ಕೆಟ್ಟು ನಿಂತ ಸೋಲಾರ್ ಪ್ಲಾಂಟ್: ಕಗ್ಗತ್ತಲಿನಲ್ಲಿ ತುಳಸಿಕೆರೆ ಗ್ರಾಮ

| Published : Jun 10 2024, 12:32 AM IST

ಸಾರಾಂಶ

ಸೋಲಾರ್ ಪ್ಲಾಂಟ್ ಕೆಟ್ಟು ನಿಂತರೂ ಚೆಸ್ಕಾಂ ದುರಸ್ತಿಗೆ ಮುಂದಾಗದಿರುವುದರಿಂದ ಹನೂರಿನ ತುಳಸಿಕೆರೆ ಕಗ್ಗತ್ತಲಿನಲ್ಲಿ ಮುಳುಗಿದ ಪರಿಣಾಮ, ಜನರಿಗೆ ಕೊಳ್ಳಿ ಬೆಳಕಿನಲ್ಲಿ ವಾಸ ಮಾಡಬೇಕಾದ ಪರಿಸ್ಧಿತಿ ನಿರ್ಮಾಣವಾಗಿದೆ.

ಅರಣ್ಯದ ಮಧ್ಯಭಾಗದಲ್ಲಿರುವ ಈ ಗ್ರಾಮಕ್ಕೆ ಈಗ ಕೊಳ್ಳಿ ಬೆಳಕೇ ಆಸರೆ । ವರ್ಷವಾದರೂ ಸ್ಪಂದಿಸದ ಜನಪ್ರತಿನಿಧಿಗಳು ಜಿ. ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ಸೋಲಾರ್ ಪ್ಲಾಂಟ್ ಕೆಟ್ಟು ನಿಂತರೂ ಚೆಸ್ಕಾಂ ದುರಸ್ತಿಗೆ ಮುಂದಾಗದಿರುವುದರಿಂದ ತುಳಸಿಕೆರೆ ಕಗ್ಗತ್ತಲಿನಲ್ಲಿ ಮುಳುಗಿದ ಪರಿಣಾಮ, ಜನರಿಗೆ ಕೊಳ್ಳಿ ಬೆಳಕಿನಲ್ಲಿ ವಾಸ ಮಾಡಬೇಕಾದ ಪರಿಸ್ಧಿತಿ ನಿರ್ಮಾಣವಾಗಿದೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಳಸಿಕೆರೆ ಗ್ರಾಮವು ಮಲೆ ಮಹದೇಶ್ವರ ಬೆಟ್ಟದಿಂದ 4 ಕಿಮೀ ದೂರದಲ್ಲಿದ್ದರೂ, ಅರಣ್ಯದ ಮಧ್ಯ ಭಾಗದಲ್ಲಿರುವುದರಿಂದ 152 ಕುಟುಂಬ, 450ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ಕೆಟ್ಟು ನಿಂತು ಹಲವಾರು ತಿಂಗಳು ಕಳೆದರೂ ಸಹ ದುರಸ್ತಿಗೆ ಮುಂದಾಗದೆ ಇಲ್ಲಿನ ಜನತೆ ಕಗ್ಗತ್ತಲ್ಲಿನಲ್ಲಿ ಕಾಲ ಕಳೆಯುವಂತಾಗಿದೆ.

ಕೆಟ್ಟು ನಿಂತ ಸೋಲಾರ್ ಪ್ಲಾಂಟ್:

2018 ಅ. 31ರಂದು ಕೇಂದ್ರ ಸರ್ಕಾರದ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಎಸ್ ಎಸ್ ಜಿ ಯೋಜನೆ ಅಡಿ ಕುಗ್ರಾಮಗಳಿಗೆ ಬೆಳಕು ನೀಡುವ ಸದುದ್ದೇಶದಿಂದ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಿ ಅರಣ್ಯದ ಮಧ್ಯಭಾಗದಲ್ಲಿರುವ ಗ್ರಾಮಸ್ಥರಿಗೆ ಯೋಜನೆ ಕಲ್ಪಿಸಲಾಗಿತ್ತು. ನವ್ಯಟೆಕ್ಸ್ ಕಂಪನಿಗೆ ಗುತ್ತಿಗೆ ಆಧಾರದ ಮೇಲೆ ಟೆಂಡರ್ ಮೂಲಕ ನಿರ್ವಹಣೆ ಮಾಡಲು ನೀಡಲಾಗಿತ್ತು. ಸರಿಯಾದ ನಿರ್ವಹಣೆ ಇಲ್ಲದೆ ಸೋಲಾರ್ ಪ್ಲಾಂಟ್ ಕೆಟ್ಟು ನಿಂತಿದೆ.

ಕೊಳ್ಳಿ ಬೆಳಕಿನಲ್ಲಿ ವಾಸ:

