ವನ್ಯಜೀವಿಗಳಿಂದ ಗಮನಸೆಳೆಯುತ್ತಿದೆ ತುಮಕೂರು

| Published : Oct 18 2023, 01:00 AM IST

ವನ್ಯಜೀವಿಗಳಿಂದ ಗಮನಸೆಳೆಯುತ್ತಿದೆ ತುಮಕೂರು
Share this Article
  • FB
  • TW
  • Linkdin
  • Email

ಸಾರಾಂಶ

ಹುಲಿಯ ಜಾಡೇ ಇಲ್ಲದಿದ್ದರೂ ಅದರ ಶವ ಸಿಗುತ್ತದೆ, ಬಾವಲಿಗಳನ್ನು ತಿನ್ನುವ ಚಿರತೆಗಳು ಕ್ಯಾಮೆರಾ ಕಣ್ಣಿಗೆ ಸಿಕ್ಕೇ ಬಿಡುತ್ತದೆ, ಅಪರೂಪದ ಚಿಂಕಾರ, ಕಾಡುಪಾಪಗಳ ವನ ಹೀಗೆ ಅಪರೂಪದ ವನ್ಯಜೀವಿಗಳ ಕಾರಣಕ್ಕಾಗಿ ತುಮಕೂರು ಸುದ್ದಿಯಲ್ಲಿದೆ.
ಉಗಮ ಶ್ರೀನಿವಾಸ್ ಕನ್ನಡಪ್ರಭ ವಾರ್ತೆ ತುಮಕೂರು ಹುಲಿಯ ಜಾಡೇ ಇಲ್ಲದಿದ್ದರೂ ಅದರ ಶವ ಸಿಗುತ್ತದೆ, ಬಾವಲಿಗಳನ್ನು ತಿನ್ನುವ ಚಿರತೆಗಳು ಕ್ಯಾಮೆರಾ ಕಣ್ಣಿಗೆ ಸಿಕ್ಕೇ ಬಿಡುತ್ತದೆ, ಅಪರೂಪದ ಚಿಂಕಾರ, ಕಾಡುಪಾಪಗಳ ವನ ಹೀಗೆ ಅಪರೂಪದ ವನ್ಯಜೀವಿಗಳ ಕಾರಣಕ್ಕಾಗಿ ತುಮಕೂರು ಸುದ್ದಿಯಲ್ಲಿದೆ. ಕೆಲ ತಿಂಗಳ ಹಿಂದೆ ಗುಬ್ಬಿ ತಾಲೂಕಿನ ಅಂಕಸಂದ್ರ ಅರಣ್ಯ ಪ್ರದೇಶದಲ್ಲಿ ಹುಲಿಯ ಶವವೊಂದು ಪತ್ತೆಯಾಗಿ ದೊಡ್ಡ ಅಚ್ಚರಿಗೆ ಕಾರಣವಾಗಿತ್ತು. ಹಾಗೆಯೇ ಮೊನ್ನೆ ಮೊನ್ನೆ ದೇವರಾಯನದುರ್ಗ ಅರಣ್ಯದಲ್ಲಿ ಬಾವಲಿಗಳನ್ನು ಶಿಕಾರಿಯಾಡಿದ ಚಿರತೆಯ ದೃಶ್ಯ ಕ್ಯಾಮೆರಾ ಕಣ್ಣಿಗೆ ಸಿಕ್ಕಿತ್ತು. ಅಪರೂಪದ ಚಿಂಕಾರಗಳು ಬುಕ್ಕಾಪಟ್ಟಣ ಅರಣ್ಯದಲ್ಲಿ ಪತ್ತೆಯಾಗುವುದರೊಂದಿಗೆ ತುಮಕೂರು ಸದಾ ಸುದ್ದಿಯಲ್ಲಿದೆ. ಕೋವಿಡ್ ವೇಳೆ ತುಮಕೂರು ಜಿಲ್ಲೆಯನ್ನೇ ಕಾಡಿದ್ದು ನರಹಂತಕ ಚಿರತೆಗಳು. ಅದರಲ್ಲೂ ಕುಣಿಗಲ್, ತುಮಕೂರು ಹಾಗೂ ಗುಬ್ಬಿ ತಾಲೂಕುಗಳಲ್ಲಿ ನರಹಂತಕ ಚಿರತೆಯಿಂದ ಐದು ಜನರು ಸಾವನ್ನಪ್ಪಿದ್ದರು. ಕಡೆಗೂ ನರಹಂತಕ ಚಿರತೆಯನ್ನು ಸೆರೆ ಹಿಡಿದಿದ್ದರೂ ಚಿರತೆಗಳ ಸಂಖ್ಯೆ ಮತ್ತೆ ಗಣನೀಯವಾಗಿ ಏರುತ್ತಲೇ ಇದೆ. ಬುಕ್ಕಾಪಟ್ಟಣ ಬಳಿ ಅಪರೂಪದ ಜಿಂಕೆ ಜಾತಿಗೆ ಸೇರಿದ ಚಿಂಕಾರ ಪತ್ತೆಯಾಗಿ ದೊಡ್ಡ ಮಟ್ಟದ ಗಮನಸೆಳೆದಿತ್ತು. ಇನ್ನು