ಸಾರಾಂಶ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ-ತ್ಯಾಜ್ಯ ಸಂಗ್ರಹಣೆ ಮಾಡುವ ಎಂಎಸ್‌ಜಿಪಿ ಘಟಕವು ಸ್ಥಾಪನೆಯಾಗಿರುವುದರಿಂದ ತಾಲೂಕಿನ ಕುಡಿಯುವ ನೀರಿನ ಮೂಲವಾಗಿರುವ ಹಲವು ಕೊಳವೆ ಬಾವಿಗಳು ಕಲುಷಿತವಾಗಿವೆ ಎಂದು ಶಾಸಕ ಧೀರಜ್ ಮುನಿರಾಜ್ ಶುಕ್ರವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿದರು.
ಘಟಕದ ಅವೈಜ್ಞಾನಿಕ ನಿರ್ವಹಣೆ ಪರಿಣಾಮ 30ಕ್ಕೂ ಹೆಚ್ಚು ಜನರಿಗೆ ಕಿಡ್ನಿ ವೈಫಲ್ಯವಾಗಿರುವುದು ಕಂಡು ಬಂದಿದೆ ಎಂಬುದನ್ನು ಸರ್ಕಾರದ ಗಮನಕ್ಕೆ ತರುವದು ಮತ್ತು ಖಾಸಗಿ ತ್ಯಾಜ್ಯ ಕಸವನ್ನು ಸಹ ಈ ಘಟಕಗಳು ಸಂಗ್ರಹಿಸಿಕೊಳ್ಳುತ್ತಿರುವುದಿಂದ ನೀರು ಕಲುಷಿತಗೊಂಡು ಜನರ ಆರೋಗ್ಯ ಹದಗೆಡುತ್ತಿರುವುದರ ಕುರಿತು ಉಪಮುಖ್ಯಮಂತ್ರಿಗಳ ಗಮನ ಸೆಳೆದರು.ಉತ್ತರ ಒದಗಿಸಿದ ಡಿ.ಕೆ.ಶಿವಕುಮಾರ್, ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿಲ್ಲ. ಎಂಎಸ್‌ಜಿಪಿ ಇನ್‌ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ ಘಟಕವು ತ್ಯಾಜ್ಯ ಸಂಸ್ಕರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಅನುಮತಿ ಪಡೆದಿರುತ್ತದೆ. ಸದರಿ ಘಟಕದಲ್ಲಿ ಲಿಚೇಟ್ ಸಂಸ್ಕರಣಾ ಘಟಕವನ್ನು ಸಹ ಸ್ಥಾಪಿಸಿ, ಘಟಕದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ನೀರನ್ನು ಸಂಸ್ಕರಿಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರ ಆರೋಗ್ಯ ಹದಗೆಟ್ಟಿರುವ ಯಾವುದೇ ಪ್ರಕರಣ ಕಂಡು ಬಂದಿಲ್ಲ ಎಂದಿದ್ದಾರೆ.
ರಾಗಿ ಖರೀದಿ ಕೇಂದ್ರದಲ್ಲಿ ಮೂಲಸೌಕರ್ಯಕ್ಕೆ ಒತ್ತು:ಚುಕ್ಕಿ ಗುರುತಿಲ್ಲದ ಪ್ರಶ್ನೆಯಡಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರಿಗೆ ಕೇಳಿದ್ದ ಪ್ರಶ್ನೆಗೆ ಸಚಿವ ಕೆ.ಎಚ್.ಮುನಿಯಪ್ಪ ಉತ್ತರ ನೀಡಿದ್ದಾರೆ. ದೊಡ್ಡಬಳ್ಳಾಪುರ ರಾಗಿ ಖರೀದಿ ಕೇಂದ್ರದಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸುತ್ತಿಲ್ಲದಿರುವುದರ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳೇನು ಎಂದು ಧೀರಜ್ ಮುನಿರಾಜ್ ಕೇಳಿರುವ ಪ್ರಶ್ನೆಗೆ, 2022-23ರ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಜ.17, 2023ರಂದು ಜಿಲ್ಲಾ ಕಚೇರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಸದರಿ ಅನುದಾನದಲ್ಲಿ ದೊಡ್ಡಬಳ್ಳಾಪುರ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಅನುಕೂಲವಾಗುವಂತೆ ಕುಡಿಯುವ ನೀರಿನ ವ್ಯವಸ್ಥೆ, ನೆರಳಿಗೆ ಶಾಮಿಯಾನ ಹಾಗೂ ಕುರ್ಚಿಗಳನ್ನು ಒದಗಿಸಲು ಕ್ರಮವಹಿಸಲಾಗಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ.