ಮಲೆ ಮಾದೇಶ್ವರ ಬೆಟ್ಟದಿಂದ ಕೂಗಳತೆ ಅಂತರದಲ್ಲಿ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ತುಳಸಿಕೆರೆ ಗ್ರಾಮವು, ಇಲ್ಲಿನ ಜನತೆ ಲೋಕಸಭಾ ಚುನಾವಣೆಯನ್ನು ಸಹ ಬಹಿಷ್ಕರಿಸಿ ವಿದ್ಯುತ್, ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವವರೆಗೂ ಮತದಾನ ಮಾಡುವುದಿಲ್ಲ ಎಂದು ಅಧಿಕಾರಿಗಳನ್ನು ಮತದಾನ ಮಾಡದೆ ವಾಪಸ್ ಕಳಿಸಿದ್ದರು. ಸೋಲಾರ್ ಪ್ಲಾಂಟ್ ಕೆಟ್ಟು ನಿಂತಿರುವುದರಿಂದ ಕೊಳ್ಳಿ ಬೆಳಕಿನಲ್ಲಿ ( ಸೌಧೆ ), ಒಲೆ ಬೆಳಕಿನಲ್ಲಿ ನಿವಾಸಿಗಳು ಕಾಲ ಕಳೆಯುವಂತಾಗಿದೆ, ಹೀಗಾಗಿ ಸಂಬಂಧಪಟ್ಟ ಚೆಸ್ಕಾಂ ಇಲಾಖೆ ಕೆಟ್ಟು ನಿಂತಿರುವ ಸೋಲಾರ್ ಪ್ಲಾಂಟನ್ನು ದುರಸ್ತಿ ಪಡಿಸಿ ಗ್ರಾಮಸ್ಥರಿಗೆ ಬೆಳಕು ನೀಡಬೇಕಾಗಿ ನಿವಾಸಿಗಳು ಒತ್ತಾಯಿಸಿದ್ದಾರೆ.

ಕಗ್ಗತ್ತಲಿನಲ್ಲಿ ವಾಸ:

ಸೋಲಾರ್ ಪ್ಲಾಂಟ್ ಕಳೆದ ಒಂದು ವರ್ಷದಿಂದ ಕೆಟ್ಟು ನಿಂತಿರುವುದರಿಂದ ಇಲ್ಲಿನ 150ಕ್ಕೂ ಹೆಚ್ಚಿನ ಮನೆಗಳಲ್ಲಿ ವಾಸ ಮಾಡುತ್ತಿರುವ ಜನತೆಯು ಕಗ್ಗತ್ತಲ್ಲಿನಲ್ಲಿ ಕಾಲಕಳೆಯುವಂತಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಇಲ್ಲಿನ ಸೋಲಾರ್ ಪ್ಲಾಂಟ್ ದುರಸ್ತಿ ಪಡಿಸಿ ಜನತೆಗೆ ಬೆಳಕು ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ:

ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಸೋಲಾರ್ ಪ್ಲಾಂಟ್ ನಿರ್ಮಿಸಿ ಜನರಿಗೆ ಬೆಳಕು ನೀಡಿರುವ ಹಿನ್ನೆಲೆಯಲ್ಲಿ ಕೆಟ್ಟು ನಿಂತು ವರ್ಷ ಕಳೆದರೂ, ದುರಸ್ತಿಗೆ ಮುಂದಾಗದೆ ಇರುವ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳಿಗೂ ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಮನವಿ ಹಾಗೂ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಆದರೂ ಸಹ ಕ್ರಮಕ್ಕೆ ಮುಂದಾಗದೆ ಇರುವುದರಿಂದ ಇಲ್ಲಿನ ನಿವಾಸಿಗಳು ಜನಪ್ರತಿನಿಧಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲೆ ಮಾದೇಶ್ವರ ಬೆಟ್ಟದಿಂದ 4 ಕಿಮೀ ದೂರದಲ್ಲಿರುವ ತುಳಸಿಕೆರೆ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ, ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವವರೆಗೂ ಗ್ರಾಮದಲ್ಲಿ ಮತದಾನ ಮಾಡುವುದಿಲ್ಲ ಎಂದು ಲೋಕಸಭಾ ಚುನಾವಣೆಯನ್ನು ಸಹ ಬಹಿಷ್ಕರಿಸಿದ್ದೇವೆ. ಗ್ರಾಮದಲ್ಲಿ ಇರುವ ಸೋಲಾರ್ ಪ್ಲಾಂಟ್ ಕೆಟ್ಟು ನಿಂತಿದೆ. ಕಳೆದ ಒಂದು ವರ್ಷದಿಂದ ಇಲಾಖೆ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಇತ್ತ ಸುಳಿಯದ ಕಾರಣ ಗ್ರಾಮದಲ್ಲಿ ಕೊಳ್ಳಿ ಬೆಳಕು. ಹಳ್ಳದ ನೀರು ಬಳಸುವುದೇ ನಮ್ಮ ಬದುಕು ಆಗಿದೆ. ಇನ್ನು ಮುಂದಾದರೂ ಸಹ ಸಂಬಂಧಪಟ್ಟ ಜನ ಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಕೆಂಪೇಗೌಡ, ಗ್ರಾಪಂ ಮಾಜಿ ಸದಸ್ಯ, ತುಳಸಿಕೆರೆ ಗ್ರಾಮ

ಸೋಲಾರ್ ಪ್ಲಾಂಟ್ 2018ರಲ್ಲಿ ಪ್ರಾರಂಭವಾಗಿರುವುದು, ನವ್ಯ ಕಂಪನಿ ಅವರಿಗೆ ನಿರ್ವಹಣೆಯ ಹೊಣೆ ನೀಡಲಾಗಿದೆ. ಗುತ್ತಿಗೆ ಮುಗಿದು ಮತ್ತೆ ರೀ ಟೆಂಡರ್ ಆಗಿದೆ, ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಗೆ ನಾಲ್ಕೈದು ತಿಂಗಳಿನಿಂದ ಸಂಬಳ ನೀಡದೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೋಲಾರ್ ಪ್ಲಾಂಟ್ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು.

ಮಹೇಶ್, ಎಇ, ಚೆಸ್ಕಾಂ, ಮಲೆ ಮಹದೇಶ್ವರ ಬೆಟ್ಟ ವಿಭಾಗ,