ಮಧುಗಿರಿ ತಾಲೂಕಿನ ಮೈದನಹಳ್ಳಿಯಲ್ಲಿ ಕೃಷ್ಣಮೃಗಗಳ ದೊಡ್ಡ ಹಿಂಡೇ ಇದೆ. ತುಮಕೂರು ತಾಲೂಕಿನ ನಾಗವಲ್ಲಿಯಲ್ಲಿ ಕಾಡುಪಾಪಗಳ ವನವೇ ಇದೆ. ಈ ಜಾಗವನ್ನು ಸಂರಕ್ಷಿತ ಕಾಡು ಪಾಪ ವಲಯ ಮಾಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅರಣ್ಯ ಇಲಾಖೆ ಸಜ್ಜಾಗುತ್ತಿದೆ. ಕೆಲ ವರ್ಷಗಳ ಹಿಂದೆ ಆನೆಗಳ ಹಿಂಡು ತುಮಕೂರು ಜಿಲ್ಲೆಗೆ ಬರುತ್ತಿದ್ದವು. ಬನ್ನೇರುಘಟ್ಟ, ಸಾವನದುರ್ಗ ಮೂಲಕ ತುಮಕೂರು ಗ್ರಾಮಾಂತರದಿಂದ ಮಲ್ಲಸಂದ್ರ ಕೆರೆಯಲ್ಲಿ ಬೀಡು ಬಿಡುತ್ತಿತ್ತು. ಒಂದೊಮ್ಮೆಯಂತೂ ತುಮಕೂರು ನಗರದಲ್ಲೇ ಕಾಡಾನೆಗಳು ಸಂಚಾರ ಮಾಡಿ ಆತಂಕ ಮೂಡಿಸಿತ್ತು. ಅರಣ್ಯ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಪ್ರಾಣಿಗಳು ಕಾಡು ತೊರೆದು ನಾಡಿನತ್ತ ಪಯಣ ಬೆಳೆಸುತ್ತಿದೆ. ಚಿರತೆಗಳಂತೂ ಊಹೆಗೂ ಸಿಲುಕದ ಹಾಗೆ ಸಂತತಿ ಹೆಚ್ಚಾಗುತ್ತಿದೆ. ಕುರಿ ಮೇಲೆ ಎಗರಿ ಕುರಿ ಹೊತ್ತೊಯ್ಯುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಒಟ್ಟಾರೆಯಾಗಿ ತುಮಕೂರು ಜಿಲ್ಲೆ ಕಳೆದ ಮೂರು ನಾಲ್ಕು ವರ್ಷಗಳಿಂದ ವನ್ಯಜೀವಿಗಳ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ಬಯಲು ಸೀಮೆಯಾದ ತುಮಕೂರು ಜಿಲ್ಲೆಯಲ್ಲಿ ಸಂರಕ್ಷಿತ ಅರಣ್ಯ ಹೆಚ್ಚಾಗಿದ್ದು, ತಿಮ್ಲಾಪುರದಲ್ಲಿ ವನ್ಯಜೀವಿ ಧಾಮವಿದೆ, ಹಾಗೆಯೇ ಮೈದನಹಳ್ಳಿಯಲ್ಲಿ ಕೃಷ್ಣಮೃಗ ಧಾಮವಾಗಿ ಸರ್ಕಾರ ಘೋಷಿಸಿದೆ. ತುಮಕೂರು ತಾಲೂಕು ನಾಗವಲ್ಲಿಯಲ್ಲಿ ಕಾಡುಪಾಪಗಳು ಹೆಚ್ಚಾಗಿರುವುದರಿಂದ ಕಾಡುಪಾಪಗಳ ಸಂರಕ್ಷಿತ ವಲಯ ಘೋಷಣೆಗೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ. ಒಟ್ಟಾರೆಯಾಗಿ ಬಯಲುಸೀಮೆ ತುಮಕೂರು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಸಂತತಿ ಹೆಚ್ಚುತ್ತಿರುವುದು ವನ್ಯಜೀವಿ ಪ್ರಿಯರಲ್ಲಿ ಸಂತಸ ಮೂಡಿಸುತ್ತಿದೆ.