ಶಿರಹಟ್ಟಿ ಫಕೀರ ಸಿದ್ಧರಾಮ ಶ್ರೀಗಳಿಗೆ ಆನೆ ಅಂಬಾರಿ ಸಹಿತ ತುಲಾಭಾರ

| Published : Feb 02 2024, 01:01 AM IST

ಶಿರಹಟ್ಟಿ ಫಕೀರ ಸಿದ್ಧರಾಮ ಶ್ರೀಗಳಿಗೆ ಆನೆ ಅಂಬಾರಿ ಸಹಿತ ತುಲಾಭಾರ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಹಟ್ಟಿ ಸಂಸ್ಥಾನದ ಚಂಪಕ ಎಂಬ ಹೆಸರಿನ ಆನೆ ಅಂಬಾರಿ ಹೊತ್ತಿತ್ತು. ಈ ಆನೆಗೆ ಭರ್ತಿ 60 ವರ್ಷ. ಹೀಗಾಗಿ ಆನೆಯ ಷಷ್ಠ್ಯಬ್ದಿ ಮಹೋತ್ಸವವನ್ನೂ ಇದೇ ವೇಳೆ ನೆರವೇರಿಸಿದ್ದು ವಿಶೇಷ. ದಿಂಗಾಲೇಶ್ವರ ಶ್ರೀಗಳು ಪ್ರವಚನ ಮಾಡಿದ್ದ ಜೀವನ ದರ್ಶನದ ಎರಡು ಗ್ರಂಥಗಳ ಬಿಡುಗಡೆಯೂ ನಡೆಯಿತು

ಹುಬ್ಬಳ್ಳಿ: ಗದಗ ಜಿಲ್ಲೆ ಶಿರಹಟ್ಟಿಯ ಫಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವದಂಗವಾಗಿ ಇಲ್ಲಿನ ನೆಹರು ಮೈದಾನದಲ್ಲಿ ಆನೆ ಅಂಬಾರಿ ಸಹಿತ ಶ್ರೀಗಳ ನಾಣ್ಯಗಳಿಂದ ತುಲಾಭಾರ ವೈಭವದಿಂದ ನೆರವೇರಿತು.

ಬರೋಬ್ಬರಿ 5555 ಕೆಜಿ ತೂಕದ ₹73.40 ಲಕ್ಷ ಮೌಲ್ಯದ ನಾಣ್ಯಗಳಿಂದ ತುಲಾಭಾರ ನಡೆಸಿದ್ದು ಇದೇ ಮೊದಲು. ಭಾವೈಕ್ಯತೆಯ ಸಂಕೇತವಾಗಿರುವ ಶ್ರೀಗಳ ತುಲಾಭಾರ ಐತಿಹಾಸಿಕ ಕಾರ್ಯಕ್ರಮ ಎಂದು ಪಾಲ್ಗೊಂಡ ಗಣ್ಯರೆಲ್ಲ ಬಣ್ಣಿಸಿದರು.

ಸಿದ್ಧರಾಮ ಶ್ರೀಗಳಿಗೆ 75 ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ತುಲಾಭಾರ ಆಯೋಜಿಸಲಾಗಿತ್ತು. ಇದರಂಗವಾಗಿ ಕಳೆದ 20 ದಿನಗಳಿಂದಲೇ ಭಾವೈಕ್ಯತಾ ರಥಯಾತ್ರೆ ನಡೆಸಲಾಗಿತ್ತು. ಇವತ್ತು ಬೆಳಗ್ಗೆಯಿಂದ ವಿವಿಧ ಕಾರ್ಯಕ್ರಮಗಳು ನಡೆದಿದ್ದವು.

ಅದ್ಧೂರಿ ಮೆರವಣಿಗೆ: ತುಲಾಭಾರಕ್ಕೂ ಮುನ್ನ ನಗರದ ಮೂರುಸಾವಿರ ಮಠದಿಂದ ಆನೆ ಅಂಬಾರಿಯ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಐದು ಆನೆ, ಐದು ಒಂಟೆ, ಐದು ಕುದುರೆಗಳು ಪಾಲ್ಗೊಂಡಿದ್ದವು. ನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ಹತ್ತಾರು ಕಲಾಮೇಳಗಳು ಪಾಲ್ಗೊಂಡು ಮೆರವಣಿಗೆಗೆ ಮೆರಗು ತಂದವು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ನೆಹರು ಮೈದಾನಕ್ಕೆ ಆಗಮಿಸಿತು.