ಈ ಬಾರಿ 20 ಸಾವಿರ ಮೆಟ್ರಿಕ್ ಟನ್ ಖರೀದಿ ನಿರೀಕ್ಷೆ:ಕಳೆದ 3 ವರ್ಷಗಳಲ್ಲಿ ದೊಡ್ಡಬಳ್ಳಾಪುರದಲ್ಲಿ ಖರೀದಿಸಿದ ರಾಗಿ ಪ್ರಮಾಣ ಮತ್ತು ಈ ವರ್ಷ ಖರೀದಿಸಲು ಉದ್ದೇಶಿಸಿರುವ ಅಂದಾಜು ಕುರಿತು ಉತ್ತರಿಸಿರುವ ಕೆ.ಎಚ್.ಮುನಿಯಪ್ಪ, 2020-21ನೇ ಸಾಲಿನಲ್ಲಿ ದೊಡ್ಡಬಳ್ಳಾಪುರದ ರಾಗಿ ಖರೀದಿ ಕೇಂದ್ರದಲ್ಲಿ 17,193, 2021-22ರಲ್ಲಿ 17,718 ಮತ್ತು 2022-23ರಲ್ಲಿ 20,650 ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 20 ಸಾವಿರ ಮೆಟ್ರಿಕ್ ಟನ್ ರಾಗಿ ಖರೀದಿಸಲು ಅಂದಾಜಿಸಲಾಗಿದೆ ಎಂದು ಲಿಖಿತ ಉತ್ತರ ನೀಡಿದ್ದಾರೆ.
ನೇಕಾರರ ಯೋಜನೆಗಳನ್ನು ಜಾರಿಗೊಳಿಸಿ:ದೊಡ್ಡಬಳ್ಳಾಪುರದಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜ್ಯದ ಒಟ್ಟು ನೇಕಾರರ ಶೇ.10ಕ್ಕು ಹೆಚ್ಚು ನೇಕಾರರು ದೊಡ್ಡಬಳ್ಳಾಪುರದಲ್ಲೇ ಇದ್ದಾರೆ. ನೇಕಾರರ ಸಂಖ್ಯೆಗೆ ಅನುಗುಣವಾಗಿ ಸವಲತ್ತುಗಳನ್ನು ನೀಡಬೇಕು. ವಿದ್ಯುತ್ ಮಗ್ಗ ಜಾಕಾರ್ಡ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಒದಗಿಸಬೇಕು. ನೇಕಾರ ಸಮುದಾಯಗಳ ಅಭ್ಯುದಯಕ್ಕೆ ಯೋಜನೆಗಳು ಅಗತ್ಯ. ನೇಕಾರಿಕೆ ವೃತ್ತಿಯನ್ನು ಕುಲಕಸುಬಾಗಿ ಹೊಂದಿರುವ ಸಮುದಾಯಗಳಿಗೆ ಹೆಚ್ಚಿ ಆದ್ಯತೆ ಅಗತ್ಯ ಎಂದರು.
ಜವಳಿ ಸಚಿವರು ಉತ್ತರ ನೀಡಿ, ಮುಂಬರುವ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿದ್ಯುತ್ ಸಬ್ಸಿಡಿ, ನೇಕಾರರ ಯೋಜನೆಗಳ ವ್ಯವಸ್ಥಿತ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು. ಮೊಟ್ಟ ಮೊದಲ ಬಾರಿಗೆ ನಮ್ಮ ಸರ್ಕಾರ 10 ಎಚ್‌ಪಿವರೆಗಿನ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ ಎಂದರು.15ಕೆಡಿಬಿಪಿ2- ವಿಧಾನಸಭೆ ಅಧಿವೇಶನದಲ್ಲಿ ಮಾತನಾಡುತ್ತಿರುವ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್.