ತುಮಕೂರು: ಟಿಕೆಟ್ ವಿಷಯದಲ್ಲಿ ಮುಂದುವರೆದ ಮುಸುಕಿನ ಗುದ್ದಾಟ

| Published : Feb 16 2024, 01:48 AM IST

ತುಮಕೂರು: ಟಿಕೆಟ್ ವಿಷಯದಲ್ಲಿ ಮುಂದುವರೆದ ಮುಸುಕಿನ ಗುದ್ದಾಟ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ಎಂಬ ಮುಸುಕಿನ ಗುದ್ದಾಟ ಮುಂದುವರೆದಿದ್ದು ತುಮಕೂರು ಗ್ರಾಮಾಂತರ ಶಾಸಕ ಸುರೇಶಗೌಡ ಮಾಧುಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ಎಂಬ ಮುಸುಕಿನ ಗುದ್ದಾಟ ಮುಂದುವರೆದಿದ್ದು ತುಮಕೂರು ಗ್ರಾಮಾಂತರ ಶಾಸಕ ಸುರೇಶಗೌಡ ಮಾಧುಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧುಸ್ವಾಮಿ ಅವರು ಬಿಜೆಪಿ ಬಾವುಟನೇ ಕಟ್ಟಿಲ್ಲ ಎನ್ನುವ ಮೂಲಕ ಟಿಕೆಟ್ ವಿಚಾರದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸಂಸದ ಜಿ.ಎಸ್. ಬಸವರಾಜು ಅವರು ಯಾರೋ ಒಬ್ಬರ ಹೆಸರು ಹೇಳಿಕೊಂಡು ಓಡಾಡಬಾರದು ಎಂದು ಪರೋಕ್ಷವಾಗಿ ಸೋಮಣ್ಣಗೂ ಟಾಂಗ್ ನೀಡಿದ್ದಾರೆ.

ಸೋಮಣ್ಣನವರು 2019 ರ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಉಸ್ತುವಾರಿಯಾಗಿದ್ದರು. ಹೀಗಾಗಿ ಅವರಿಗೆ ಸಂಪರ್ಕವಿದೆ. ಹಾಗಾಗಿ ಇಲ್ಲಿ ಓಡಾಡುತ್ತಿದ್ದಾರೆ ಅಷ್ಟೇ. ಅಲ್ಲದೇ ಸೋಮಣ್ಣ ನನಗೆ ಪಾರ್ಲಿಮೆಂಟ್ ಟಿಕೆಟ್ ಬೇಡ ಎಂದು ಹೇಳಿದ್ದಾರೆ ಎಂದರು.

ಮುದ್ದಹನುಮೇಗೌಡರು ಇನ್ನು ಬಿಜೆಪಿಯಲ್ಲೇ ಇದ್ದಾರೆ. ಲೋಕಸಭೆ ಟಿಕೆಟ್ ರಾಜ್ಯದಲ್ಲಿ ನಿರ್ಧಾರವಾಗುವುದಿಲ್ಲ. ನಡ್ಡ, ಅಮಿತ್ ಶಾ ಹಾಗೂ ಮೋದಿಜೀ ಅವರು ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ನಿರ್ಧರಿಸುತ್ತಾರೆ ಎಂದರು.

ಮುದ್ದಹನುಮೇಗೌಡರಿಗೆ ಹೋಗಬೇಡಿ, ನ್ಯಾಯ ಸಿಗುತ್ತೆ ಅಂತ ವಿನಂತಿ ಮಾಡಿದ್ದೆ. ಆದರೂ ಅವರು ಹೋಗಿದ್ದಾರೆ. ಆದರೆ ಅವರಿನ್ನು ಕಾಂಗ್ರೆಸ್ ಸೇರ್ಪಡೆಯಾಗಿಲ್ಲ. ಕಾದು ನೋಡೋಣ ಏನಾಗುತ್ತದೆ ಎಂದರು. ಅಲ್ಲದೇ ಮುದ್ದಹನುಮೇಗೌಡರು ಕೂಡ ಕಾಂಗ್ರೆಸ್ ಸೇರುವುದಾಗಿ ಎಲ್ಲೂ ಹೇಳಿಲ್ಲ ಎಂದರು.