ಕಿಕ್ಕಿರಿದು ತುಂಬಿದ್ದ ಭಕ್ತ ಗಣದ ಸಮ್ಮುಖದಲ್ಲಿ ಆನೆ ಅಂಬಾರಿ ಸಮೇತವಾಗಿ ಶ್ರೀಗಳ ತುಲಾಭಾರ ನಡೆಸಲಾಯಿತು. ಇದಕ್ಕಾಗಿ ಪ್ರತ್ಯೇಕವಾಗಿ ತಕ್ಕಡಿಯನ್ನು ಸಿದ್ಧಪಡಿಸಲಾಗಿತ್ತು.

5555 ಕೆಜಿ ತೂಕದ ಎಲ್ಲವೂ ₹10 ಮುಖಬೆಲೆಯ ನಾಣ್ಯಗಳಿಂದ ತುಲಾಭಾರ ಮಾಡಲಾಯಿತು. 367 ಬ್ಯಾಗ್‌ಗಳಲ್ಲಿ ತುಂಬಿಸಲಾಗಿದ್ದ ನಾಣ್ಯಗಳ ಮೌಲ್ಯ ₹73.40 ಲಕ್ಷ ಆಗಿದೆ. ಈ ಹಣವನ್ನು ಮುಂದಿನ ವರ್ಷ ಶಿರಹಟ್ಟಿಯಲ್ಲಿ ನಡೆಯಲಿರುವ ಸ್ವರ್ಣ ತುಲಾಭಾರಕ್ಕೆ ಚಿನ್ನ ಖರೀದಿಸಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ದಿಂಗಾಲೇಶ್ವರ ಶ್ರೀಗಳು ಘೋಷಿಸಿದರು.

ಆನಂದ ಬಾಷ್ಪ: ತುಲಾಭಾರ ನಡೆದ ಬಳಿಕ ಆನಂದಬಾಷ್ಪ ಹಾಕಿದ ಸಿದ್ಧರಾಮ ಶ್ರೀಗಳು, 2001ರಲ್ಲಿ ಸವಣೂರಲ್ಲಿ ತಮ್ಮ ತುಲಾಭಾರ ಆಗಿತ್ತು. ಆಗ ಅಲ್ಲಿನ ಭಕ್ತಗಣ ಆನೆ ಅಂಬಾರಿಯೊಂದಿಗೆ ತಮ್ಮ ತುಲಾಭಾರ ಮಾಡಬೇಕು ಎಂದು ಆಶಿಸಿದ್ದರು. ಆಗಿನ ಅಲ್ಲಿನ ಭಕ್ತರ ಸಂಕಲ್ಪವನ್ನು ಹುಬ್ಬಳ್ಳಿ ಜನ ನೆರವೇರಿಸಿದ್ದಾರೆ. ಈ ತುಲಾಭಾರವನ್ನು ಮನಸ್ಪೂರ್ತಿಯಾಗಿ ಫಕೀರ ಸಂಸ್ಥಾನದ ಪೀಠ ಸ್ವೀಕರಿಸುತ್ತದೆ ಎಂದರು.

"ದ್ವೇಷ ಬಿಡಿ ಪ್ರೀತಿ ಮಾಡಿ " ಎಂಬುದು ನಮ್ಮ ಘೋಷವಾಕ್ಯ. ಅದರಂತೆ ತಮ್ಮ ಸಂಸ್ಥಾನ ಕೆಲಸ ಮಾಡುತ್ತಿದೆ. ಎಲ್ಲರೂ ದ್ವೇಷ ಬಿಟ್ಟು ಪ್ರೀತಿ ಮಾಡಬೇಕು ಅಂದಾಗ ಮಾತ್ರ ಸ್ವರ್ಗ ಕಾಣಲು ಸಾಧ್ಯ. ದ್ವೇಷ ಇದ್ದಲ್ಲಿ ಖಂಡಿತವಾಗಿಯೂ ನರಕವೇ ಇರುತ್ತದೆ. ಪ್ರೀತಿ ಮಾಡುವುದನ್ನು ನಮ್ಮ ಸಂಸ್ಥಾನ ಪಾಲಿಸಿಕೊಂಡು ಬಂದಿದೆ ಎಂದರು.

