಹೆಗಡೆ ಮತ್ತಿತರರು ಇದ್ದರು.

6 ಪ್ರಕರಣ: ಸಹಕಾರ ಕಾಯ್ದೆ 69 ಮತ್ತು 70ರ ಅಡಿಯಲ್ಲಿ ಸಾಲ ವಸೂಲಾತಿಗೆ ಕ್ರಮ ವಹಿಸಲಾಗಿದ್ದು, 6 ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದೇವೆ. 1ನೇ ಪ್ರಕರಣದಲ್ಲಿ ಸಿಐಡಿ ಬಿ ರಿಪೋರ್ಟ್‌ ಹಾಕಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅದನ್ನು ಪ್ರಶ್ನಿಸಿದ್ದೇವೆ. ಹಿಂದಿನ ಸಾಲ ವಸೂಲಿ ಜತೆ ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ಮಾಡಿ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ನಗುಮೊಗದ ಸೇವೆ ನೀಡಲು ಸಂಸ್ಥೆ ಬದ್ಧವಾಗಿದೆ ಎಂದು ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು.ಮಂಜೂರಾಗದ ಸಾಲ: ರೈತರಿಗೆ ಬೆಳೆ ಸಾಲ ಭರಣ ಮಾಡಲು ಅನುಕೂಲವಾಗಲು ಕೆಡಿಸಿಸಿ ಬ್ಯಾಂಕ್‌ಗೆ ₹200 ಕೋಟಿ ಸಾಲಕ್ಕಾಗಿ ಸಂಸ್ಥೆಯಿಂದ ಮನವಿ ಮಾಡಿದ್ದೆವು. ಆದರೆ, ಕೆಡಿಸಿಸಿ ಒಂದು ರು. ಸಹ ಸಾಲ ಮಂಜೂರು ಮಾಡಿಲ್ಲ. ಸಂಸ್ಥೆಯದೇ ₹85 ಕೋಟಿ ಕೆಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇದ್ದರೂ ನಮಗೆ ಸಾಲ ಮಂಜೂರು ಮಾಡಿಲ್ಲ. ಆದರೆ, ರೈತರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸಂಸ್ಥೆ ತನ್ನ ಸ್ವಂತ ಬಂಡವಾಳದಿಂದ ₹92 ಕೋಟಿಯನ್ನು ರೈತರ ಸಾಲಕ್ಕೆ ಬಳಕೆ ಮಾಡಿದೆ. ಕೇವಲ ಒಂದು ಕ್ವಿಂಟಲ್ ಅಡಕೆ ಹಾಕುವವರಿಗೂ ಒಂದರಿಂದ ಎರಡು ಲಕ್ಷ ರು. ವರೆಗೆ ಸಾಲ ನೀಡಿದ್ದೇವೆ ಎಂದು ಮಾಧ್ಯಮದವರ ಪ್ರಶ್ನೆಗೆ ಸಂಸ್ಥೆಯ ಅಧ್ಯಕ್ಷ ಗೋಲಾಕೃಷ್ಣ ವೈದ್ಯ ಸ್ಪಷ್ಟನೆ ನೀಡಿದರು.