ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಿದ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಮುಂದಕ್ಕೆ ತುಳು ಭಾಷೆಯ ಅಭಿವೃದ್ದಿಗಾಗಿ ತುಳು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ತುಳು ಭಾಷೆಯನ್ನು ಕೇಂದ್ರ ಸರ್ಕಾರ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂದು ತುಳು ಪರಿಷತ್‌ ಮಂಗಳೂರು ಅಧ್ಯಕ್ಷ ಶುಭೋದಯ ಆಳ್ವ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಿದ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಮುಂದಕ್ಕೆ ತುಳು ಭಾಷೆಯ ಅಭಿವೃದ್ದಿಗಾಗಿ ತುಳು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ತುಳು ಭಾಷೆಯನ್ನು ಕೇಂದ್ರ ಸರ್ಕಾರ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂದು ತುಳು ಪರಿಷತ್‌ ಮಂಗಳೂರು ಅಧ್ಯಕ್ಷ ಶುಭೋದಯ ಆಳ್ವ ಆಗ್ರಹಿಸಿದರು.ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಎರಡು ಜಿಲ್ಲೆಗಳಿಗೆ ಸೀಮಿತವಾಗಿ ಈ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ನಿರ್ಣಯ ಕೈಗೊಂಡು ಆದೇಶ ಜಾರಿಗೊಳ್ಳಬೇಕು. ಈಗಾಗಲೇ ಕೆಲ ಹೈಸ್ಕೂಲ್‌, ಪದವಿ ಕಾಲೇಜುಗಳಲ್ಲಿ ಇರುವ ತುಳು ಭಾಷಾ ಶಿಕ್ಷಣವನ್ನು ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಕನ್ನಡ ಮಾಧ್ಯಮ, ಖಾಸಗಿ ಶಾಲೆಗಳ ಪ್ರಾಥಮಿಕದಿಂದ ಸ್ನಾತಕೋತ್ತರ ಪದವಿವರೆಗೆ ವಿಸ್ತರಿಸಬೇಕು. ಎರಡೂ ಜಿಲ್ಲೆಯ ವಿಶ್ವವಿದ್ಯಾಲಯಗಳಲ್ಲಿ ತುಳುವಿನ ಅಧ್ಯಯನ, ಸಂಶೋಧನೆಗೆ ಆದ್ಯತೆ ನೀಡಬೇಕು, ಜಿಲ್ಲೆಯಲ್ಲಿರು ಎಲ್ಲ ಭಾಷೆಗಳ ಅಕಾಡೆಮಿಯೊಂದಿಗೆ ತುಳು ಅಧ್ಯಯನ ನಡೆಯಬೇಕು ಎಂದರು.

ತುಳು ಪರಿಷತ್‌ ಪ್ರಧಾನ ಕಾರ್ಯದರ್ಶಿ ಬೆನೆಟ್‌ ಅಮ್ಮಣ್ಣ ಮಾತನಾಡಿ, ತುಳುವಿಗಾಗಿ ಶ್ರಮಿಸುತ್ತಿರುವ ಜಿಲ್ಲೆಯ ಸಂಘ ಸಂಸ್ಥೆಗಳು, ಸಾಹಿತಿಗಳು, ಸಂಶೋಧಕರ ಮಾಹಿತಿ ಕೋಶ ರಚಿಸಬೇಕು, ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಗಳ ತಾಳೆಗರಿ, ಹಸ್ತಪ್ರತಿ, ದೇಶಿ, ವಿದೇಶಿ ಗ್ರಂಥಗಳು, ಫೋಟೊ, ನಿಯತಕಾಲಿಕ ಇರುವ ಪತ್ರಾಗಾರ, ಮ್ಯೂಸಿಯಂ, ಸಂಶೋಧನಾ ಕೇಂದ್ರಗಳಿಗೆ ಪ್ರೋತ್ಸಾಹ ನೀಡಿ, ಸಂಶೋಧಕರಿಗೆ ಮಾಹಿತಿ ಒದಗಿಸಬೇಕು, ಚರಿತ್ರೆ, ಸಂಸ್ಕೃತಿ, ಬಾಯ್ದರೆಯಾಗಿರುವುದನ್ನು ಆಡಿಯೋ, ವಿಡಿಯೋ ದಾಖಲೀಕರಣ ಮಾಡುತ್ತಿರುವವರಿಗೆ ಪ್ರೋತ್ಸಾಹ ನೀಡಬೇಕು, ಚರಿತ್ರೆ ಹೇಳುವ, ಅಳಿದು ಹೋಗುತ್ತಿರುವ ಕುರುಹುಗಳನ್ನು ಸಂರಕ್ಷಿಸಿ, ದಾಖಲಿಸಬೇಕು, ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮಗಳ ಮೂಲಕ ದಾಖಲೀಕರಣಕ್ಕೆ ಪ್ರೋತ್ಸಾಹಿಸಬೇಕು ಎಂದರು.

ತುಳು ಪರಿಷತ್‌ ಗೌರವಾಧ್ಯಕ್ಷ ಪ್ರಭಾಕರ ನೀರುಮಾರ್ಗ, ಉಪಾಧ್ಯಕ್ಷೆ ಚಂದ್ರಕಲಾ ಡಿ.ರಾವ್‌, ಕೋಶಾಧಿಕಾರಿ ಸುಮತಿ ಹೆಗ್ಡೆ, ಕಾರ್ಯದರ್ಶಿ ಶ್ರೀನಿವಾಸ, ನ್ಯಾನ್ಸಿ ನೊರೊನ್ಹಾ ಇದ್ದರು.