ಆನೆಗೂ 60 ವರ್ಷ: ಶಿರಹಟ್ಟಿ ಸಂಸ್ಥಾನದ ಚಂಪಕ ಎಂಬ ಹೆಸರಿನ ಆನೆ ಅಂಬಾರಿ ಹೊತ್ತಿತ್ತು. ಈ ಆನೆಗೆ ಭರ್ತಿ 60 ವರ್ಷ. ಹೀಗಾಗಿ ಆನೆಯ ಷಷ್ಠ್ಯಬ್ದಿ ಮಹೋತ್ಸವವನ್ನೂ ಇದೇ ವೇಳೆ ನೆರವೇರಿಸಿದ್ದು ವಿಶೇಷ. ದಿಂಗಾಲೇಶ್ವರ ಶ್ರೀಗಳು ಪ್ರವಚನ ಮಾಡಿದ್ದ ಜೀವನ ದರ್ಶನದ ಎರಡು ಗ್ರಂಥಗಳ ಬಿಡುಗಡೆಯೂ ನಡೆಯಿತು.

ಗಣ್ಯರು ಸಾಕ್ಷಿ: ಬರೋಬ್ಬರಿ 60ಕ್ಕೂ ಹೆಚ್ಚು ವಿವಿಧ ಹರ ಚರ ಮಠಾಧೀಶರು, ರಾಜಕೀಯ ಗಣ್ಯ ವ್ಯಕ್ತಿಗಳು, ಉದ್ಯಮಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಫಕೀರ ದಿಂಗಾಲೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಎಂ.ಬಿ. ಪಾಟೀಲ, ಎಚ್‌.ಕೆ. ಪಾಟೀಲ, ಈಶ್ವರ ಖಂಡ್ರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್‌.ಪಾಟೀಲ, ಎಸ್‌.ವಿ. ಸಂಕನೂರ, ಪ್ರದೀಪ ಶೆಟ್ಟರ್‌, ಬಸವರಾಜ ಶಿವಣ್ಣವರ, ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕರಾದ ಸೀಮಾ ಮಸೂತಿ, ಜಿ.ಎಸ್‌. ಪಾಟೀಲ, ಎಸ್‌.ಎಸ್‌. ಪಾಟೀಲ, ಮಹಾಂತೇಶ ಕವಟಗಿ ಮಠ ಸೇರಿದಂತೆ ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

3 ಕೆಜಿ ಬಂಗಾರ ಕೊಡುಗೆ: ಮುಂದಿನ ವರ್ಷ ಸಿದ್ಧರಾಮ ಶ್ರೀಗಳ ಬಂಗಾರ ತುಲಾಭಾರ ಕಾರ್ಯಕ್ರಮವೂ ಶಿರಹಟ್ಟಿಯಲ್ಲಿ ನಡೆಯಲಿದೆ. 63 ಕೆಜಿ ತೂಕದ ಬಂಗಾರ ಬೇಕು. ಅದಕ್ಕಾಗಿ ಹುಬ್ಬಳ್ಳಿಯಿಂದ 3 ಕೆಜಿ ಬಂಗಾರ ಸಂಗ್ರಹವಾಗಿದೆ. ಈ ಬಂಗಾರವನ್ನು ಇಲ್ಲಿನ ಭಕ್ತಗಣ ಸಿದ್ಧರಾಮ ಶ್ರೀಗಳಿಗೆ ಹಸ್ತಾಂತರಿಸಿದರು.

ಈ ನಡುವೆ ರಾಜ್ಯದ ಬೇರೆ ಬೇರೆ ಭಾಗದಿಂದ ಈವರೆಗೆ 11 ಕೆಜಿ ಸಂಗ್ರಹವಾಗಿದೆ. ಅದರಲ್ಲಿ ಹುಬ್ಬಳ್ಳಿಯ ಪಾಲು 3 ಕೆಜಿ, ಉಳಿದ 8 ಕೆಜಿ ಬಂಗಾರ ಬೇರೆ ಬೇರೆ ಜಿಲ್ಲೆಗಳದ್ದು ಎಂದು ದಿಂಗಾಲೇಶ್ವರ ಶ್ರೀ ಘೋಷಿಸಿದರು.

ಇದೇ ಮೊದಲು:

ಶ್ರೀಗಳ ತುಲಾಭಾರ ಸಾಕಷ್ಟು ನಡೆದಿದೆ. ಆದರೆ ಆನೆ ಅಂಬಾರಿ ಸಮೇತ ನಡೆದಿರುವುದು ಇದೇ ಮೊದಲು. ಬಹುಶಃ ಈವರೆಗೂ ಯಾರ ತುಲಾಭಾರವೂ ಆನೆ ಅಂಬಾರಿ ಸಮೇತ ನಡೆದ ಉದಾಹರಣೆ ಇಲ್ಲ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿತ್ತು.