ತುಳುನಾಡ ಅಸ್ಮಿತೆಯ ಓಟಿನ ಬೇಟೆಗೆ ಪಕ್ಷಗಳ ಜೈಕಾರ!

| Published : Apr 08 2024, 01:01 AM IST

ಸಾರಾಂಶ

ಕಡು ಕಂದು ಬಣ್ಣದಲ್ಲಿದ್ದು ನಡುವೆ ಬಿಳಿ ಬಣ್ಣದಲ್ಲಿ ಹುಣ್ಣಿಮೆ ಚಂದಿರ ಮತ್ತು ಅರ್ಧ ಚಂದಿರನ ವಿಶಿಷ್ಟ ವಿನ್ಯಾಸ ತುಳುನಾಡ ಬಾವುಟದ್ದು. ಶಕ್ತಿ ಪ್ರದರ್ಶನದ ಮೆರ‍ಣಿಗೆಯಲ್ಲಿ ಎದ್ದು ಕಾಣುವಂತೆ ತುಳು ಬಾವುಟ ಹಾರಿಸುವ ಮೂಲಕ ಅಭ್ಯರ್ಥಿಗಳು ತುಳು ಭಾಷಿಕ ಸಮುದಾಯಗಳ ಭಾವನೆಯನ್ನು ಸೆಳೆಯಲು ನಡೆಸಿರುವ ತಂತ್ರಗಾರಿಕೆ ಇದು.

ಸಂದೀಪ್ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಧರ್ಮ ಮತ್ತು ಜಾತ್ಯತೀತ ಸಿದ್ಧಾಂತದ ನೆಲೆಗಟ್ಟನ್ನೇ ಪ್ರಧಾನವಾಗಿ ಇಟ್ಟುಕೊಂಡು ಓಟಿನ ಬೇಟೆ ನಡೆಯುತ್ತಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮೊದಲ ಬಾರಿಗೆಂಬಂತೆ ತುಳು ಅಸ್ಮಿತೆಯೂ ಮುನ್ನೆಲೆಗೆ ಬಂದಿದೆ. ಈ ಮೂಲಕ ಪ್ರಚಾರದ ಹಳೆಯ ಗಿಮಿಕ್‌ಗಳ ಜತೆ ಹೊಸ ಹೊಸ ದಾರಿಯನ್ನೂ ಪಕ್ಷಗಳು ಕಂಡುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣಾ ಪ್ರಚಾರದ ವೇಳೆ ತುಳುನಾಡ ಬಾವುಟವನ್ನು ಬಳಕೆ ಮಾಡಿರುವುದು ಗಮನ ಸೆಳೆದಿದೆ. ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ನ ಆರ್. ಪದ್ಮರಾಜ್ ಇಬ್ಬರೂ ನಾಮಪತ್ರ ಸಲ್ಲಿಸುವಾಗ ಬೃಹತ್‌ ಮೆರವಣಿಗೆಯಲ್ಲಿ ತುಳು ಧ್ವಜಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಏ.3ರಂದು ಪದ್ಮರಾಜ್‌ ನಾಮಪತ್ರ ಸಲ್ಲಿಸಿದ್ದರೆ, ಏ.4ರಂದು ಬ್ರಿಜೇಶ್‌ ಚೌಟ ನಾಮಪತ್ರ ಸಲ್ಲಿಸಿದ್ದಾರೆ.

ಕಳೆದ ನಾಲ್ಕೂವರೆ ದಶಕಗಳಲ್ಲೇ ಮೊದಲ ಬಾರಿಗೆ ಎರಡೂ ಪ್ರಬಲ ಪಕ್ಷಗಳಲ್ಲಿ ಇಬ್ಬರೂ ಹೊಸ ಅಭ್ಯರ್ಥಿಗಳು. ಈ ಕಾರಣದಿಂದಲೇ ತಲೆತಲಾಂತರದಿಂದ ನಡೆಯುತ್ತ ಬಂದಿರುವ ಓಟಿನ ಬೇಟೆಯ ಸಿದ್ಧ ಮಾದರಿಯನ್ನು ಮೀರಿ ಇಬ್ಬರೂ ಅಭ್ಯರ್ಥಿಗಳು ಹೊಸತನದ ಪ್ರಚಾರ ವೈಖರಿಯನ್ನು ಅನುಸರಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ತುಳು ಧ್ವಜದ ರಹಸ್ಯವೇನು?:

ಕಡು ಕಂದು ಬಣ್ಣದಲ್ಲಿದ್ದು ನಡುವೆ ಬಿಳಿ ಬಣ್ಣದಲ್ಲಿ ಹುಣ್ಣಿಮೆ ಚಂದಿರ ಮತ್ತು ಅರ್ಧ ಚಂದಿರನ ವಿಶಿಷ್ಟ ವಿನ್ಯಾಸ ತುಳುನಾಡ ಬಾವುಟದ್ದು. ಶಕ್ತಿ ಪ್ರದರ್ಶನದ ಮೆರ‍ಣಿಗೆಯಲ್ಲಿ ಎದ್ದು ಕಾಣುವಂತೆ ತುಳು ಬಾವುಟ ಹಾರಿಸುವ ಮೂಲಕ ಅಭ್ಯರ್ಥಿಗಳು ತುಳು ಭಾಷಿಕ ಸಮುದಾಯಗಳ ಭಾವನೆಯನ್ನು ಸೆಳೆಯಲು ನಡೆಸಿರುವ ತಂತ್ರಗಾರಿಕೆ ಇದು.

ಇದುವರೆಗೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದಿರಲಿ, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು ಮತ್ತು ತುಳುವನ್ನು ರಾಜ್ಯಭಾಷೆಯನ್ನಾಗಿ ಮಾಡುವ ಬೇಡಿಕೆ ಈಡೇರಿಯೇ ಇಲ್ಲ. ಇದಕ್ಕಾಗಿ ದಶಕಗಳಿಂದ ಅನೇಕ ಹೋರಾಟಗಳು ನಡೆದಿವೆ, ಪ್ರತಿಭಟನೆಗಳಾಗಿವೆ, ಸಾಲು ಸಾಲು ಮನವಿ ಪತ್ರಗಳು ಸಲ್ಲಿಕೆಯಾಗಿವೆ. ಏನೇ ಮಾಡಿದರೂ ತುಳುನಾಡಿನ ಜನರ ಭಾವನೆಗಳಿಗೆ ಸರ್ಕಾರಗಳು ಮಣಿದಿಲ್ಲ. ಜತೆಗೆ ತುಳುನಾಡಿನ ಯುವಕರಿಗೆ ಇಲ್ಲಿ ಉದ್ಯೋಗ ಸಿಗದೆ ಪರವೂರುಗಳಿಗೆ ವಲಸೆ ಹೋಗುತ್ತಿದ್ದಾರೆ ಎನ್ನುವ ಅಂಶವೂ ಚುನಾವಣಾ ಪೂರ್ವದಲ್ಲಿ ಮುನ್ನೆಲೆಗೆ ಬಂದಿತ್ತು.

ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ ತುಳುಭಾಷೆಗೆ ಸ್ಥಾನಮಾನ ದೊರಕಿಸುವ ನಿಟ್ಟಿನಲ್ಲಿ ಪಕ್ಷಾತೀತ ಹೋರಾಟಕ್ಕೆ ಕೈಹಾಕಿದ್ದರು. ಚುನಾವಣೆ ಘೋಷಣೆಯಾಗುವ ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಅಂಚೆ ಕಾರ್ಡ್‌ ಅಭಿಯಾನವನ್ನೂ ನಡೆಸಿದ್ದರು. ಧಾರ್ಮಿಕ, ರಾಜಕೀಯ, ಕಲೆ ಇತ್ಯಾದಿ ವಿವಿಧ ಕ್ಷೇತ್ರಗಳ ಮುಖಂಡರು ಒಗ್ಗಟ್ಟಾಗಿ ತುಳುನಾಡಿನ ಸಮಸ್ಯೆಗಳು ಹಾಗೂ ಭಾಷೆಯ ಪರ ಗಟ್ಟಿಧ್ವನಿ ಮೊಳಗಿಸಿದ್ದರು. ಅದಾದ ತಕ್ಷಣ ಚುನಾವಣೆ ಬಂದಿದೆ. ತುಳುನಾಡಿನ ಜನರ ಭಾವನೆಗಳ ರೂಪಕವಾಗಿ ತುಳು ಬಾವುಟ ರಾರಾಜಿಸತೊಡಗಿದೆ. ಓಟಿನ ಬೇಟೆಯ ಪರಂಪರಾಗತ ಸಿದ್ಧ ಮಾದರಿ ಬದಲಾಗತೊಡಗಿದೆ.ಈ ಹಿಂದಿನ ಯಾವ ಚುನಾವಣೆ ಪ್ರಚಾರದಲ್ಲೂ ಅಭ್ಯರ್ಥಿಗಳು ತುಳುನಾಡ ಬಾವುಟ ಹಾರಿಸಿ ಗಮನ ಸೆಳೆದದ್ದು ನಡೆದಿಲ್ಲ. ನಾವು ತಿಂಗಳ ಹಿಂದಷ್ಟೆ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ತುಳುನಾಡು ಹಾಗೂ ಭಾಷೆಯ ಪರ ಅಲೆ ಎಬ್ಬಿಸಿದ್ದೇವೆ. ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇವೆ. ಜನರೂ ಇದೇ ವಿಷಯ ಮಾತನಾಡುವಂತಾಗಿದೆ. ಹಾಗಾಗಿ ಎರಡೂ ಪಕ್ಷಗಳಿಗೆ ಚುನಾವಣೆ ವೇಳೆ ತುಳುನಾಡು ನೆನಪಾಗಿ ತುಳು ಬಾವುಟ ಹಾರತೊಡಗಿದೆ ಎಂದು ತುಳು ಭಾಷೆ ಪರ ಹೋರಾಟ ಆರಂಭಿಸಿದ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಹೇಳುತ್ತಾರೆ.