ಈ ಚುನಾವಣೆಯಲ್ಲಿ ತುಳುನಾಡು ಗೆದ್ದಿದೆ: ಪದ್ಮರಾಜ್‌ ಪೂಜಾರಿ

| Published : Apr 28 2024, 01:19 AM IST

ಈ ಚುನಾವಣೆಯಲ್ಲಿ ತುಳುನಾಡು ಗೆದ್ದಿದೆ: ಪದ್ಮರಾಜ್‌ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನ ಹುಮ್ಮಸ್ಸು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ. ನಾಯಕರ ಜತೆಗೂಡಿ ಪ್ರತಿ ಬ್ಲಾಕ್‌ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಪಕ್ಷ ಸಂಘಟನೆಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಪದ್ಮರಾಜ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಈ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ- ತುಳುನಾಡು ಗೆದ್ದಿದೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌. ಪೂಜಾರಿ ಹೇಳಿದ್ದಾರೆ.

ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿ ಮನೆ, ಮನಗಳನ್ನು ತಲುಪುವ ಮೂಲಕ ಪ್ರೀತಿ ಹಂಚುವ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಜನರ ಉತ್ಸಾಹ, ಸ್ಪಂದನೆ ನೋಡಿದಾಗ ತುಳುನಾಡು ಗೆದ್ದಿದೆ ಅಂತ ಅನ್ನಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಅಪಪ್ರಚಾರ ಎಂದೂ ಆಗದಿರಲಿ:

ಬಿಜೆಪಿಯವರು ಈ ಚುನಾವಣೆಯಲ್ಲೂ ಅಪಪ್ರಚಾರ ಮಾಡುತ್ತಲೇ ಹೋದರು. ಯಾವುದೇ ಪಕ್ಷವಿರಲಿ, ಚುನಾವಣೆಯಲ್ಲಿ ಇಂಥ ಕಾರ್ಯ ಎಂದೂ ಆಗಬಾರದು. ಅಭಿವೃದ್ಧಿ ವಿಚಾರದಲ್ಲಿ ಚುನಾವಣೆ ಎದುರಿಸಬೇಕೇ ವಿನಾ ಇಲ್ಲಸಲ್ಲದ ಆರೋಪ ಮಾಡುವುದು ಯಾವ ಕಾಲಕ್ಕೂ ನಡೆಯಬಾರದು. ಈ ಚುನಾವಣೆ ಸಂದರ್ಭವೂ ಕಪಿತಾನಿಯೊ ಬೂತ್‌ ಘಟನೆ ಸೇರಿ ಒಂದೆರಡು ಕಡೆ ಬಿಜೆಪಿಯವರ ಹತಾಶೆಯ ಘಟನೆಗಳು ನಡೆದವು. ಇನ್ನಾದರೂ ಇಂಥ ಘಟನೆಗಳು ನಡೆಯದಂತೆ ಸಂಯಮ, ತಾಳ್ಮೆ ವಹಿಸಬೇಕಿದೆ. ಇದರಿಂದ ಯಾರಿಗಾದರೂ ಸಮಸ್ಯೆಯಾದರೆ ಅವರ ಕುಟುಂಬದವರು ತೊಂದರೆಗೆ ಒಳಗಾಗುತ್ತಾರೆ ಎನ್ನುವುದನ್ನು ಗಮನದಲ್ಲಿರಿಸಬೇಕು ಎಂದು ಪದ್ಮರಾಜ್‌ ಹೇಳಿದರು.1.20 ಲಕ್ಷಕ್ಕೂ ಅಧಿಕ ಅಂತರದ ಜಯ:

ಈ ಚುನಾವಣೆಯಿಂದ ಕಾಂಗ್ರೆಸ್‌ನ ಆತ್ಮವಿಶ್ವಾಸದ ಮಟ್ಟ ಖಂಡಿತವಾಗಿಯೂ ಹೆಚ್ಚಿದೆ. ಜನರಿಂದ ಇಷ್ಟೊಂದು ವಿಶ್ವಾಸವನ್ನು ನಿರೀಕ್ಷೆ ಮಾಡಿರಲಿಲ್ಲ. ಜಿಲ್ಲೆಯ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಈ ಚುನಾವಣೆ ತೋರಿಸಿಕೊಟ್ಟಿದೆ. 1.20 ಲಕ್ಷ ಮತಗಳಿಂದ ಜಯ ಸಾಧಿಸುವ ವಿಶ್ವಾಸವಿದೆ ಎಂದರು.ಪಕ್ಷ ಸಂಘಟನೆಗೆ ಆದ್ಯತೆ:

ಇದು ಆರಂಭ ಅಷ್ಟೇ. ಕಾಂಗ್ರೆಸ್‌ನ ಹುಮ್ಮಸ್ಸು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ. ನಾಯಕರ ಜತೆಗೂಡಿ ಪ್ರತಿ ಬ್ಲಾಕ್‌ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಪಕ್ಷ ಸಂಘಟನೆಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಪದ್ಮರಾಜ್‌ ಹೇಳಿದರು.

ಬಿಜೆಪಿಯವರು ಹಿಂದುತ್ವ, ಮೋದಿ ಎಂದರೇ ವಿನಾ ಅಭಿವೃದ್ಧಿ ಚರ್ಚೆ ಮಾಡಲಿಲ್ಲ. 33 ವರ್ಷಗಳಲ್ಲಿ ನೀವೇನು ಮಾಡಿದ್ದೀರಿ ಎಂಬುದಕ್ಕೆ ಉತ್ತರ ನೀಡಲಿಲ್ಲ. ನಾವು ಹಿಂದುತ್ವ ಎಂದರೆ ಏನೆಂಬುದನ್ನು ಜನರಿಗೆ ಹೇಳಿಕೊಟ್ಟೆವು, ನೈಜ ವಿಚಾರಗಳನ್ನು ತಿಳಿಸಿದೆವು. ಜನರು ನಮ್ಮನ್ನು ಸ್ವೀಕರಿಸಿದ್ದಾರೆ ಎಂದರು.

ಚುನಾವಣಾ ದಿನ ಸಂಸದ ನಳಿನ್‌ ಕುಮಾರ್‌ ಮುಖಾಮುಖಿಯಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷ ಬೇರೆ ಬೇರೆಯಾದರೂ ಪ್ರತಿಯೊಬ್ಬರಲ್ಲೂ ಮನುಷ್ಯತ್ವ ಬೇಕು. ಎದುರು ಸಿಕ್ಕಿದಾಗ ಮಾತನಾಡೋದು ಗೌರವಿಸೋದು ನಮ್ಮ ಸಂಸ್ಕೃತಿ, ಅದನ್ನು ಮಾಡಿದ್ದೇನೆ ಎಂದರು.

ಕಾಂಗ್ರೆಸ್‌ ಜಿಲ್ಲಾ ಚುನಾವಣಾ ಉಸ್ತುವಾರಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಚಿವ ಅಭಯಚಂದ್ರ ಜೈನ್‌, ಮುಖಂಡರಾದ ಅಭಯಚಂದ್ರ ಜೈನ್‌, ಶುಭೋದಯ ಆಳ್ವ, ಮೊಹಮ್ಮದ್‌ ಇದ್ದರು.