ಮುದ್ದಹನುಮೇಗೌಡರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಬೇಕು ಅನ್ನೋದು ರಾಜಣ್ಣನವರ ಅಭಿಪ್ರಾಯ. ಅಲ್ಲದೇ ಅವರೇ ಹೈಕಮಾಂಡ್ ಗೆ ಕೇರ್ ಮಾಡುವುದಿಲ್ಲ ಅಂತಿದ್ದಾರೆ.‌ ಮತ್ತೆ ಟಿಕೆಟ್ ಕೊಡೋರು ಯಾರು ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ್‌ ಕೂಡ ಟಿಕೆಟ್ ಕೊಡ್ತೀವಿ ಅಂತ ಹೇಳಿಲ್ಲ ಎಂದರು.

ಪಕ್ಷವೇ ಸುಪ್ರೀಂ ಎಂದ ಸುರೇಶಗೌಡ ಅವರು ಮಾಧುಸ್ವಾಮಿ ಎಲ್ಲಿ ಇದ್ದರು. ಹೋದ ಸಲ ಬಿಜೆಪಿಗೆ ಬಂದರು. ಕಿರಣಕುಮಾರ್‌ ಅವರನ್ನು ಕಳೆದುಕೊಂಡು ಪಕ್ಷ ಮಾಧುಸ್ವಾಮಿಗೆ ಟಿಕೆಟ್ ನೀಡಿತು. ಪಕ್ಷ ನಿರ್ಧಾರ ಮಾಡಿದ್ದಕ್ಕೆ ಸಚಿವರಾದರು. ಯಾವತ್ತೂ ಪಕ್ಷದ ಬಾವುಟ ಕಟ್ಟಡ ಮಾಧುಸ್ವಾಮಿ ಒಡಕು ಮಾತುಗಳನ್ನಾಡಬಾರದು ಎಂದರು.

ಅಮಿತ್ ಶಾ ಅವರು 28 ಕ್ಷೇತ್ರದಲ್ಲೂ ಸ್ಟ್ರಾಂಗ್ ಕ್ಯಾಂಡಿಯೇಟ್ ಹಾಕ್ತೀವಿ ಅಂತ ಹೇಳಿದ್ದಾರೆ. ಗೆಲ್ಲುವಂತಹ ಕ್ಯಾಂಡಿಯೇಟ್ ಗೆ ಅವಕಾಶ ಕೊಡುತ್ತಾರೆಂಬ ನಂಬಿಕೆಯಿದೆ ಎಂದರು.

ಸೋತವರಿಗೆ ಟಿಕೆಟ್ ಕೊಡುತ್ತಾರೋ ಇಲ್ಲವೋ ಎಂಬುದು ಪಕ್ಷದಲ್ಲಿ ಚರ್ಚೆ ಆಗುತ್ತಿದೆ. ಮಾಧುಸ್ವಾಮಿ, ಸಿ.ಟಿ. ರವಿ, ಸೋಮಣ್ಣ ಸೇರಿದ್ದಂತೆ ತುಂಬಾ ಜನ ಸೋತಿದ್ದಾರೆ ಎಂದರು.

ನಾನು ಲೋಕಸಭೆಗೆ ಸ್ಪರ್ಧಿಯಲ್ಲ ಎಂದು ಸ್ಪಷ್ಟಪಡಿಸಿದ ಸುರೇಶಗೌಡರು ಮುದ್ದಹನುಮೇಗೌಡರು ಶೇ.90 ಕಾಂಗ್ರೆಸ್ ನತ್ತ ಹೋಗಿದ್ದಾರೆ. ಶೇ.10 ಬಿಜೆಪಿಯಲ್ಲಿದ್ದಾರೆ.‌ ಆದರೆ ಕಾಂಗ್ರೆಸ್‌ನವರು‌ ಶೇ.90 ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಬಾರದು ಅಂತ ಇದ್ದಾರೆ.‌ ಶೇ.10 ಟಿಕೆಟ್ ಕೊಡ್ಬೇಕು ಅಂತ ಇದ್ದಾರೆ ಎಂದರು.