ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಸೇವೆ ಕಾಯಮಾತಿಗಾಗಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಪ್ರತಿಭಟನಾ ಧರಣಿಯು 34ನೇ ದಿನವು ಮುಂದುವರೆದಿದ್ದು, ಜನವರಿ 1 ರಂದು ಸಿದ್ಧಗಂಗಾ ಮಠದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ಅತಿಥಿ ಉಪನ್ಯಾಸಕರು ತೀರ್ಮಾನಿಸಿದ್ದಾರೆ.ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಅತಿಥಿ ಉಪನ್ಯಾಸಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು.
ಪಾದಯಾತ್ರೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದು, ಪೊಲೀಸ್ ಇಲಾಖೆ ಅನುಮತಿ ಹಾಗೂ ಆರೋಗ್ಯ ಇಲಾಖೆಯಿಂದ ಆ್ಯಂಬುಲೆನ್ಸ್ ಸೇರಿದಂತೆ ವಿವಿಧ ರೀತಿಯ ಕಮಿಟಿಗಳನ್ನು ಮಾಡಿಕೊಂಡು ಜ.1 ರಂದು ತ್ರಿವಿಧ ದಾಸೋಹ ಕ್ಷೇತ್ರ ಸಿದ್ಧಗಂಗಾ ಮಠದಿಂದ ಪಾದಯಾತ್ರೆ ಆರಂಭವಾಗಲಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ಧರ್ಮವೀರ ತಿಳಿಸಿದ್ದಾರೆ.ಪಾದಯಾತ್ರೆ ನಡೆಸಲು ಬೆಂಗಳೂರು ಪೊಲೀಸ್ ಮಹಾನಿರ್ದೇಶಕರಿಂದ ಅನುಮತಿಯನ್ನು ಈಗಾಗಲೇ ಪಡೆದಿದ್ದು, ಆರೋಗ್ಯ ಇಲಾಖೆಯಿಂದ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ರಾಜ್ಯಾದ್ಯಂತ ಸುಮಾರು ೩ ಸಾವಿರ ಅತಿಥಿ ಉಪನ್ಯಾಸಕರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಡಾಬಸ್‌ಪೇಟೆ, ನೆಲಮಂಗಲ ಮೂಲದ ಪಾದಯಾತ್ರೆ ಸಾಗಿ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶಗೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯುವುದಾಗಿ ಪ್ರತಿಭಟನಾ ನಿರತ ಅತಿಥಿ ಉಪನ್ಯಾಸಕರು ತಿಳಿಸಿದ್ದಾರೆ.
ಅನಾರೋಗ್ಯದಿಂದ ಕೆ.ಆರ್. ನಗರದ ಅತಿಥಿ ಉಪನ್ಯಾಸಕ ಪ್ರಕಾಶ್ ಎಂ.ಕೆ. ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಅತಿಥಿ ಉಪನ್ಯಾಸಕರು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸಿದರು.ನಂತರ ಮಾತನಾಡಿದ ಅತಿಥಿ ಉಪನ್ಯಾಸಕರ ಡಾ. ಕುಮಾರ್, ಅತಿಥಿ ಉಪನ್ಯಾಸಕರ ಬದುಕಿಗೆ ಆಸರೆ ಇಲ್ಲದಂತಾಗಿದೆ. ಇಂದು ನಿಧನರಾಗಿರುವ ಅತಿಥಿ ಉಪನ್ಯಾಸಕ ಪ್ರಕಾಶ್ ಅವರ ಕುಟುಂಬ ಬೀದಿ ಪಾಲಾಗಿದೆ. ನಾಳೆ ನಮ್ಮಗಳ ಬದುಕು ಮತ್ತು ಕುಟುಂಬಗಳ ಸ್ಥಿತಿಯೂ ಇದೇ ಆಗಲಿದೆ. ಸರ್ಕಾರ ಈ ಕೂಡಲೇ ನಮ್ಮ ಸೇವೆ ಖಾಯಮಾತಿ ಮಾಡಿ ಭದ್ರತೆ ಒದಗಿಸಬೇಕರು. ಇದರಿಂದ ನಮ್ಮ ಕುಟುಂಬಗಳಿಗೂ ಭದ್ರತೆ ಕಲ್ಪಿಸಿದಂತಾಗುತ್ತದೆ. ಹಾಗಾಗಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಿವಣ್ಣ ತಿಮ್ಲಾಪುರ್ ಮಾತನಾಡಿ, ಸರ್ಕಾರ ತಿಂಗಳು ಕಳೆದರೂ ನಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಸಿದ್ಧಗಂಗಾ ಮಠದಿಂದ ಐತಿಹಾಸಿಕ ಪಾದಯಾತ್ರೆ ಕೈಗೊಳ್ಳುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತೇವೆ. ಈಗಾಗಲೇ ಸಂಘದ ಜಿಲ್ಲಾಧ್ಯಕ್ಷ ಡಾ. ಧರ್ಮೀರ್, ಮಲ್ಲಿಕಾರ್ಜುನ್, ಶಂಕರ್ ಹಾರೋಗೆರೆ ಅವರು ಪೊಲೀಸ್ ಮಹಾನಿರ್ದೇಶಕರ ಅನುಮತಿ ಪತ್ರ ಪಡೆದು ನಮ್ಮ ಜಿಲ್ಲಾ ಕಮಿಟಿ ಪಾದಯಾತ್ರೆ ಕೈಗೊಳ್ಳಲು ಅಗತ್ಯ ಸಿದ್ಧತೆ ಕೈಗೊಂಡಿದ್ದೇವೆ ಎಂದರು.ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ್, ಶಂಕರ್ ಹಾರೋಗೆರೆ, ಕಾಂತರಾಜು, ಸುರೇಶ್. ಟಿ, ಶಂಕರ್, ಗಿರಿಜಮ್ಮ. ಟಿ.ಆರ್, ಅನಿತಾ, ವಿನುತಾ, ಯಶಸ್ವಿನಿ, ತೋಂಟಾರಾಧ್ಯ, ದೀಪಕ್, ಗಿರೀಶ್, ಮಹೇಶ್, ಶಶಿಕುಮಾರ್ ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.