ಸಾರಾಂಶ
ಹಾವೇರಿ : ದೇವರ ದರ್ಶನ ಮುಗಿಸಿ ಊರಿಗೆ ಹಿಂತಿರುಗುತ್ತಿದ್ದಾಗ ರಸ್ತೆ ಬದಿ ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲರ್(ಟಿಟಿ) ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂದೇ ಗ್ರಾಮದ 13 ಮಂದಿ ಮೃತಪಟ್ಟು, ನಾಲ್ವರು ತೀವ್ರ ಗಾಯಗೊಂಡ ಘಟನೆ ಶುಕ್ರವಾರ ಮುಂಜಾನೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ, ಹನುಮಂತಾಪುರ ಗ್ರಾಮದವರಾದ ಟಿಟಿ ಚಾಲಕ ಆದರ್ಶ (25), ಅರುಣಕುಮಾರ್ (32), ನಾಗೇಶ್ವರರಾವ್ (50), ಭಾಗ್ಯಾಬಾಯಿ (45), ವಿಶಾಲಾಕ್ಷಿ (49), ಸುಭದ್ರಾಬಾಯಿ (60), ಅಂಜಲಿ (29), ಮಂಜುಳಾಬಾಯಿ (60), ಮಾನಸಾ (20), ರೂಪಾಬಾಯಿ (35), ಮಂಜುಳಾ (54), ಆರ್ಯ (5) ಮತ್ತು ನಂದನ್ (3) ಮೃತಪಟ್ಟವರು. ಈ ಪೈಕಿ ಪರಶುರಾಮ ಸಿದ್ದಪ್ಪ (48) ಹಾಗೂ ಗೌತಮ್ (12) ಅರ್ಪಿತಾ (14) ಹಾಗೂ ಅನ್ನಪೂರ್ಣ (54) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಲಕ ಆದರ್ಶ ಇತ್ತೀಚೆಗೆ ಹೊಸ ಟಿಟಿ ಖರೀದಿಸಿದ್ದು, ಅದರಲ್ಲಿ ಸಂಬಂಧಿಕರು, ಅಕ್ಕಪಕ್ಕದ ಮನೆಯವರೆಲ್ಲರು ಸೇರಿ ಜೂ.24ರಂದು ದೇವರ ದರ್ಶನಕ್ಕೆಂದು ತೆರಳಿದ್ದರು. ಮಹಾರಾಷ್ಟ್ರದ ತುಳಜಾಭವಾನಿ, ಚಿಂಚೋಳಿ ಮಾಯಮ್ಮ, ಸವದತ್ತಿ ಯಲ್ಲಮ್ಮ ಮುಂತಾದ ದೇವಸ್ಥಾನಗಳಿಗೆ ತೆರಳಿ ಊರಿಗೆ ವಾಪಸಾಗುತ್ತಿದ್ದಾಗ ಗುಂಡೇನಹಳ್ಳಿ ಬಳಿ ನಸುಕಿನ ವೇಳೆ ರಸ್ತೆ ಪಕ್ಕ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಡಿಕ್ಕಿ ರಭಸಕ್ಕೆ ಟಿಟಿಯ ಅರ್ಧ ಭಾಗ ಲಾರಿಯ ಹಿಂಭಾಗಕ್ಕೆ ಸಿಲುಕಿ ನಜ್ಜುಗುಜ್ಜಾಗಿದೆ. ಬಹುತೇಕರು ವಾಹನದಲ್ಲೇ ಅಪ್ಪಚ್ಚಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿ ಸುಮಾರು ಒಂದು ತಾಸು ಪ್ರಯಾಸಪಟ್ಟು ಮೃತದೇಹವನ್ನು ವಾಹನದಿಂದ ಹೊರತೆಗೆದಿದ್ದಾರೆ. ಗಾಯಗೊಂಡವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಅರ್ಪಿತಾ ಅಕ್ಷರಶಃ ಅನಾಥಳಾಗಿ ಕಣ್ಣೀರಿಟ್ಟಳು. ಕಣ್ಣೆದುರೇ ಅಪ್ಪ, ಅಮ್ಮ ಹಾಗೂ ಟಿಟಿ ವಾಹನದ ಚಾಲಕನಾಗಿದ್ದ ಅಣ್ಣ ಮೂವರನ್ನೂ ಕಳೆದುಕೊಂಡು ಅತ್ತು ಕಣ್ಣೀರಾಗಿದ್ದಳು. ಒಂದೇ ಕಡೆ ಅಂತ್ಯಸಂಸ್ಕಾರ
ಅಪಘಾತದಲ್ಲಿ ಮೃತಪಟ್ಟ ಎಮ್ಮೆಹಟ್ಟಿ ಗ್ರಾಮದವರ ಮೃತದೇಹಗಳನ್ನು ಸಾರ್ವಜನಿಕರ ವೀಕ್ಷಣೆಗೆಂದು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಕೆಲಕಾಲ ಇಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಸಾಗರೋಪಾದಿಯಲ್ಲಿ ಜನ ಆಗಮಿಸಿದ ಹಿನ್ನೆಲೆಯಲ್ಲಿ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.