ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ ರಂಗ ದಸರಾದ ಉದ್ದೇಶ ಸ್ಥಳೀಯ ರಂಗಭೂಮಿ ಕಲಾವಿದರಿಗೆ ಉತ್ತೇಜನ ನೀಡುವುದು ಹಾಗೂ ನಾಟಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದೇ ಆಗಿದೆ ಎಂದರು. ಕಳೆದ ವರ್ಷ ತುಮಕೂರು ರಂಗ ದಸರಾದಲ್ಲಿ ಪೌರಾಣಿಕ ನಾಟಕಕ್ಕೆ ಆದ್ಯತೆ ನೀಡಲಾಗಿತ್ತು. ಈ ಬಾರಿ ಪೌರಾಣಿಕ ನಾಟಕಗಳ ಜೊತೆಗೆ ಸಾಮಾಜಿಕ ನಾಟಕಗಳಿಗೂ ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕನ್ನಡಪ್ರಭವಾರ್ತೆ, ತುಮಕೂರು
ರಂಗಭೂಮಿ ಎಂಬುದು ಒಂದು ಸಶಕ್ತ ಮಾಧ್ಯಮ ಎಂದು ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್. ಶಿವಣ್ಣ ಅಭಿಪ್ರಾಯಪಟ್ಟರು.ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಂಗ ದಸರಾ ಅಂಗವಾಗಿ ಚೇಳೂರಿನ ದೃಷ್ಟೇಶ್ವರ ಕೃಪಾಪೋಷಿತ ನಾಟಕ ಮಂಡಳಿಯವರು ಪ್ರಸ್ತುತಪಡಿಸಿದ ದೇವಿ ಮಹಾತ್ಮೆ ಯಕ್ಷಗಾನ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿ, ತುಮಕೂರು ಪೌರಾಣಿಕ ರಂಗಭೂಮಿ ತವರೂರು. ಪೌರಾಣಿಕ ನಾಟಕವೆಂದರೆ ಪುರಾಣಗಳಲ್ಲಿನ ಕಥೆಗಳು, ಪಾತ್ರಗಳು ಮತ್ತು ಘಟನೆಗಳನ್ನು ಆಧರಿಸಿ ರಚಿತವಾದ ನಾಟಕ ಎಂದು ಹೇಳಿದರು.
ಇದು ಧಾರ್ಮಿಕ, ನೈತಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುತ್ತದೆ. ಹಾಗೆಯೇ ಪ್ರೇಕ್ಷಕರಿಗೆ ಆದರ್ಶ ಜೀವನ ಮಾರ್ಗವನ್ನು ತೋರಿಸುತ್ತದೆ ಎಂದು ತಿಳಿಸಿದರು. ರಂಗ ದಸರಾಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಾಥ್ ನೀಡಿದ್ದಾರೆ. ಕಳೆದ ವರ್ಷದಿಂದ ವಿಜೃಂಭಣೆಯಿಂದ ರಂಗ ದಸರಾ ಆರಂಭವಾಗಿದೆ. ಈ ವರ್ಷ ವೈವಿಧ್ಯಮಯ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಾಟಕಗಳು ಪ್ರದರ್ಶನ ಕಾಣುವಂತಾಗಲಿ ಎಂದು ತಿಳಿಸಿದರು.ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ ರಂಗ ದಸರಾದ ಉದ್ದೇಶ ಸ್ಥಳೀಯ ರಂಗಭೂಮಿ ಕಲಾವಿದರಿಗೆ ಉತ್ತೇಜನ ನೀಡುವುದು ಹಾಗೂ ನಾಟಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದೇ ಆಗಿದೆ ಎಂದರು. ಕಳೆದ ವರ್ಷ ತುಮಕೂರು ರಂಗ ದಸರಾದಲ್ಲಿ ಪೌರಾಣಿಕ ನಾಟಕಕ್ಕೆ ಆದ್ಯತೆ ನೀಡಲಾಗಿತ್ತು. ಈ ಬಾರಿ ಪೌರಾಣಿಕ ನಾಟಕಗಳ ಜೊತೆಗೆ ಸಾಮಾಜಿಕ ನಾಟಕಗಳಿಗೂ ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕಲಾ ಮಾಧ್ಯಮದಲ್ಲಿ ತುಮಕೂರಿಗೆ ಬಹಳ ದೊಡ್ಡ ಹೆಸರಿದೆ. ಕರಾವಳಿಯಲ್ಲಿ ಯಕ್ಷಗಾನ ಇದ್ದ ಹಾಗೆ, ಉತ್ತರ ಕರ್ನಾಟಕದಲ್ಲಿ ಸಣ್ಣಾಟ, ದೊಡ್ಡಾಟ ಇದ್ದ ಹಾಗೆ ತುಮಕೂರು ಪೌರಾಣಿಕ ರಂಗಭೂಮಿಗೆ ಹೆಸರು ವಾಸಿಯಾಗಿದೆ. ಜಿಲ್ಲೆಯ ಎಲ್ಲಾ ೧೦ ತಾಲೂಕುಗಳಲ್ಲೂ ಒಂದಲ್ಲಾ ಒಂದು ನಾಟಕಗಳ ತಾಲೀಮು ಹಾಗೂ ಪ್ರದರ್ಶನ ನಡೆಯುತ್ತಲೇ ಇರುತ್ತದೆ ಎಂದು ತಿಳಿಸಿದರು.ಜಿಲ್ಲೆ ಪೌರಾಣಿಕ, ಜಾನಪದ, ಬುಡಕಟ್ಟು ಹೀಗೆ ವೈವಿಧ್ಯಮಯ ಕಲಾ ಪ್ರಕಾರಗಳಿಗೆ ಹೆಸರು ವಾಸಿಯಾಗಿರುವುದರಿಂದ ತುಮಕೂರಿಗೆ ಬಯಲು ಸೀಮೆ ರಂಗಾಯಣವನ್ನು ಸರ್ಕಾರ ಮಂಜೂರು ಮಾಡಬೇಕೆಂದು ತಿಳಿಸಿದರು. ಈಗಾಗಲೇ ಕರ್ನಾಟಕ ವಿವಿಧೆಡೆ ರಂಗಾಯಣಗಳು ಸಕ್ರಿಯವಾಗಿವೆ. ಬೆಂಗಳೂರು, ಕೋಲಾರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಒಳಗೊಂಡು ಬಯಲು ಸೀಮೆ ರಂಗಾಯಣ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈಗಾಗಲೇ ರಂಗದಸರಾದಲ್ಲಿ ಶಿವಸತಿಯರ ಕಲ್ಯಾಣ, ದಕ್ಷಯಜ್ಞ, ರತಿ ಮನ್ಮಥ ಕಲ್ಯಾಣ, ಕೌಂಡ್ಲಿಕನ ವಧೆ, ದೇವಿ ಮಹಾತ್ಮೆ ನಾಟಕಗಳು ಪ್ರದರ್ಶನಗೊಂಡಿದ್ದು ರಕ್ತ ಬೀಜಾಸುರ ವಧೆ, ಕುರುಕ್ಷೇತ್ರ, ಭಗವದ್ಗೀತೆ, ಕರ್ಣ ಕುಂತಿಯರ ಸಮಾಗಮ, ಶ್ರೀಕೃಷ್ಣ ವಿಧುರಾತಿಥ್ಯ, ಮುದ್ರಿಕಾ ಪ್ರಧಾನ, ಭೀಮ ಪ್ರತಿಜ್ಞೆ, ಛಲದೋಳ್ ದುರ್ಯೋಧನ, ಮೂರುವರೆ ವಜ್ರಗಳು, ಶ್ರೀಕೃಷ್ಣ ರಾಯಭಾರ, ಗೌತಮ ಬುದ್ಧ, ಜ್ಞಾನಜ್ಯೋತಿ ಅಂಬೇಡ್ಕರ್, ವೀರವನಿತೆ ಒನಕೆ ಓಬವ್ವ, ಕರ್ಣಕುಲಂ ಹಾಗೂ ಶ್ರೀಕೃಷ್ಣನ ಶಾಂತಿ ಸಂದೇಶ ನಾಟಕಗಳು ಪ್ರದರ್ಶನಗೊಳ್ಳಲಿದೆ ಎಂದರು.ವೇದಿಕೆಯಲ್ಲಿ ಎಂ.ವಿ. ನಾಗಣ್ಣ, ರಂಗರಾಜು ಬನಶಂಕರಿ, ನಂಜಪ್ಪ ಶೆಟ್ರು, ಬಿ.ಎಂ. ವೆಂಕಟೇಶ್, ಎಸ್. ರಾಜಣ್ಣ, ಪುಟ್ಟಬೋರಯ್ಯ, ರಾಮು, ಹೆಚ್.ಆರ್. ರಂಗಪ್ಪ, ಜಗನ್ನಾಥ ಪಟೇಲ್ ಮುಂತಾದವರಿದ್ದರು.