ಸಾರಾಂಶ
ಸಂಸ್ಥೆ ಚುನಾವಣೆಯ ಬಹಿರಂಗ ಪ್ರಚಾರ ಸಭೆ । ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಗುರಿ
ಕನ್ನಡಪ್ರಭ ವಾರ್ತೆ ಚನ್ನಗಿರಿತುಮ್ ಕೋಸ್ ಸಂಸ್ಥೆ ಉತ್ತಮವಾಗಿ ಬೆಳೆದಿದ್ದು ಈ ಸಂಸ್ಥೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಶಕ್ತಿ ಇಲ್ಲದೆ ಕಳೆದ ಐದು ವರ್ಷದಿಂದ ಯಾವುದೇ ಹೊಸ ಆದಾಯವಿಲ್ಲದೆ ಸೊರಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ತುಮ್ ಕೋಸ್ ಚುನಾವಣೆಯ ಬಹಿರಂಗ ಪ್ರಚಾರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ತುಮ್ ಕೋಸ್ ಸಂಸ್ಥೆಯ ವತಿಯಿಂದ ಸಂಸ್ಥೆಗೆ ಹೆಚ್ಚಿನ ಆದಾಯ ತರುವಂತಹ ಪೆಟ್ರೋಲ್ ಬಂಕ್, ಸೂಪರ್ ಮಾರ್ಕೆಟ್, ಸಂಸ್ಥೆಯ ಷೇರುದಾರ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಸಮುದಾಯ ಭವನ ಇಂತಹ ಹಲವಾರು ಹೊಸ ಯೋಜನೆಗಳನ್ನು ಪ್ರಾರಂಭಿಸಿದ್ದೆ ಎಂದರು.ಚನ್ನಗಿರಿಯಲ್ಲಿರುವ ಪೆಟ್ರೋಲ್ ಬಂಕ್‌ನಿಂದ ವರ್ಷಕ್ಕೆ 40ರಿಂದ 50 ಲಕ್ಷ ರು. ಆದಾಯ ಬರುತ್ತಿದ್ದು ಇಂತಹ ಪೆಟ್ರೋಲ್ ಬಂಕ್‌ಗಳನ್ನು ಸಂಸ್ಥೆಯ 7 ಬ್ರಾಂಚ್‌ಗಳಲ್ಲಿ ಮತ್ತು ಚನ್ನಗಿರಿ ಪಟ್ಟಣದ ಎರಡು ಕಡೆಗಳಲ್ಲಿ ಪ್ರಾರಂಭಿಸುವ ಉದ್ದೇಶವಿತ್ತು. ಆದರೆ ಇದಕ್ಕೆ ಅಡ್ಡಗಾಲು ಹಾಕಿದರು. ಇದರಿಂದ ಸಂಸ್ಥೆಗೆ ಪ್ರತಿವರ್ಷ ಸುಮಾರು 4 ಕೋಟಿ ರು. ಆದಾಯ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಅವಧಿಯಲ್ಲಿ ಆದ ಸಂಸ್ಥೆಯ ಪ್ರಗತಿಯನ್ನು ಸಹಿಸದ ಕೆಲವರು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಸಂಸ್ಥೆಯ ಆದಾಯವನ್ನು ಹೆಚ್ಚಿಸಿಕೊಂಡು ತಾಲೂಕಿನ ಜನತೆಗೆ ಅನುಕೂಲವಾಗುವಂತೆ ಸುಸಜ್ಜಿತ ಆಸ್ಫತ್ರೆಯನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.20ರಿಂದ 25 ಕೋಟಿ ರು. ವ್ಯವಹಾರವನ್ನು ನಡೆಸುತ್ತಿದ್ದ ಒಂದು ಸಾಮಾನ್ಯ ಸಂಸ್ಥೆಯನ್ನು 800ರಿಂದ 900 ಕೋಟಿ ರು. ವ್ಯವಹಾರ ಮಾಡುವ ಮಟ್ಟಕ್ಕೆ ತೆಗೆದುಕೊಂಡು ಹೋಗಿ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದ ಸಾಧನೆ ನಮ್ಮ ಹಿಂದೆ ಇದೆ ಎಂದರು.
ಎಚ್.ಎಸ್.ಶಿವಕುಮಾರ್ ತಂಡದ ಅಭ್ಯರ್ಥಿಗಳಾದ ಕಗತೂರು ಕೆ.ಜಿ.ಓಂಕಾರಮೂರ್ತಿ, ಆಕಳೀಕಟ್ಟೆ ಎಂ.ಎನ್.ಗಂಗಾಧರಪ್ಪ, ಭೈರನಹಳ್ಳಿ ಬಿ.ಚನ್ನಬಸಪ್ಪ, ಪಾಂಡೋಮಟ್ಟಿ ಕೆ.ಎನ್.ಪ್ರಭುಲಿಂಗಪ್ಪ, ಬಿಲ್ಲಹಳ್ಳಿ ಬಿ.ಎಸ್.ಬಸವರಾಜ್, ಹೊದಿಗೆರೆ ಹೆಚ್.ಎಸ್.ಮಂಜುನಾಥ್ ಹುಗ್ಗಿ, ಮೆಳನಾಯಕನಕಟ್ಟೆ ಎಂ.ಮಂಜುನಾಥ್, ನಾರಶೆಟ್ಟಿಹಳ್ಳಿ ಎಂ.ಈ.ಮೀನಾಕ್ಷಿ, ತಿಪ್ಪಗೊಂಡನಹಳ್ಳಿ ಟಿ.ವಿ.ರಾಜು, ಮಾಡಾಳ್ ಎನ್.ಲೋಕೇಶ್ವರ್, ಹರೋನಹಳ್ಳಿ ಜಿ.ಬಿ.ವಿಜಯ್ ಕುಮಾರ್, ಗೊಪ್ಪೇನಹಳ್ಳಿ ಹೆಚ್.ಎಸ್.ಶಿವಕುಮಾರ್, ಹನಕನಹಾಳ್ ಜಿ.ಆರ್.ಶಿವಕುಮಾರ್, ಲಿಂಗದಹಳ್ಳಿ ಎಲ್.ವಿ.ಶೋಭಾ ಸೇರಿದಂತೆ ಸಂಸ್ಥೆಯ ಷೇರುದಾರ ಮತದಾರರು ಹಾಜರಿದ್ದರು.