ತುಳು ಭಾಷೆ ಉತ್ಕೃಷ್ಟ ಸಂಸ್ಕೃತಿಯ ಪ್ರತೀಕ: ವಾಮನ ಪೈ

| Published : Mar 03 2024, 01:31 AM IST

ಸಾರಾಂಶ

ತುಳುಕೂಟೊ ಪುತ್ತೂರು ತಾಲೂಕು ಸಮಿತಿ ಇದರ ಆಶ್ರಯದಲ್ಲಿ ಪುತ್ತೂರಿನ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಆವರಣದಲ್ಲಿ ಎರಡು ದಿನಗಳ ತುಳುವೆರೆ ಮೇಳೊ-೨೦೨೪ ಹಾಗೂ ತೆನೆಸ್ ಮೇಳೋ ಕಾರ್ಯಕ್ರಮಕ್ಕೆ ಚಾಲನೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಪ್ರಪಂಚದಲ್ಲಿಯೇ ಅತ್ಯಂತ ಹಳೆಯ ಭಾಷೆಯಾಗಿ ಬೆಳೆದು ಬಂದಿರುವ ತುಳು ಭಾಷೆಗೆ ಅಪಾರ ಶಕ್ತಿಯಿದ್ದು, ಇದೊಂದು ಕೇವಲ ಭಾಷೆ ಮಾತ್ರವಾಗಿರದೆ ಉತ್ಕೃಷ್ಟ ಸಂಸ್ಕೃತಿಯ ಪ್ರತೀಕವಾಗಿದೆ. ತುಳುವಿಗೆ ಅಪಾರ ಶಕ್ತಿಯಿದೆ. ತುಳು ಭಾಷಿಗರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆಯೊಂದಿಗೆ ವಿಶೇಷ ಗೌರವವಿದೆ ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ ಹೇಳಿದರು.

ಅವರು ತುಳುಕೂಟೊ ಪುತ್ತೂರು ತಾಲೂಕು ಸಮಿತಿ ಇದರ ಆಶ್ರಯದಲ್ಲಿ ಪುತ್ತೂರಿನ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ತುಳುವೆರೆ ಮೇಳೊ-೨೦೨೪ ಹಾಗೂ ತೆನೆಸ್ ಮೇಳೋದಲ್ಲಿ ವ್ಯಾಪಾರ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು.

ತೆನಸ್ ಮೇಳಕ್ಕೆ ಚಾಲನೆ ನೀಡಿದ ಪುತ್ತೂರಿನ ವೈದ್ಯ ಡಾ. ಸುರೇಶ್ ಪುತ್ತೂರಾಯ ಮಾತನಾಡಿ ಕರಾವಳಿ ಭಾಗದಲ್ಲಿ ಹೆಚ್ಚಿನವರ ಮಾತೃ ಭಾಷೆ ತುಳು ಆಗಿದೆ. ಆದರೆ ಪ್ರದೇಶಕ್ಕೆ ಸಂಬಂಧಿಸಿ ಆ ಭಾಷೆಯನ್ನಾಡುವಲ್ಲಿ ವ್ಯತ್ಯಾಸವಿದೆ. ತುಳುವಿಗೆ ವಿಶೇಷ ಮಾನ್ಯತೆಯ ಕುರಿತಂತೆ ಈಗಾಗಲೇ ಗಂಭೀರ ಪ್ರಯತ್ನಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ನಮ್ಮದೂ ಆಗ್ರಹವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ತುಳುವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಮಾತನಾಡಿ, ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ತುಳು ಭಾಷಿಕರು ಹೊಂದಿದ್ದಾರೆ. ತುಳುವಿಗೆ ವಿಶೇಷ ಮಾನ್ಯತೆಗಾಗಿ ಡಾ. ವೀರೇಂದ್ರ ಹೆಗ್ಗಡೆ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಸೇರಿದಂತೆ ಹಲವರು ವಿಶೇಷ ಪ್ರಯತ್ನ ನಡೆಸುತ್ತಿದ್ದಾರೆ. ತುಳು ಭಾಷಿಕರೆಲ್ಲರೂ ಈ ನಿಟ್ಟಿನಲ್ಲಿ ತಮ್ಮ ಕೊಡುಗೆಗಳನ್ನು ನೀಡಬೇಕು ಎಂದು ಹೇಳಿದರು. ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಿತ್ತಳಿಕೆ ಸೂರ್ಯನಾಥ ಆಳ್ವ, ಜನ್ಮ ಫೌಂಡೇಶನ್‌ನ ಹರ್ಷಕುಮಾರ್ ರೈ ಮಾಡಾವು ಮಾತನಾಡಿದರು. ತುಳುವೆರೆ ಮೇಳೊ ಸಮಿತಿಯ ಅಧ್ಯಕ್ಷ ವಿಜಯ ಹಾರ್ವಿನ್, ಕಾರ್ಯದರ್ಶಿ ರಾಜೇಶ್ ಬೆಜ್ಜಂಗಳ, ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ನಯನಾ ರೈ ನೆಲ್ಲಿಕಟ್ಟೆ, ಉಲ್ಲಾಸ್ ಪೈ, ಪುತ್ತೂರಿನ ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಸುದಾನ ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಉಪಸ್ಥಿತರಿದ್ದರು.

ತುಳುಕೂಟದ ಜತೆ ಕಾರ್ಯದರ್ಶಿ ನಯನಾ ರೈ ನೆಲ್ಲಿಕಟ್ಟೆ ಪ್ರಾರ್ಥಿಸಿದರು. ತುಳುವೆರೆ ಮೇಳೊ ಸಮಿತಿ ಕಾರ್ಯಾಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯಾನ್ ಮಸ್ಕರೇನಸ್ ಸ್ವಾಗತಿಸಿದರು. ಉಪಾಧ್ಯಕ್ಷೆ ಹೀರಾ ಉದಯ್ ಕಾರ್ಯಕ್ರಮ ನಿರ್ವಹಿಸಿದರು.