ಕಂಪ್ಲಿಯಲ್ಲಿ ಅದ್ಧೂರಿಯಾಗಿ ನಡೆದ ತುಳಜಾ ಭವಾನಿ ಜಾತ್ರೆ

| Published : Jun 26 2024, 12:37 AM IST

ಸಾರಾಂಶ

ಹರಿಣಿ ಶಿಕಾರಿಗಳು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಆರ್ಥಿಕ ಸ್ವಾವಲಂಬಿಗಳನ್ನಾಗಿಸಿ, ಸಮಾಜಮುಖಿಯಾಗಿ ಪ್ರಗತಿ ಸಾಧಿಸಬೇಕು.

ಕಂಪ್ಲಿ: ಪಟ್ಟಣದ ಹಕ್ಕಿಪಿಕ್ಕಿ ಕಾಲೋನಿಯ ಅಲೆಮಾರಿ, ಅರೆಅಲೆಮಾರಿ ಸಮುದಾಯದ ಜನತೆಯ ಆರಾಧ್ಯ ದೈವ ತುಳಜಾಭವಾನಿ ದೇವಿಯ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ಜರುಗಿತು.

ಹೆಬ್ಬಾಳದ ಬೃಹನ್ ಮಠದ ನಾಗಭೂಷಣ ಶಿವಾಚಾರ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹರಿಣಿ ಶಿಕಾರಿಗಳು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಆರ್ಥಿಕ ಸ್ವಾವಲಂಬಿಗಳನ್ನಾಗಿಸಿ, ಸಮಾಜಮುಖಿಯಾಗಿ ಪ್ರಗತಿ ಸಾಧಿಸಬೇಕು. ಉತ್ತಮ ಸಂಸ್ಕಾರವಂತರನ್ನಾಗಿ ಬೆಳೆಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಂತೆ ತಿಳಿಸಿದರು.

ಡಾ.ಬಿ.ಎಸ್. ಸುಧಾಕರ ಮಾತನಾಡಿ, ಇಲ್ಲಿನ ಹರಿಣಿಶಿಕಾರಿಗಳು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದ್ದಾರೆ. 20 ವರ್ಷಗಳಲ್ಲಿ ಕಲಾತಂಡಗಳನ್ನು ರಚಿಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮ ನೀಡುವಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದ್ದಾರೆ. ತಾವು ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ತುಂಗಭದ್ರಾ ನದಿತಟದ ಗಂಗಮ್ಮ ದೇವಸ್ಥಾನದಿಂದ ವಿವಿಧ ಮುಖ್ಯ ರಸ್ತೆಗಳ ಮಾರ್ಗವಾಗಿ ತುಳಜಾ ಭವಾನಿ ದೇವಸ್ಥಾನದ ವರೆಗೆ ತುಳಜಾ ಭವಾನಿ ಭಾವಚಿತ್ರವನ್ನು ಬೆಳ್ಳಿ ರಥದ ಮೂಲಕ ಗಂಗೆಸ್ಥಳ ಮೆರವಣಿಗೆ ನಡೆಸಲಾಯಿತು. ಗಂಗೆಸ್ಥಳ ಮೆರವಣಿಗೆಯಲ್ಲಿ ಹರಿಣಿಶಿಕಾರಿ ಯುವಕ ಯುವತಿ, ಮಹಿಳೆಯರ ಬುಡಕಟ್ಟು ಕುಣಿತ ಗಮನ ಸೆಳೆಯಿತು.

ಶಾಸಕ ಜೆ.ಎನ್. ಗಣೇಶ್, ಸಿರಗುಪ್ಪ ಬಸವಭೂಷಣಸ್ವಾಮಿ, ಹಕ್ಕಿಪಿಕ್ಕಿ ಸಮುದಾಯದ ಮುಖಂಡರಾದ ಎಚ್.ಪಿ. ಶಿಕಾರಿರಾಮು, ಎಚ್.ಪಿ. ಶ್ರೀಕಾಂತ, ಹರಿ, ಜಾನಕಿ, ಜಿ.ಬಾಬು, ಅಕ್ಕಿಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಚಲನಚಿತ್ರ ನಿರ್ದೇಶಕ ಆದಿತ್ಯ ಚಿಕ್ಕಣ್ಣ, ತುಳಜಾ ಭವಾನಿ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳಾದ ಪಿ.ಮೂಕಯ್ಯಸ್ವಾಮಿ, ಬಿ.ನಾರಾಯಣಪ್ಪ, ಪುರಸಭೆ ಸದಸ್ಯ ಭಟ್ ಪ್ರಸಾದ್ ಇದ್ದರು.