6 ಗ್ರಾಮ ಪಂಚಾಯ್ತಿಗೆ ಕ್ಷಯಮುಕ್ತ ಪ್ರಶಸ್ತಿ

| Published : Mar 21 2025, 12:31 AM IST

ಸಾರಾಂಶ

ಯಳಂದೂರು ತಾಲೂಕಿನ ಅಂಬಳೆ ಗ್ರಾಮ ಪಂಚಾಯಿತಿಗೆ ಕ್ಷಯರೋಗ ಮುಕ್ತ ಗ್ರಾಪಂ ಪ್ರಶಸ್ತಿಯನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ಡಿಎಚ್‌ಒ ಡಾ.ಚಿದಂಬರ ಪಿಡಿಒ ಸಿ.ಎನ್. ಕಾವ್ಯ ಗ್ರಾಪಂ ಅಧ್ಯಕ್ಷೆ ಮಹದೇವಮ್ಮ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರುತಾಲೂಕಿನ ೬ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದಿಂದ ಕೊಡ ಮಾಡುವ ಕ್ಷಯರೋಗಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿ ಲಭಿಸಿವೆ. ೨೦೨೩ನೇ ಸಾಲಿನಲ್ಲಿ ದುಗ್ಗಹಟ್ಟಿ ಹಾಗೂ ಗುಂಬಳ್ಳಿ ಗ್ರಾಮ ಪಂಚಾಯಿತಿ ೨೦೨೪ನೇ ಸಾಲಿಗೆ ಅಂಬಳೆ, ಬಿಳಿಗಿರಿರಂಗನಬೆಟ್ಟ ಯರಗಂಬಳ್ಳಿ ಹಾಗೂ ಮದ್ದೂರು ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ. ಗುರುವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಎನ್‌ಟಿಇಪಿ ವತಿಯಿಂದ ಹಮ್ಮಿಕೊಂಡಿದ್ದ ಕ್ಷಯಮುಕ್ತ ಭಾರತ ಅಭಿಯಾನದಡಿ ಕ್ಷಯಮುಕ್ತ ಗ್ರಾಮ ಪಂಚಾಯಿತಿ ಸಮಾರಂಭದಲ್ಲಿ ಈ ಪಂಚಾಯಿತಿಯ ಪಿಡಿಒ ಹಾಗೂ ಗ್ರಾಪಂ ಅಧ್ಯಕ್ಷರಿಗೆ ಪ್ರಶಸ್ತಿ ಪತ್ರವನ್ನು ಜಿಪಂ ಸಿಇಒ ಮೋನಾರೋತ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರ ನೀಡಿದರು. ಜಿಲ್ಲೆಯಲ್ಲಿ ಈ ಪ್ರಶಸ್ತಿ ಪಡೆದ ಒಟ್ಟು ೪೮ ಗ್ರಾಮ ಪಂಚಾಯಿತಿಗಳಿವೆ. ಇದರಲ್ಲಿ ಕಳೆದ ಸಾಲಿನಲ್ಲಿ ೧೩ ಹಾಗೂ ಈ ಸಾಲಿನಲ್ಲಿ ೩೫ ಗ್ರಾಪಂಗೆ ಪ್ರಶಸ್ತಿ ಲಭಿಸಿವೆ. ಯಾವ ಗ್ರಾಮ ಪಂಚಾಯಿತಿಯಲ್ಲಿ ಒಂದು ಸಾವಿರ ಜನಸಂಖ್ಯೆಯಲ್ಲಿ ಒಂದು ಹಾಗೂ ಒಂದಕ್ಕಿಂತ ಕಡಿಮೆ ಕ್ಷಯರೋಗಿಗಳಿದ್ದರೆ ಇಂತಹ ಪಂಚಾಯಿತಿಗೆ ಪ್ರಶಸ್ತಿ ನೀಡಲಾಗುತ್ತದೆ. ಮೊದಲನೇ ವರ್ಷ ಕಂಚಿನ ಗಾಂಧಿ ಪ್ರತಿಮೆ ನೀಡಲಾಗುತ್ತದೆ. ಇದೆ ಮಾನದಂಡವನ್ನು ಮುಂದಿನ ವರ್ಷವೂ ಪಾಲಿಸಿದರೆ ಬೆಳ್ಳಿ ನಂತರ ಚಿನ್ನದ ಪದಕ ನೀಡಲಾಗುತ್ತದೆ. ನಮ್ಮ ತಾಲೂಕಿನಲ್ಲಿ ಈ ಪ್ರಶಸ್ತಿಯನ್ನು ಒಟ್ಟು ೬ ಪಂಚಾಯಿತಿಗಳು ಪಡೆದಿರುವುದು ಅತೀವ ಸಂತಸ ತಂದಿದ್ದು ಇಡೀ ತಾಲೂಕನ್ನು ಕ್ಷಯಮುಕ್ತ ತಾಲೂಕಾಗಿ ಮಾಡಲು ಶ್ರಮ ಪಡಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ತನುಜ ಮಾಹಿತಿ ನೀಡಿದರು.ಅಂಬಳೆ ಗ್ರಾಪಂ ಪಿಡಿಒ ಸಿ.ಎನ್.ಕಾವ್ಯ ಮಾತನಾಡಿ, ಈ ಬಾರಿ ಕ್ಷಯರೋಗ ಮುಕ್ತ ಗ್ರಾಮ ಪಂಚಾಯಿತಿಯಾಗಿ ಅಂಬಳೆ ಪಂಚಾಯಿತಿಯೂ ಆಯ್ಕೆಯಾಗಿರುವುದು ಅತೀವ ಸಂತಸ ತಂದಿದೆ. ಈ ಪಂಚಾಯಿತಿಗೆ ಕಂಚಿನ ಪದಕ ಲಭಿಸಿದೆ. ಮುಂದೆಯೂ ಇದನ್ನು ಸಂಪೂರ್ಣ ಕ್ಷಯಮುಕ್ತ ಮಾಡುವಲ್ಲಿ ಪಂಚಾಯಿತಿ ವತಿಯಿಂದ ಆರೋಗ್ಯ ಇಲಾಖೆಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.